ಕನಕಗಿರಿಯಲ್ಲಿ ಮನ ಸೆಳೆಯುವ ಉಯ್ಯಾಲೆ ಗಣಪತಿ

KannadaprabhaNewsNetwork |  
Published : Aug 30, 2025, 01:01 AM IST
ಪೋಟೋಕನಕಗಿರಿಯ 13ನೇ ವಾರ್ಡಿನ ಉಯ್ಯಾಲೆ ಗಣಪತಿಯ ಅಕ್ಕಪಕ್ಕದಲ್ಲಿ ಉಯ್ಯಾಲೆ ಆಡುತ್ತಿರುವ ಶಾಲಾ ಮಕ್ಕಳು.   | Kannada Prabha

ಸಾರಾಂಶ

ಗಣಪತಿಯೊಟ್ಟಿಗೆ ಉಯ್ಯಾಲೆಯಾಡಲು ನೂರಾರು ಶಾಲಾ ಮಕ್ಕಳು ಇತ್ತ ಕಡೆ ಧಾವಿಸುತ್ತಿದ್ದಾರೆ. ಇನ್ನು ಭಕ್ತರು ಸಹ ಅಕ್ಷತೆ ಸಮರ್ಪಣೆ ನಂತರ ತೊಟ್ಟಿಲಲ್ಲಿ ಕುಳಿತು ಜೋಕಾಲಿ ಆಡಿ ಸಂಭ್ರಮಿಸುತ್ತಿದ್ದಾರೆ.

ಎಂ. ಪ್ರಹ್ಲಾದ್

ಕನಕಗಿರಿ:

ಗಣೇಶಶೋತ್ಸವ ಹಿನ್ನೆಲೆಯಲ್ಲಿ ಪಟ್ಟಣದ 13ನೇ ವಾರ್ಡಿನ ಯುವಕರು ಪ್ರತಿಷ್ಠಾಪಿಸಿದ ಉಯ್ಯಾಲೆ ಗಣಪತಿ ಭಕ್ತರ ಹಾಗೂ ಮಕ್ಕಳ ಗಮನ ಸೆಳೆಯುತ್ತಿದ್ದಾನೆ.

ಹೊಸಪೇಟೆ ನಗರದ ತಂದಿರುವ ಈ ಪರಿಸರ ಸ್ನೇಹಿ ಗಣೇಶನನ್ನು ಯುವಕರು ವಿಭಿನ್ನವಾಗಿ ಯೋಚಿಸಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ್ದಾರೆ. ಮೂರ್ನಾಲ್ಕು ಅಡಿ ಎತ್ತರವಿರುವ ಗಣಪತಿಯನ್ನು ಉಯ್ಯಾಲೆಯಲ್ಲಿ ಕೂರಿಸಲಾಗಿದೆ. ಗಣಪತಿಯ ಎಡ ಮತ್ತು ಬಲಭಾಗದಲ್ಲಿಯೂ ಉಯ್ಯಾಲೆ ಜೋಡಿಸಿ ದರ್ಶನಕ್ಕೆ ಬರುವ ಭಕ್ತರಿಗೆ ಗಣಪತಿ ಪಕ್ಕದಲ್ಲಿ ಕುಳಿತು ಉಯ್ಯಾಲೆ ಆಡಲು ವ್ಯವಸ್ಥೆ ಮಾಡಿದ್ದಾರೆ.

ಗಣಪತಿಯೊಟ್ಟಿಗೆ ಉಯ್ಯಾಲೆಯಾಡಲು ನೂರಾರು ಶಾಲಾ ಮಕ್ಕಳು ಇತ್ತ ಕಡೆ ಧಾವಿಸುತ್ತಿದ್ದಾರೆ. ಇನ್ನು ಭಕ್ತರು ಸಹ ಅಕ್ಷತೆ ಸಮರ್ಪಣೆ ನಂತರ ತೊಟ್ಟಿಲಲ್ಲಿ ಕುಳಿತು ಜೋಕಾಲಿ ಆಡಿ ಸಂಭ್ರಮಿಸುತ್ತಿದ್ದಾರೆ. ಉಯ್ಯಾಲೆ ಗಣಪತಿ ವೀಕ್ಷಣೆಗೆ ಪಟ್ಟಣದ ಜನರು ತಂಡೋಪ-ತಂಡವಾಗಿ ಭೇಟಿ ನೀಡುತ್ತಿದ್ದಾರೆ. ಕಳೆದ ವರ್ಷವೂ ನೇಗಿಲಯೋಗಿ ಗಣೇಶನನ್ನು ಪ್ರತಿಷ್ಠಾಪಿಸಿ ಸುತ್ತಲೂ ರೈಲ್ವೆ ಟ್ರ್ಯಾಕ್ ಮೂಲಕ ಭತ್ತದ ಗದ್ದೆ ನಾಟಿ ಮಾಡುವ ದೃಶ್ಯವನ್ನು ಕಟ್ಟಿಕೊಡಲಾಗಿರುವ ಕುರಿತು ರಾಜ್ಯ ವ್ಯಾಪಿ ಸುದ್ದಿಯಾಗಿತ್ತು. ಈ ಭಾರಿಯೂ ಉಯ್ಯಾಲೆ ಗಣೇಶನೂ ಕೂಡಾ ಸದ್ದಿಲ್ಲದೆ ಸುದ್ದಿಯಾಗುತ್ತಿದ್ದಾನೆ.

ಈ ಗಣಪತಿ ತಾಲೂಕಿನಲ್ಲೇ ಜನಮನ್ನಣೆ ಪಡೆದುಕೊಂಡಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಗಣಪತಿ ಪ್ರತಿಷ್ಠಾಪಿಸಿರುವ ಯುವಕ ಮಂಡಳಿಗಳಿಗೆ ಇದು ಸ್ಫೂರ್ತಿಯಾಗಿದ್ದು, ಹಳ್ಳಿ ಯುವಕರು ಕಾಲೇಜಿಗೆ ಬಂದಾಗ ಬಿಡುವಿನ ವೇಳೆಯಲ್ಲಿ ಇಲ್ಲಿಗೆ ಭೇಟಿ ನೀಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.

ಹೊಸಪೇಟೆಯಿಂದ ಉಯ್ಯಾಲೆ ಗಣಪತಿ ತರಲಾಗಿದೆ. ಸಮಿತಿ ಯುವಕರು ಯೋಚಿಸಿ ಅಕ್ಕಪಕ್ಕದಲ್ಲಿ ಉಯ್ಯಾಲೆ ಸಿದ್ಧಪಡಿಸಿದ್ದಾರೆ. ಗಣಪತಿಯೊಂದಿಗೆ ಉಯ್ಯಾಲೆಯಾಡುವುದು ಒಂದು ವಿಶೇಷ. ವರ್ಷಕ್ಕೊಮ್ಮೆ ವಿಭಿನ್ನತೆಯನ್ನು ಜನರ ಪ್ರದರ್ಶನಕ್ಕಾಗಿ ಮಾಡುತ್ತಿದ್ದೇವೆ.

ವಿಜಯಕುಮಾರ ಗುಗ್ಗಳಶೆಟ್ರ, ಯುವಕ ಮಂಡಳಿ ಮುಖ್ಯಸ್ಥ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು