- ಕವಿಗೋಷ್ಠಿ ಸಂಘಟಿಸುವ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್ ಗೆ ನೀಡದಂತೆ ಎಡಿಸಿಗೆ ಮನವಿ ಕನ್ನಡಪ್ರಭ ವಾರ್ತೆ ಮಂಡ್ಯ ಶ್ರೀರಂಗಪಟ್ಟಣ ದಸರಾ ಉತ್ಸವದ ಕವಿಗೋಷ್ಠಿ ಸಂಘಟಿಸುವ ಜವಾಬ್ದಾರಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಬಾರದು ಎಂದು ಜಿಲ್ಲಾ ಯುವ ಬರಹಗಾರರ ಅಧ್ಯಕ್ಷ ಹಾಗೂ ಸಾಹಿತಿ ಟಿ.ಸತೀಶ್ ಜವರೇಗೌಡ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಅಪರ ಜಿಲ್ಲಾಧಿಕಾರಿ ಡಾ.ಎಚ್ .ಎಲ್.ನಾಗರಾಜು ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲಾಡಳಿತದಿಂದ ನಡೆಯುವ ದಸರಾ ಉತ್ಸವದಲ್ಲಿ ಕವಿಗೋಷ್ಠಿ ಸಂಘಟಿಸುವ ಜವಾಬ್ದಾರಿಯನ್ನು ಪರಿಷತ್ತಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ನೀಡಿದರೆ ಕವಿಗಳು ಮತ್ತು ಅತಿಥಿಗಳ ಆಯ್ಕೆ ವಿಚಾರದಲ್ಲಿ ರಾಜಕೀಯ ನೀತಿ ಅನುಸರಿಸಲಾಗುತ್ತದೆ ಎಂದು ದೂರಿದರು. ಪ್ರಧಾನ ಕವಿಗೋಷ್ಠಿ ಸೇರಿದಂತೆ ಕವಿಗೋಷ್ಠಿಗೆ ಕವಿಗಳು ಮತ್ತು ಅತಿಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಪರಿಷತ್ತಿನ ಪದಾಧಿಕಾರಿಗಳು ಜಿಲ್ಲಾ ಕಸಾಪ ಅಧ್ಯಕ್ಷರ ಚುನಾವಣೆ ವೇಳೆ ತಮ್ಮ ಬಣದಲ್ಲಿ ಗುರುತಿಸಿಕೊಂಡ ಹಾಗೂ ತಮ್ಮ ಪರ ಪ್ರಚಾರ ಮಾಡಿದ ಗೆಲುವಿಗಾಗಿ ಶ್ರಮಿಸಿದ ಹಾಗೂ ತಮ್ಮ ಅನುಯಾಯಿ ಕವಿಗಳನ್ನೇ ಆಹ್ವಾನಿಸುತ್ತಾರೆ ಎಂದು ಆರೋಪಿಸಿದರು. ಕಸಾಪ ಪದಾಧಿಕಾರಿಗಳ ಸ್ವಜನ ಪಕ್ಷಪಾತ, ತಾರತಮ್ಯ ನೀತಿಯಿಂದ ಜಿಲ್ಲೆಯ ಪ್ರತಿಭಾವಂತ ಹಿರಿಯ ಮತ್ತು ಯುವ ಕವಿಗಳಿಗೆ ಅನ್ಯಾಯವಾಗುತ್ತಿದೆ. ಕಸಾಪ ಪದಾಧಿಕಾರಿಗಳು ಸೇಡಿನ ಮನೋಭಾವದಿಂದ ಪ್ರತಿವರ್ಷ ನಡೆಯುವ ದಸರಾ ಕವಿಗೋಷ್ಠಿಯಿಂದ ಜಿಲ್ಲೆಯ ನೈಜ ಕಾವ್ಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸದೆ ಸರ್ಕಾರ ನಡೆಸುವ ದಸರಾ ಉತ್ಸವವನ್ನು ದರ್ಬಳಕೆ ಮಾಡಿಕೊಂಡು ಅವಕಾಶ ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕವಿಗೋಷ್ಠಿಗೆ ಕವಿಗಳ ಆಯ್ಕೆ ಮಾಡುವಾಗ ಅರ್ಹ ಮಾನದಂಡ ಅನುಸರಿಸುವುದಿಲ್ಲ. ಕವಿಗೋಷ್ಠಿಯ ಆಹ್ವಾನ ಪತ್ರಿಕೆಯಲ್ಲೂ ಕವಿಗಳ ಹೆಸರನ್ನೇ ಹಾಕದೆ ಅತಿಥಿಗಳ ಹೆಸರುಗಳನ್ನಷ್ಟೇ ಹಾಕಿ ಕವಿಗಳನ್ನು ಅಪಮಾನಿಸಲಾಗಿದೆ ಎಂದು ದೂರಿದರು. ಪ್ರತಿವರ್ಷ ನಡೆಯುವ ದಸರಾ ಕವಿಗೋಷ್ಠಿಗೆ ಸಾಹಿತ್ಯಸಕ್ತರನ್ನು ಕರೆತರುವಲ್ಲಿ ಕಸಾಪ ಪದಾಧಿಕಾರಿಗಳು ವಿಫಲರಾಗಿದ್ದಾರೆ. ಕೇವಲ ಖಾಲಿ ಕುರ್ಚಿಗಳಿಗೆ ಕವಿಗಳು ತಮ್ಮ ಕವನ ವಾಚಿಸಬೇಕಾಗಿದೆ. ಕವಿಗಳಿಗೆ ಸೂಕ್ತ ಸಂಭಾವನೆ ಮತ್ತು ಗೌರವ ನೀಡುವ ವಿಚಾರದಲ್ಲೂ ಕಸಾಪ ಘನತೆಯ ನಡೆ ತೋರುತ್ತಿಲ್ಲ ಎಂದರು. ದಸರಾ ಕವಿಗೋಷ್ಠಿಯನ್ನು ಸಂಘಟಿಸುವ ಜವಾಬ್ದಾರಿ ಪರಿಷತ್ತಿಗೆ ನೀಡದೆ ಮೈಸೂರು ದಸರಾ ಉತ್ಸವದ ಮಾದರಿ ಅನುಸರಿಸಿ ಉಪಸಮಿತಿ ರಚಿಸಬೇಕು. ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಯ ಹಿರಿಯ ಸಾಹಿತಿಗಳ ಮತ್ತು ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘಟಕರನ್ನೊಳಗೊಂಡ ಉಪಸಮಿತಿ ರಚಿಸಿ, ಗೋಷ್ಠಿಗಳು ಮತ್ತು ಪ್ರತಿಭಾವಂತ ಅತಿಥಿಗಳ ಮತ್ತು ಕವಿಗಳ ಆಯ್ಕೆ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಎಡಿಸಿ ಡಾ.ಎಚ್.ಎಲ್. ನಾಗರಾಜು ಮಾತನಾಡಿ, ಶ್ರೀರಂಗಪಟ್ಟಣ ದಸರಾ ಕವಿಗೋಷ್ಠಿಗೆ ಜಿಲ್ಲಾ ಯುವ ಬರಹಗಾರರ ಬಳಗದ ಪದಾಧಿಕಾರಿ, ಜಿಲ್ಲೆಯ ಸಾಹಿತಿ ಮತ್ತು ಸಂಘಟಕರ ಜೊತೆಗೆ ಪರಿಷತ್ತಿನ ಪದಾಧಿಕಾರಿಗಳ ಸೇರಿಸಿ ಉಪ ಸಮಿತಿ ರಚಿಸಿ ಯಶಸ್ವಿಯಾಗಿ ದಸರಾ ಕವಿಗೋಷ್ಠಿ ನಡೆಸಲು ಅಗತ್ಯ ಕ್ರಮ ವಹಿಸುವಂತೆ ಸ್ಥಳದಲ್ಲೇ ಇದ್ದ ಕವಿಗೋಷ್ಠಿ ಉಸ್ತುವಾರಿ ಹೊತ್ತಿರುವ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗೇಶ್ ಅವರಿಗೆ ಸೂಚಿಸಿದರು. ಈ ವೇಳೆ ಕನ್ನಡ ಹೋರಾಟಗಾರರಾದ ಕೋ.ಪು. ಗುಣಶೇಖರ್, ಕರುನಾಡ ಸೇವಕರು ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಎನ್. ಚಂದ್ರ ಮಂಡ್ಯ, ರಂಗಕರ್ಮಿ ಹೆಚ್.ಆರ್. ಧನ್ಯಕುಮಾರ್ ಹಾರೋಹಳ್ಳಿ, ಪತ್ರಕರ್ತ ಎನ್. ಕೃಷ್ಣೇಗೌಡ, ನೇಗಿಲಯೋಗಿ ಸಮಾಜಸೇವಾ ಟ್ರಸ್ಟಿನ ಸದಸ್ಯ ಹೆಚ್.ಕೆ. ಜನಾರ್ಧನ್, ಸಂಘಟಕ ತುಂಬಕೆರೆ ಮಂಜುನಾಥ್ ಉಪಸ್ಥಿತರಿದ್ದರು. 6ಕೆಎಂಎನ್ ಡಿ19 ಶ್ರೀರಂಗಪಟ್ಟಣ ದಸರಾದ ಕವಿಗೋಷ್ಠಿಗೆ ಪ್ರತ್ಯೇಕ ಉಪಸಮಿತಿ ರಚಿಸುವಂತೆ ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್. ನಾಗರಾಜು ಅವರಿಗೆ ಜಿಲ್ಲಾ ಯುವ ಬರಹಗಾರರ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಮನವಿ ಪತ್ರ ಸಲ್ಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.