ಸೂರ್ಯೋಪಾಸನೆ ನಿತ್ಯ ಕರ್ತವ್ಯವಾದರೆ ಆರೋಗ್ಯ ಆಯುಷ್ಯ ಪ್ರಾಪ್ತಿಯಾಗುತ್ತದೆ.
ಕನ್ನಡಪ್ರಭ ವಾರ್ತೆ ಶಿರಸಿ
ಸೂರ್ಯೋಪಾಸನೆ ನಿತ್ಯ ಕರ್ತವ್ಯವಾದರೆ ಆರೋಗ್ಯ, ಆಯುಷ್ಯ ಪ್ರಾಪ್ತಿಯಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ೩೬ನೇ ಹಾಗೂ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳ ೩ನೇ ಚಾತುರ್ಮಾಸ್ಯದ ಸಂದರ್ಭ ಶ್ರೀ ಸ್ವರ್ಣವಲ್ಲೀಯಲ್ಲಿ ಶ್ರೀ ಗುರುಗಳ ಸೇವೆಯಲ್ಲಿ ತೊಡಗಿಕೊಂಡ ಇಸಳೂರು ಸೀಮಾ ಸಮಸ್ತ ಶಿಷ್ಯಬಳಗ, ಮಾತೆಯರು ಹಾಗೂ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನುಡಿದರು.
ಇಸಳೂರು ಸೀಮೆ ಎಂದಾಗ ನಮಗೆ ತಕ್ಷಣವೇ ನೆನಪಿಗೆ ಬರುವುದು ಶ್ರೀ ಸೂರ್ಯನಾರಾಯಣ ದೇವರ ದೇವಸ್ಥಾನ. ಏಕೆಂದರೆ, ಇಲ್ಲಿಂದ ತೀರಾ ಪೂರ್ವ ದಿಕ್ಕಿಗೆ ಈ ಸೀಮೆ ಬರುತ್ತದೆ. ಸೂರ್ಯನಾರಾಯಣನ ಉಪಾಸನೆಯು ಪ್ರತಿಯೊಬ್ಬರ ನಿತ್ಯದ ಕರ್ತವ್ಯವಾಗಿದೆ. ಮುಖ್ಯವಾಗಿ ಸಂಧ್ಯಾ ಕಾಲದಲ್ಲಿ ನಿತ್ಯವೂ ಸೂರ್ಯೋಪಾಸನೆ ನಡೆಯಬೇಕು. ಇದರಿಂದ ಮಾನವನಿಗೆ ಅಪಾರವಾದ ಪ್ರಯೋಜನಗಳಿವೆ ಎಂದರು.ಅವುಗಳಲ್ಲಿ ಆಯುಷ್ಯ ಮತ್ತು ಆರೋಗ್ಯಗಳು ಅತ್ಯಂತ ಮುಖ್ಯವಾದವುಗಳು. ಪ್ರತಿಯೊಬ್ಬನಿಗೂ ನನಗೆ ಆರೋಗ್ಯ ಬೇಕು ಎನ್ನುವ ಅಪೇಕ್ಷೆ ಇದ್ದೇ ಇರುತ್ತದೆ. ಏಕೆಂದರೆ ಆರೋಗ್ಯವೇ ಭಾಗ್ಯ. ಆರೋಗ್ಯ ಸರಿಯಿದ್ದರೆ ಮಾತ್ರ ಉಳಿದ ಎಲ್ಲ ಸಾಧನೆಗಳೂ ಸಾಧ್ಯವಾಗುತ್ತವೆ.
ನಿತ್ಯವೂ ಕನಿಷ್ಠ ಎರಡು ಬಾರಿಯಾದರೂ ಬೆಳಗಿನ ಸಂಧ್ಯಾಕಾಲ ಹಾಗೂ ಸಾಯಂಕಾಲದ ಸಂಧ್ಯಾಕಾಲದಲ್ಲಿ ಸೂರ್ಯನಾರಾಯಣನ ಉಪಾಸನೆಯು ಆಗುತ್ತಿರಬೇಕು ಎಂದರು.ಆ ಕಣ್ಣು ಎಂಬ ಇಂದ್ರಿಯಕ್ಕೆ ಅನುಗ್ರಹ ಕೊಡುವ ದೇವತೆಯೇ ಸೂರ್ಯನಾರಾಯಣ. ಇದಕ್ಕೆ ಸಂಬಂಧಿಸಿದಂತೆ ಅಕ್ಷಿ ಉಪನಿಷತ್ತು ಎಂಬ ಉಪನಿಷತ್ತಿದೆ. ಆ ಉಪನಿಷತ್ತಿನ ಪಠಣ ಮಾಡಬೇಕು ಹಾಗೂ ಅದರಲ್ಲಿ ಹೇಳಿರುವ ಮಂತ್ರವನ್ನು ಉಪಾಸನೆ ಮಾಡಬೇಕು. ಆ ಅಷ್ಟಾಕ್ಷರೀ ಮಂತ್ರದ ಮಹಾತ್ಮ್ಯ ಹಾಗೂ ವಿವರಗಳನ್ನು ತಿಳಿದುಕೊಳ್ಳಲು ಅಕ್ಷಿ ಉಪನಿಷತ್ತಿನ ಅಧ್ಯಯನ ಅಗತ್ಯ ಎಂದರು.ಸೂರ್ಯೋಪಾಸನೆಗೆ ಪ್ರಥಮ ಆದ್ಯತೆ ಇರಬೇಕಾದುದು ಸತ್ಯ ಸಂಗತಿ. ಆದರೆ ನಮ್ಮ ಹದಿನಾರು ಸೀಮೆಯಲ್ಲಿ ಸೂರ್ಯನ ದೇವಸ್ಥಾನಗಳು ಅತ್ಯಂತ ಕಡಿಮೆಯಿವೆ. ಇಡೀ ಬೆರಳೆಣಿಕೆಯಷ್ಟು. ಸೂರ್ಯ ದೇವಾಲಯಗಳು ಪೂರ್ವದಲ್ಲಿ ಬಿಸಲಕೊಪ್ಪ ಮತ್ತು ಮತ್ತೊಂದು ಉತ್ತರದಲ್ಲಿ ಹಾಸಣಗಿ. ಇಡೀ ದೇಶ ಸುತ್ತಿದರೂ ಸೂರ್ಯನ ದೇವಸ್ಥಾನಗಳು ಬಹಳ ಕಮ್ಮಿ ಎಂದರು.
ಬೆಳಗಿನಿಂದ ಮಾತೆಯರು ಶಂಕರಾಚರ್ಯರ ಸ್ತೋತ್ರ,ಗೀತಾ ಪಠಣ, ಕುಂಕುಮಾರ್ಚನೆ ಮಾಡಿದರು. ಮಹನೀಯರು ಗಾಯತ್ರೀ ಅನುಷ್ಠಾನದಲ್ಲಿ ತೊಡಗಿಕೊಂಡರು.ಈ ಸಂದರ್ಭ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವೂ ಶ್ರೀಗಳಿಂದ ಜರುಗಿತು. ಸತ್ಯನಾರಾಯಣ ಭಟ್, ಶ್ರೀಪಾದ ಭಟ್ , ಪ್ರಸನ್ನ ಭಟ್, ನಿಶಾಂತ್ ಹೆಗಡೆ ಹಾಗೂ ಇತರರು ಇದ್ದರು.