ಬಳ್ಳಾರಿ: ನಗರದ ಸಂಗಮ ವೃತ್ತದಿಂದ ಕೆಇಬಿ ಹಳೆ ಕಚೇರಿವರೆಗೆ ರಸ್ತೆ ನಿರ್ಮಿಸಬೇಕು ಎಂದು ಒತ್ತಾಯಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಸದಸ್ಯರು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಬಳ್ಳಾರಿ ನಗರವು ಹತ್ತಾರು ಸಮಸ್ಯೆಗಳ ಆಗರವಾಗಿದೆ. ಗುಂಡಿಗಳಿಂದ ತುಂಬಿರುವ ರಸ್ತೆಗಳು, ನಗರಾದ್ಯಂತ ಧೂಳಿನ ವಾತಾವರಣ ಸೃಷ್ಟಿಸಿದೆ. ಸ್ವಚ್ಛತೆಯ ಅಭಾವ, ಬೀದಿನಾಯಿಗಳ ಬಿಡಾಡಿ ದನಗಳ ಉಪಟಳ ಎದ್ದು ಕಾಣುತ್ತದೆ. ಬಳ್ಳಾರಿ ನಗರದಲ್ಲಿ ಆದ್ಯತೆಗನುಗುಣವಾಗಿ ಯೋಜನಾಬದ್ಧವಾಗಿ ಯಾವ ಕಾಮಗಾರಿಗಳು ನಡೆಯುತ್ತಿಲ್ಲ. ನಿರ್ವಹಣೆ ಎನ್ನುವುದು ಶೂನ್ಯವಾಗಿದೆ. ನಗರಕ್ಕೆ ಕುಡಿಯುವ ನೀರಿನ ಯೋಜನೆಗೆ ₹160 ಕೋಟಿ ವಿನಿಯೋಗಿಸಿದರೂ ಇಂದಿಗೂ ಕುಡಿಯುವ ನೀರಿನ ನಳಗಳಲ್ಲಿ ಚರಂಡಿ ನೀರು ಮಿಶ್ರಣವಾಗಿ ಬರುತ್ತದೆ ಎಂದು ಸಾರ್ವಜನಿಕರು ದೂರುತ್ತಲೇ ಇದ್ದಾರೆ. ನಗರ ನಿವಾಸಿಗಳಿಗೆ ಶುದ್ಧ ಕುಡಿವನೀರು ಪೂರೈಕೆಯ ಕೆಲಸವೂ ಈವರೆಗೆ ಆಗಿಲ್ಲ. ನಗರಕ್ಕೆ ಅತ್ಯಾವಶ್ಯಕವಾದ ವರ್ತುಲ ರಸ್ತೆ ಇಲ್ಲಿಯವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಎಂದರು.
ವರ್ತುಲ ರಸ್ತೆಯಾಗುವವರೆಗೆ ಬಳ್ಳಾರಿ ನಗರದಲ್ಲಿ ಸಂಚರಿಸುವ ಭಾರೀ ವಾಹನಗಳನ್ನು ನಿಯಂತ್ರಿಸಬೇಕು. ವಡ್ಡರಬಂಡೆ ಮೋರಿಗೆ ಸೇತುವೆ ನಿರ್ಮಿಸಬೇಕು. ಮಹಾನಗರ ಪಾಲಿಕೆಗೆ ಅವಶ್ಯಕ ಸಂಖ್ಯೆಯಲ್ಲಿ ಸಫಾಯಿ ಕರ್ಮಚಾರಿಗಳನ್ನು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ನಗರದಲ್ಲಿ ಈಗಾಗಲೇ ಕೈಗೊಂಡ ಕಾಮಗಾರಿಗಳನ್ನು ಸುಧಾಕ್ರಾಸ್ ಸೇತುವೆ ಸಹಿತವಾಗಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ನಗರದಲ್ಲಿ ಯಾವುದೇ ಕಾಮಗಾರಿ ಕೈಗೊಂಡರೂ ಕಾನೂನುಬದ್ಧವಾಗಿ ಸಾರ್ವಜನಿಕರಿಗೆ ಗೋಚರವಾಗುವ ಸ್ಥಳದಲ್ಲಿ ಎಲ್ಲ ವಿವರಗಳನ್ನು (ಗುತ್ತಿಗೆದಾರರ ಹೆಸರು, ವೆಚ್ಚ, ಕಾಲಾವಧಿ ಕಾಮಗಾರಿ ವಿವರ) ಫಲಕಗಳನ್ನು ಹಾಕಬೇಕು. ಬೀದಿ ನಾಯಿಗಳು ಹಾಗೂ ಬಿಡಾಡಿ ದನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಸತ್ಯನಾರಾಯಣಪೇಟೆ ಕೆಳ ಸೇತುವೆಯಲ್ಲಿ ಚರಂಡಿ ಹರಿಯದಂತೆ ಸೂಕ್ತಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಹೋರಾಟ ಸಮಿತಿಯ ಸಂಚಾಲಕ ಆರ್.ಸೋಮಶೇಖರಗೌಡ, ಎ.ದೇವದಾಸ್, ಶಾಂತಾ ಇದ್ದರು.