ತಾಲೂಕಿನ ಬೆಳವಟಗಿ ಗ್ರಾಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೋಮವಾರ ಬಸ್ ತಡೆದು ಪ್ರತಿಭಟನೆ ನಡೆಸಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿಸಲು ಸಮರ್ಪಕ ಬಸ್ ಸೌಲಭ್ಯ ನೀಡಬೇಕೆಂದು ಆಗ್ರಹಿಸಿದರು.
ಬೆಳವಟಗಿ ಗ್ರಾಮದಲ್ಲಿ ಬಸ್ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಹಳಿಯಾಳತಾಲೂಕಿನ ಬೆಳವಟಗಿ ಗ್ರಾಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೋಮವಾರ ಬಸ್ ತಡೆದು ಪ್ರತಿಭಟನೆ ನಡೆಸಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿಸಲು ಸಮರ್ಪಕ ಬಸ್ ಸೌಲಭ್ಯ ನೀಡಬೇಕೆಂದು ಆಗ್ರಹಿಸಿದರು.
ಎಕ್ಸ್‌ಪ್ರೆಸ್ ಬಸ್ ಸೇರಿ ಇತರೇ ಬಸ್‌ಗಳು ಬೆಳವಟಗಿ ಗ್ರಾಮದಲ್ಲಿ ನಿಲ್ಲದೇ ತೆರಳುತ್ತಿರುವುದರಿಂದ ಪ್ರತಿನಿತ್ಯವೂ ಶಾಲೆ, ಕಾಲೇಜಿಗೆ ತೆರಳುವ ಬೆಳವಟಗಿ ಸೇರಿದಂತೆ ಅಕ್ಕಪಕ್ಕದ ಗ್ರಾಮದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದ್ದು, ಸಮಸ್ಯೆ ಬಗೆಹರಿಸುವಂತೆ ಹಲವಾರು ಬಾರಿ ತಾಲೂಕಾಡಳಿತದ ಗಮನಕ್ಕೆ ತಂದಿದ್ದರು. ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.ಬೆಳಗ್ಗೆ ಸಂಚರಿಸುವ ಬಸ್‌ಗಳಲ್ಲಿ ಜನದಟ್ಟಣೆಯಾಗುತ್ತಿರುವುದರಿಂದ ಸರಿಯಾಗಿ ಆಸನ ಸಿಗದೇ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಗೈರಾಗುತ್ತಿರುವುದರಿಂದ ಈ ರೂಟಿಗೆ ಇನ್ನೂಂದು ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕೆಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಗ್ರಹಿಸಿದರು.
ವಿದ್ಯಾರ್ಥಿಗಳ ಹಠಾತ್ತ ಪ್ರತಿಭಟನೆಯಿಂದಾಗಿ ನೆರೆಯ ಕಲಘಟಗಿ ತಾಲೂಕಿಗೆ ಹಾಗೂ ಹಳಿಯಾಳದತ್ತ ತೆರಳುವ ಬಸ್‌ಗಳು ರಸ್ತೆಯಲ್ಲಿಯೇ ನಿಂತವು. ವಿದ್ಯಾರ್ಥಿಗಳ ಪ್ರತಿಭಟನೆಗೆ ಗ್ರಾಮಸ್ಥರು ಸಹ ಸಾಥ್ ನೀಡಿದರು. ಬೆಳಗ್ಗೆ ಪ್ರತಿಭಟನೆ ನಡೆದಿದ್ದರಿಂದ ಸರ್ಕಾರಿ ಕಚೇರಿ ಸೇರಿದಂತೆ ಖಾಸಗಿ ಸಂಸ್ಥೆಗಳಿಗೆ ಕೆಲಸಕ್ಕೆ ತೆರಳುತ್ತಿದ್ದ ಸಿಬ್ಬಂದಿ ಪರದಾಡಿದರು.ಬಹು ಹೊತ್ತಿನವರೆಗೆ ಪ್ರತಿಭಟನೆ ಮುಂದುವರೆಯಿತು. ಪ್ರತಿಭಟನೆಯ ಸುದ್ದಿ ತಿಳಿದು ಹಳಿಯಾಳ ಪೊಲೀಸರು ಬೆಳವಟಗಿ ಗ್ರಾಮಕ್ಕೆ ಧಾವಿಸಿದರು. ಹಳಿಯಾಳ ಪಿಎಸ್ಐ ಕೃಷ್ಣಗೌಡ ಅರಕೇರಿ ವಿದ್ಯಾರ್ಥಿಗಳನ್ನು ಸಮಜಾಯಿಸಿ, ಬಿಗುವಿನ ವಾತಾವರಣ ತಿಳಿಗೊಳಿಸಿದರು.
ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಅಹವಾಲು ಆಲಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರಿಂದ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.