ಶಿವಮೊಗ್ಗ: ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಸಾವಿನ ಪ್ರಕರಣವನ್ನು ಉನ್ನತ ತನಿಖೆಗೆ ವಹಿಸಬೇಕು, ಇವರ ಸಾವಿಗೆ ಕಾರಣರಾದವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಡಿಸಿ ಕಚೇರಿ ಮುಂಭಾಗ ಮನವಿ ಸಲ್ಲಿಸಲಾಯಿತು.
ಆದರೆ, ಸಾವಿಗೆ ಅಸಲಿ ಕಾರಣವೇನು? ಸಾಮಾನ್ಯವಾಗಿ ಚಿಕಿತ್ಸೆ ನೀಡುವಾಗ ಸಾಕಷ್ಟು ಮುಂಜಾಗ್ರತೆ ವಹಿಸಬೇಕು, ಎಸ್‌ಒಪಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದರೆ ಇದ್ಯಾವುದೂ ನಡೆದಿಲ್ಲ. ಎಸ್‌ಒಪಿ ನಿಯಮಗಳೆಂದರೆ ರಾತ್ರಿ ವೇಳೆಯಲ್ಲಿ ಯಾವುದೇ ಕಾರಣಕ್ಕೂ ಚಿಕಿತ್ಸೆ ನೀಡಬಾರದು, ಒಂದು ವೇಳೆ ನೀಡಿದರೂ ಅರವಳಿಕೆ ಚುಚ್ಚುಮದ್ದು ನೀಡಬೇಕು, ಜೊತೆಗೊಂದಿಷ್ಟು ಸಿಬ್ಬಂದಿ ಬೇಕು, ಇದ್ಯಾವುದೂ ಇಲ್ಲಿ ಪಾಲಿಸದೇ ತರಬೇತಿ ಹಂತದಲ್ಲಿದ್ದ ಡಾ.ಸಮೀಕ್ಷಾ ರೆಡ್ಡಿ ಅವರನ್ನು ಚಿಕಿತ್ಸೆಗೆ ಕಳುಹಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಈ ಘಟನೆಗೆ ಡಾ.ಅಮರಾಕ್ಷರ ಅವರೇ ನೇರ ಹೊಣೆಗಾರರಾಗಿದ್ದಾರೆ. ಅವರನ್ನು ವಜಾಗೊಳಿಸಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಡಿಸಿ ಕಚೇರಿ ಬಾಗಿಲಲ್ಲೇ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ವೇದಿಕೆ ಅಧ್ಯಕ್ಷ ವಾಟಾಳ್ ಮಂಜುನಾಥ್, ಪ್ರಮುಖರಾದ ಪ್ರವೀಣ್, ಸತೀಶ್ ಗೌಡ, ಸಂಜು, ಲೋಕೇಶ್, ಅಕ್ಬರ್ ಪಾಷಾ, ರವಿಕುಮಾರ್, ರಾಘವೇಂದ್ರ ಇದ್ದರು.