ಅಂಬೇಡ್ಕರ್ ವಿಚಾರಧಾರೆಗಳು ಪ್ರತಿಯೊಬ್ಬರಿಗೂ ತಲುಪಲಿ: ಚೇತನ್ ಅಹಿಂಸಾ

KannadaprabhaNewsNetwork | Published : Dec 7, 2024 12:30 AM

ಸಾರಾಂಶ

ಯುವಕರು ರಕ್ತದಾನ ಮಾಡುವ ಮೂಲಕ ಮಹಾ ಮಾನವತವಾದಿಯಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸಿಕೊಳ್ಳುತ್ತಿರುವುದು ಮಾದರಿಯಾಗಿದೆ. ಬಾಬಾಸಾಹೇಬರ ವಿಚಾರಗಳು, ವಾದಗಳು, ಮಾರ್ಗದರ್ಶಕವಾಗಿವೆ. ನನ್ನನ್ನು ಪೂಜಿಸಬೇಡಿ, ನನ್ನಂತೆಯೇ ಓದಿ ಎಂದಿರುವ ಮಾತುಗಳು ಸತ್ಯ .

ಕನ್ನಡಪ್ರಭ ವಾರ್ತೆ ಮಂಡ್ಯ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳು, ರಚನಾತ್ಮಕ ಹೋರಾಟ, ಸೇವೆಗಳು ಪ್ರತಿಯೊಬ್ಬರಿಗೂ ಅತಿವೇಗವಾಗಿ ತಲುಪುವಂತಾಗಬೇಕು ಎಂದು ಚಿತ್ರನಟ ಚೇತನ್ ಅಹಿಂಸಾ ಹೇಳಿದರು.

ಗಾಂಧಿನಗರದ ಡಾ.ಬಿ.ಆರ್.ಅಂಬೇಡ್ಕರ್ ಆಟೋ ನಿಲ್ದಾಣದ ಬಳಿ ಧಮ್ಮವಿಜಯ ಬುದ್ಧವಿಹಾರ ಟ್ರಸ್ಟ್, ಜೈ ಭೀಮ್ ಗೆಳೆಯರ ಬಳಗ ಗಾಂಧಿನಗರ, ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ, ಭೀಮಸೇನೆ ಕರ್ನಾಟಕ ವತಿಯಿಂದ ಆಯೋಜಿಸಿದ್ದ ಬಾಬಾ ಸಾಹೇಬ ಡಾ. ಬಿ.ಆರ್.ಅಂಬೇಡ್ಕರ್ ಅವರ 68ನೇ ವರ್ಷದ ಪರಿನಿರ್ವಾಣ ಪ್ರಯುಕ್ತ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಯುವಕರು ರಕ್ತದಾನ ಮಾಡುವ ಮೂಲಕ ಮಹಾ ಮಾನವತವಾದಿಯಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸಿಕೊಳ್ಳುತ್ತಿರುವುದು ಮಾದರಿಯಾಗಿದೆ. ಬಾಬಾಸಾಹೇಬರ ವಿಚಾರಗಳು, ವಾದಗಳು, ಮಾರ್ಗದರ್ಶಕವಾಗಿವೆ. ನನ್ನನ್ನು ಪೂಜಿಸಬೇಡಿ, ನನ್ನಂತೆಯೇ ಓದಿ ಎಂದಿರುವ ಮಾತುಗಳು ಸತ್ಯ ಎಂದು ಹೇಳಿದರು.

ಬೌದ್ಧ ಧರ್ಮದಲ್ಲಿ ಸಮಾನತೆ ಇದೆ. ಅಸ್ಪೃಶ್ಯತೆ ಆಚರಣೆ ಇಲ್ಲ. ಅಂಬೇಡ್ಕರ್ ಅವರು ಸಾಕಷ್ಟು ಅಧ್ಯಯನ, ವೈಜ್ಞಾನಿಕ ಚಿಂತನೆ ನಡೆಸಿಯೇ ಬೌದ್ಧಧರ್ಮ ಸ್ವೀಕರಿಸಿ ಬುದ್ಧರನ್ನು ಅಪ್ಪಿಕೊಂಡು ಒಪ್ಪಿಕೊಂಡಿದ್ದಾರೆ. ಬುದ್ಧ ಮತ್ತು ಅವನ ಧಮ್ಮವನ್ನು ಬರೆದು ಲೋಕಕ್ಕೆ ಸಮರ್ಪಣೆ ಮಾಡಿದರು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, ರಕ್ತದಾನಕ್ಕೆ ಜಾತಿ- ಧರ್ಮ ಮುಖ್ಯ ಅಲ್ಲ, ಜೀವ ಉಳಿಸುವುದು ರಕ್ತದಾನಿಗಳ ಧ್ಯೇಯವಾಗಿರುತ್ತದೆ. ರಕ್ತದಾನ ಮಾನವೀಯತೆಯಿಂದ ಜೀವ ಉಳಿಸುವ ಪ್ರಕ್ರಿಯೆಯಾಗಿರುತ್ತದೆ. ಇಂಥವರಿಗೆ ರಕ್ತ ಲಭ್ಯವಾಗುತ್ತದೆ ಎಂದು ಹೇಳಲಾಗದು. ರಕ್ತ ಜೀವ ಉಳಿಸುವ ಸಂಜೀವಿನಿಯಾಗಿದೆ ಎಂದು ನುಡಿದರು.

ಮಹಾಮಾನವತವಾದಿಯಾಗಿದ್ದ ಅಂಬೇಡ್ಕರ್ ಅವರ 68ನೇ ವರ್ಷದ ಪರಿನಿರ್ವಾಣ ಪ್ರಯುಕ್ತ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಅಭಿಯಾನ ಆಯೋಜನೆ ಮಾಡಿರುವುದು ಅಭಿನಂದನಾರ್ಹ. ಇಂತಹ ಸೇವಾ ಕಾರ್ಯಗಳು ನಿರಂತರವಾಗಿ ಸಾಗಲಿ ಎಂದು ಆಶಿಸಿದರು.

ಇದೇ ವೇಳೆ 100 ಕ್ಕೂ ಹೆಚ್ಚು ಸ್ವಯಂ ಪ್ರೇರಿತ ರಕ್ತದಾನಿಗಳು ನೀಡಿದ ರಕ್ತವನ್ನು ಮಿಮ್ಸ್ ರಕ್ತನಿಧಿಕೇಂದ್ರದ ಸಿಬ್ಬಂದಿ ಸಂಗ್ರಹಿಸಿಕೊಂಡರು. ಪ್ರಮಾಣಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಕೆಪಿಸಿಸಿ ಸದಸ್ಯೆ ವಿಜಯಲಕ್ಷ್ಮೀ, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಸಿದ್ದಲಿಂಗಪ್ಪ, ತಾಲೂಕು ಅಧಿಕಾರಿ ಕಾವ್ಯಶ್ರೀ, ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್ , ಉದ್ಯಮಿ ನರಸಿಂಹಮೂರ್ತಿ, ಗಂಗಾಧರ್, ಡಾ.ಮುರಳಿಧರ್‌ಭಟ್, ಟಿ.ಡಿ.ನಾಗರಾಜು ತಗ್ಗಹಳ್ಳಿ, ನಿರಂಜನ್‌ಬೌದ್, ಪ್ರಸನ್ನ, ದೀಕ್ಷಿತ್, ಜಯಕುಮಾರ್, ಚೇತನ್, ನಂಜುಂಡ, ಶಿವಶಂಕರ್ ಮೂರ್ತಿ, ಮಂಗಲ ಲಂಕೇಶ್ ಸೇರಿದಂತೆ ಹಲವರು ಇದ್ದರು.

Share this article