ಪ್ರಮಾಣಪತ್ರ: ತಂತ್ರಾಂಶದ ದೋಷ ಸರಿಪಡಿಸಲು ಆಗ್ರಹ

KannadaprabhaNewsNetwork |  
Published : Aug 25, 2026, 02:45 AM IST
ಸರಿಯಾದ ಪ್ರಮಾಣಪತ್ರ ವಿತರಿಸುವಂತೆ ಆಗ್ರಹಿಸಿ ಸೋಮವಾರ ಕುಷ್ಟಗಿ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿರುವ ತಾಲೂಕಿನ ಉದ್ಯೋಗಾಕಾಂಕ್ಷಿಗಳು ಜಾತಿ ಮತ್ತು ಆದಾಯ ಪ್ರಮಾಣಪತ್ರ ವಿತರಣಾ ತಂತ್ರಾಂಶದಲ್ಲಿನ ತಾಂತ್ರಿಕ ದೋಷ ಸರಿಪಡಿಸಿ, ಸರಿಯಾದ ಪ್ರಮಾಣಪತ್ರ ವಿತರಿಸುವಂತೆ ಸೋಮವಾರ ಕುಷ್ಟಗಿ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಅವರಿಗೆ ಮನವಿ ಸಲ್ಲಿಸಿದರು.

ಕುಷ್ಟಗಿ: ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿರುವ ತಾಲೂಕಿನ ಉದ್ಯೋಗಾಕಾಂಕ್ಷಿಗಳು ಜಾತಿ ಮತ್ತು ಆದಾಯ ಪ್ರಮಾಣಪತ್ರ ವಿತರಣಾ ತಂತ್ರಾಂಶದಲ್ಲಿನ ತಾಂತ್ರಿಕ ದೋಷ ಸರಿಪಡಿಸಿ, ಸರಿಯಾದ ಪ್ರಮಾಣಪತ್ರ ವಿತರಿಸುವಂತೆ ಸೋಮವಾರ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಪ್ರಮುಖರು, ಶಿಕ್ಷಕರ ನೇಮಕಾತಿಗೆ ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿರುವ ಅಭ್ಯರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪ್ರಮಾಣಪತ್ರದ ಉದ್ದೇಶದ ಕಾಲಂನಲ್ಲಿ ‘ನೌಕರಿ’ ಎಂದು ಆಯ್ಕೆ ಮಾಡಲಾಗುತ್ತಿದೆ. ಆದರೆ ಪ್ರಮಾಣಪತ್ರ ವಿತರಿಸುವ ಸಂದರ್ಭದಲ್ಲಿ ಅದರಲ್ಲಿ ‘ವಿದ್ಯಾಭ್ಯಾಸ’ ಎಂದು ನಮೂದಾಗುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದರು.

ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರದ ಉದ್ದೇಶಕ್ಕೂ ಮಹತ್ವವಿದೆ. ‘ವಿದ್ಯಾಭ್ಯಾಸ’ ಉದ್ದೇಶದ ಪ್ರಮಾಣಪತ್ರವನ್ನು ನೇಮಕಾತಿಗೆ ಪರಿಗಣಿಸದಿರುವ ಸಾಧ್ಯತೆ ಇರುವುದರಿಂದ ಅಭ್ಯರ್ಥಿಗಳು ಆತಂಕಗೊಂಡಿದ್ದಾರೆ. ತಂತ್ರಾಂಶದ ದೋಷದಿಂದಾಗಿ ತಮ್ಮ ತಪ್ಪಿಲ್ಲದಿದ್ದರೂ ನೇಮಕಾತಿ ಅರ್ಜಿ ತಿರಸ್ಕೃತವಾಗಬಹುದು ಎಂಬ ಭೀತಿ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕೆಲವು ಅಭ್ಯರ್ಥಿಗಳು ತಮ್ಮ ಹಳೆಯ ಪ್ರಮಾಣಪತ್ರಗಳನ್ನು ರದ್ದುಪಡಿಸಿ, ಶಿಕ್ಷಕರ ನೇಮಕಾತಿಗೆ ಅಗತ್ಯವಿರುವ ‘ನೌಕರಿ’ ಉದ್ದೇಶದ ಪ್ರಮಾಣಪತ್ರಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಹೊಸದಾಗಿ ಅರ್ಜಿ ಸಲ್ಲಿಸಿದ ನಂತರವೂ ಪ್ರಮಾಣಪತ್ರದಲ್ಲಿ ‘ವಿದ್ಯಾಭ್ಯಾಸ’ ಎಂದೇ ನಮೂದಾಗುತ್ತಿರುವುದರಿಂದ ಸಮಸ್ಯೆ ಮುಂದುವರಿದಿದೆ.

ತಾಲೂಕಿನ ಗ್ರಾಮೀಣ ಭಾಗದ ಅನೇಕ ಯುವಕರು ಹಲವು ವರ್ಷಗಳಿಂದ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಪ್ರಮಾಣಪತ್ರದ ತಾಂತ್ರಿಕ ದೋಷದಿಂದ ಅರ್ಜಿ ಸಲ್ಲಿಸುವ ಅವಕಾಶವೇ ತಪ್ಪಿಹೋದರೆ ಅಭ್ಯರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಲಿದೆ. ಆದ್ದರಿಂದ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಬೇಕು ಎಂದು ಮನವಿ ಮಾಡಿದರು.

ಪ್ರಮಾಣಪತ್ರ ವಿತರಣಾ ತಂತ್ರಾಂಶದಲ್ಲಿನ ಸಮಸ್ಯೆಯನ್ನು ಕಂದಾಯ ಇಲಾಖೆಯ ಉನ್ನತ ಮಟ್ಟದ ತಾಂತ್ರಿಕ ವಿಭಾಗದ ಗಮನಕ್ಕೆ ತಂದು ಕೂಡಲೇ ಪರಿಹರಿಸಬೇಕು. ‘ನೌಕರಿ’ ಉದ್ದೇಶಕ್ಕಾಗಿ ಅರ್ಜಿ ಸಲ್ಲಿಸಿರುವ ಎಲ್ಲ ಅಭ್ಯರ್ಥಿಗಳಿಗೆ ಸರಿಯಾದ ನಮೂನೆಯ ಜಾತಿ ಮತ್ತು ಆದಾಯ ಪ್ರಮಾಣಪತ್ರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ತಾಂತ್ರಿಕ ದೋಷದಿಂದ ಯಾವುದೇ ಅಭ್ಯರ್ಥಿಗೆ ಅನ್ಯಾಯವಾಗದಂತೆ ನೇಮಕಾತಿ ಪ್ರಕ್ರಿಯೆಯಲ್ಲಿ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಮನವಿ ಸ್ವೀಕರಿಸಿದರು. ಶಿಕ್ಷಕರ ನೇಮಕಾತಿ ಆಕಾಂಕ್ಷಿಗಳಾದ ಛತ್ರಪ್ಪ ಮೇಗೂರು, ಸಂಗಪ್ಪ ಅಂಗಡಿ, ಶ್ರೀಕಾಂತ್ ಕಿರಗಿ, ಮಾನಪ್ಪ ಮದಲಗಟ್ಟಿ, ಮಲ್ಲೇಶ ನಿಡಗುಂದಿ, ಶ್ರೀಧರ ಚಳ್ಳಾರಿ, ರುದ್ರಗೌಡ ಬಿಜ್ಜಳ, ನಾಗರಾಜ ಬಂಡಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿತ್ಯವೂ ಸೂರ್ಯೋಪಾಸನೆ ನಡೆಯಲಿ: ಸ್ವರ್ಣವಲ್ಲೀ ಶ್ರೀ
ಸಿದ್ಧಗೊಳ್ಳುತ್ತಿವೆ ತರಹೇವಾರಿ ಗಣೇಶನ ಮೂರ್ತಿಗಳು