ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ನೀಡುವಂತೆ ಆಗ್ರಹ

KannadaprabhaNewsNetwork | Published : Dec 7, 2024 12:30 AM

ಸಾರಾಂಶ

Demand to give 15 thousand monthly to Asha workers

-ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಶಾಸಕರುಗಳಿಗೆ ಮನವಿ

------

ಕನ್ನಡಪ್ರಭ ವಾರ್ತೆ ಯಾದಗಿರಿ

ಆಶಾ ಕಾರ್ಯಕರ್ತೆಯರ ಮಾಸಿಕ ವೇತನ 15 ಸಾವಿರ ರು.ಗಳು ನಿಗದಿಪಡಿಸುವಂತೆ ಚಳಿಗಾಲ ಅಧಿವೇಶನದಲ್ಲಿ ಸರ್ಕಾರಕ್ಕೆ ಒತ್ತಾಯಿಸುವಂತೆ ಕೋರಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಶಾಸಕರಿಗೆ ಪ್ರತ್ಯೇಕ ಮನವಿ ಸಲ್ಲಿಸಲಾಯಿತು.

ಆಶಾ ಕಾರ್ಯಕರ್ತೆಯರು ಮಾತನಾಡಿ, ನೂರಾರು ಸಂಖ್ಯೆಯ ಆಶಾ ಕಾರ್ಯಕರ್ತೆಯರು ಹಗಲಿರುಳು ಬಡಜನರಿಗೆ ಆರೋಗ್ಯ ಸೌಲಭ್ಯ ಒದಗಿಸಲು ಆರೋಗ್ಯ ಇಲಾಖೆಯಲ್ಲಿ ಪರಿಶ್ರಮಿಸುತ್ತಿರುವುದು ತಮಗೆ ತಿಳಿದಿದೆ. ರಾಜ್ಯದಲ್ಲಿ 42,000 ಆಶಾ ಕಾರ್ಯಕರ್ತೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಕೋವಿಡ್-19 ವೇಳೆ ಈ ಫ್ರಂಟ್ ಲೈನ್ ವಾರಿಯರ್ಸ್ ಆಗಿ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಡಿದು ಎಲ್ಲರೂ ಶ್ಲಾಘಿಸಿದ್ದಾರೆ.

ರಾಜ್ಯದಲ್ಲಿ ಪ್ರೋತ್ಸಾಹಧನ ನೀಡಲು ಆಶಾನಿಧಿ ಪೋರ್ಟಲ್‌ನಲ್ಲಿ ಆನ್ ಲೈನ್ ದಾಖಲು ಮಾಡಬೇಕಿದ್ದು, ಆಶಾಗಳು ಮಾಡಿದ ಕೆಲಸಗಳು ದಾಖಲಾಗದೆ ಕಳೆದ 8 ವರ್ಷಗಳಿಂದ ಮಾಡಿದ ಕೆಲಸಕ್ಕೆ ಪ್ರೋತ್ಸಾಹಧನ ಸಿಗುತ್ತಿಲ್ಲ. ಆಶಾ ಕಾರ್ಯಕರ್ತೆಯರಿಗೆ ಅನ್ಯಾಯ ಆಗುತ್ತಿದೆ. ಸಮಸ್ಯೆಗಳ ಕುರಿತು ಆರೋಗ್ಯ ಇಲಾಖೆ ಮತ್ತು ಸರ್ಕಾರಕ್ಕೆ ಕಳೆದ 8 ವರ್ಷಗಳಿಂದ ಲೆಕ್ಕವಿಲ್ಲದಷ್ಟು ದೂರು ಸಲ್ಲಿಸಲಾಗಿದೆ. ಲೆಕ್ಕವಿಲ್ಲದಷ್ಟು ಸಭೆಗಳು, ಚರ್ಚೆಗಳು, ನಡೆದಿವೆ. ಇಲಾಖೆಯಿಂದ ಮತ್ತು ಸರ್ಕಾರದಿಂದ ಕೈಗೊಂಡ ಯಾವುದೇ ಕ್ರಮದಿಂದ ಸಮಸ್ಯೆ ಪರಿಹಾರವಾಗದೇ ಹಾಗೆಯೇ ಉಳಿದಿವೆ. ಪ್ರತಿಯೊಬ್ಬ ಆಶಾ ಸಾವಿರಾರು ರೂಪಾಯಿ ಆರ್ಥಿಕ ನಷ್ಟ ಅನುಭವಿಸಿರುವರು ಎಂದು ವಿವರಿಸಿದರು.

ಹಗಲಿರುಳು ಆರೋಗ್ಯ ಸೇವೆಯಲ್ಲಿ ನಿರತ ಅವರಿಗೆ ಕನಿಷ್ಟ ಜೀವನ ನಡೆಸುವಷ್ಟು ಗೌರವಧನ ಇಲ್ಲ. ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15,000 ಗೌರವಧ ನಿಗದಿ ಸೇರಿದಂತೆ ಇತರೆ ಪ್ರಮುಖ ಬೇಡಿಕೆ ಈಡೇರಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಮನವಿ ಮಾಡಿದರು.

ಈ ಕುರಿತು ಡಿ.9 ರಿಂದ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆದು ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆ ಈಡೇರಿಸಲು ಆಗ್ರಹಿಸಬೇಕೆಂದು ಎಐಯುಟಿಯುಸಿ ಕೇಂದ್ರ ಕಾರ್ಮಿಕ ಸಂಘಟನೆಗೆ ಸಂಯೋಜಿತ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಈ ಮೂಲಕ ಕೋರಲಾಯಿತು.

ಮನವಿ ಪತ್ರ ಸ್ವೀಕರಿಸಿದ ಮಾತನಾಡಿದ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು, ಈ ಕುರಿತು ಪ್ರಶ್ನಾವಳಿ ವೇಳೆ ಬೇಡಿಕೆಗಳ ಕುರಿತು ಚರ್ಚಿಸಿ ಸರ್ಕಾರದ ಗಮನ ಸೆಳೆಯುತ್ತೇನೆಂದು ಭರವಸೆ ನೀಡಿದರು. ತಮ್ಮ ಆಪ್ತ ಸಹಾಯಕರಿಗೆ ಫೋನ್ ಮೂಲಕ ಕರೆ ಮಾಡಿ, ಈ ಕುರಿತು ಇಂದೇ ಪ್ರಶ್ನಾವಳಿಯಲ್ಲಿ ವಿಷಯ ಸೇರಿಸಲು ಹೇಳಿದರು. ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಸಹ ಸಕರಾತ್ಮಕವಾಗಿ ಸ್ಪಂದಿಸಿದರು.

ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಡಿ. ಉಮಾದೇವಿ, ಜಿಲ್ಲಾ ಮುಖಂಡ ರಾಮಲಿಂಗಪ್ಪ ಬಿ.ಎನ್., ಮುಖಂಡರಾದ ಕೃಪಾ, ಶಾರದಾದೇವಿ, ನಾಗಮ್ಮ, ನಾಗೇಂದ್ರಮ್ಮ, ಶ್ರೀದೇವಿ, ಗೌರಮ್ಮ, ಸಾವಿತ್ರಿ, ಲಕ್ಷ್ಮೀ, ಗಂಗಮ್ಮ, ವಿಜಯಲಕ್ಷ್ಮೀ ಸೇರಿದಂತೆ ಇತರರಿದ್ದರು.

----

ಫೋಟೊ: ಯಾದಗಿರಿಯಲ್ಲಿ ಆಶಾ ಕಾರ್ಯಕರ್ತೆಯರ ಮಾಸಿಕ ವೇತನ 15 ಸಾವಿರ ನಿಗದಿಪಡಿಸುವಂತೆ ಚಳಿಗಾಲ ಅಧಿವೇಶನದಲ್ಲಿ ಸರ್ಕಾರಕ್ಕೆ ಒತ್ತಾಯಿಸುವಂತೆ ಕೋರಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಶಾಸಕ ಶರಣಗೌಡ ಕಂದಕೂರು ಅವರಿಗೆ ಮನವಿ ಸಲ್ಲಿಸಲಾಯಿತು.

6ವೈಡಿಆರ್7

Share this article