ಧರ್ಮಸ್ಥಳದಲ್ಲಿ ಆ. 31ರಂದು ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಧರ್ಮಸ್ಥಳ ಸತ್ಯಯಾತ್ರೆ ಹಮ್ಮಿಕೊಂಡಿದ್ದು, ಕಂಪ್ಲಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಲಾಯಿತು.
ಕಂಪ್ಲಿ: ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಹಿಂದೂ ವಿರೋಧಿಗಳನ್ನು ಕೂಡಲೇ ಬಂಧಿಸಿ ತನಿಖೆಗೊಳಪಡಿಸಬೇಕು ಎಂದು ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ ರಾಜು ನಾಯಕ ಒತ್ತಾಯಿಸಿದರು.
ಪಟ್ಟಣದ ಅತಿಥಿಗೃಹ ಆವರಣದಲ್ಲಿ ಶುಕ್ರವಾರ ನಡೆದ ಜೆಡಿಎಸ್ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಮಾತನಾಡಿದರು. ಧರ್ಮಸ್ಥಳ ಹಿಂದೂಗಳ ಪವಿತ್ರ ಕ್ಷೇತ್ರವಾಗಿದೆ. ಮಂಜುನಾಥ ಸ್ವಾಮಿಯನ್ನು ದೇಶದ ಮೂಲೆ ಮೂಲೆಗಳಲ್ಲಿರುವ ಸಹಸ್ರಾರು ಹಿಂದೂಗಳು ತಮ್ಮ ಹೃದಯದ ಕಮಲಗಳಲ್ಲಿ ಪೂಜಿಸುತ್ತಾರೆ. ಅಂತಹ ಮಂಜುನಾಥ ಸ್ವಾಮಿ ಸನ್ನಿಧಿಯಾದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಕೆಲ ಕೆಟ್ಟ ಮನಸ್ಥಿತಿಯ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಅಪವಾದಗಳನ್ನು ಮಾಡುತ್ತ ಕ್ಷೇತ್ರದ ಹೆಸರಿಗೆ ಚ್ಯುತಿ ತರುವ ಷಡ್ಯಂತ್ರ ನಡೆಸಿದ್ದಾರೆ. ಇದನ್ನು ಜೆಡಿಎಸ್ ತೀವ್ರವಾಗಿ ಖಂಡಿಸುತ್ತದೆ. ಕಾಂಗ್ರೆಸ್ ಸರ್ಕಾರ ತರಾತುರಿಯಲ್ಲಿ ಧರ್ಮಸ್ಥಳ ಪ್ರಕರಣವನ್ನು ಎಸ್‌ಐಟಿಗೆ ಒಪ್ಪಿಸುವ ಮೂಲಕ ಹಿಂದೂಗಳ ಭಾವನೆಗಳನ್ನು ಅಸ್ಥಿರಗೊಳಿಸುವ ಕುತಂತ್ರ ಮಾಡುತ್ತಿದೆ. ಸರ್ಕಾರ ಹಿಂದೂ ವಿರೋಧಿ ನೀತಿ ಕೈಬಿಡಬೇಕು. ಅಲ್ಲದೇ ಧರ್ಮಸ್ಥಳದ ವಿಚಾರವನ್ನು ಎನ್‌ಐಎಗೆ ವಹಿಸಬೇಕು. ಇನ್ನು ಪವಿತ್ರ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರಕ್ಕೆ ಮುಂದಾಗಿದ್ದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಕೇವಲ ಹಿಂದೂಗಳದ್ದಲ್ಲ ಎನ್ನುವ ಹೇಳಿಕೆ ನೀಡುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಈ ಕುರಿತು ಅವರು ಆಡಿದ ಮಾತನ್ನು ವಾಪಸ್ ಪಡೆದು ಹಿಂದೂಗಳಿಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ, ಧರ್ಮಸ್ಥಳದಲ್ಲಿ ಆ. 31ರಂದು ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಧರ್ಮಸ್ಥಳ ಸತ್ಯಯಾತ್ರೆ ಹಮ್ಮಿಕೊಂಡಿದ್ದು, ರಾಜ್ಯದ ಜೆಡಿಎಸ್ ಕಾರ್ಯಕರ್ತರು, ಮುಖಂಡರು, ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಜೆಡಿಎಸ್ ಕಂಪ್ಲಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಏಳಿಕೆ ಮೇಘರಾಜ, ಪದಾಧಿಕಾರಿಗಳಾದ ಇರ್ಫಾನ್ ಗುತ್ತಿ, ಜಗದೀಶ ಪೂಜಾರ, ಅಂಜಿನಪ್ಪ, ನಾಗರಾಜ, ದೊಡ್ಡಪ್ಪ ದೇಸಾಯಿ, ರಾಜಾ, ಮಲ್ಲಿಕಾರ್ಜುನ ನಾಯಕ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.