ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲು ಆಗ್ರಹ

KannadaprabhaNewsNetwork |  
Published : Jul 27, 2026, 03:15 AM IST
ಮಂಗಳೂರಿನಲ್ಲಿ ಎಸ್‌ಸಿ, ಎಸ್‌ಟಿ ಕುಂದು ಕೊರತೆ ನಿವರಣಾ ಸಭೆ ನಡೆಯಿತು | Kannada Prabha

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಮತ್ತು ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದು ಕೊರತೆ ನಿವಾರಣಾ ಮಾಸಿಕ ಸಭೆ ಭಾನುವಾರ ನಗರದ ಪೊಲೀಸ್‌ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಮತ್ತು ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದು ಕೊರತೆ ನಿವಾರಣಾ ಮಾಸಿಕ ಸಭೆ ಭಾನುವಾರ ನಗರದ ಪೊಲೀಸ್‌ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಎಸ್‌ಸಿ, ಎಸ್‌ಟಿ ಕುಂದು ಕೊರತೆ ನಿವಾರಣಾ ಸಭೆಯನ್ನು ಪ್ರತೀ ಮೂರು ತಿಂಗಳಿಗೊಮ್ಮೆ ನಡೆಸಬೇಕೆಂದು ಇದ್ದರೂ, ಜಿಲ್ಲೆಯಲ್ಲಿ ಸಭೆ ಆಗದೇ ಹಲವು ತಿಂಗಳುಗಳೇ ಕಳೆದಿದೆ. ಪೊಲೀಸ್‌ ಇಲಾಖೆಯಿಂದ ನಡೆಯುವ ಸಭೆಯಲ್ಲಿ ಭೂಮಿ-ಕಂದಾಯ ವಿಭಾಗದ ಸಮಸ್ಯೆಗಳು ಹೆಚ್ಚಿರುವುದರಿಂದ ಇದರ ಪರಿಹಾರ ಜಿಲ್ಲಾಧಿಕಾರಿ, ಕಂದಾಯ ಅಧಿಕಾರಿಗಳ ಹಂತದಲ್ಲಿ ನಡೆಯಬೇಕಾಗಿದ್ದು, ಆದ್ದರಿಂದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೂಡಲೇ ಎಸ್‌ಸಿ, ಎಸ್‌ಟಿ ಸಭೆ ಕರೆಯಬೇಕು ಹಾಗೂ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪ್ರತೀ ಮೂರು ತಿಂಗಳಿಗೊಮ್ಮೆ ನಿರಂತರ ಸಭೆ ನಡೆಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.

ನಗರ ಉಪ ಪೊಲೀಸ್‌ ಆಯುಕ್ತ ಮಿಥುನ್‌ ಎಚ್.ಎನ್‌. ಮಾತನಾಡಿ, ಇಲ್ಲಿನ ಸಭೆಯಲ್ಲಿ ಕಂದಾಯ ಇಲಾಖೆ ವ್ಯಾಪ್ತಿಯ ಸಮಸ್ಯೆಗಳು ಚರ್ಚೆಗೆ ಬರುತ್ತಿದ್ದು, ಜಿಲ್ಲಾಧಿಕಾರಿಗಳ ಸಭೆಯಲ್ಲಿ ಅದಕ್ಕೆ ಪರಿಹಾರ ನೀಡಬೇಕಾಗುತ್ತದೆ. ಎಡಿಸಿ ಅವರ ಜೊತೆ ಮಾತನಾಡಿ ಸಭೆ ನಡೆಸುವ ಬೇಡಿಕೆ ಬಗ್ಗೆ ಅವರಿಗೆ ತಿಳಿಸಿದ್ದೇನೆ. ಅವರು ಜಿಲ್ಲಾಧಿಕಾರಿ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ ಎಂದು ಸಭೆಗೆ ತಿಳಿಸಿದರು. ಮಹಾನಗರ ಪಾಲಿಕೆ, ಸಹಾಯಕ ಆಯುಕ್ತರ ಹಂತದಲ್ಲೂ ನಿರಂತರ ಸಭೆ ನಡೆಸಬೇಕು ಎಂದೂ ಆಗ್ರಹಿಸಲಾಯಿತು.ಬಾಡಿಗೆ ಕಟ್ಟಡದ ಹುಡುಕಾಟ: ನಗರದ ಹಾಸ್ಟೇಲ್‌ನಲ್ಲಿ ಸೀಟು ಸಿಗದೇ ಸಮಸ್ಯೆಯಾಗುತ್ತಿರುವ ಬಗ್ಗೆ ಕಳೆದ ಸಭೆಯಲ್ಲಿ ನಡೆದ ಚರ್ಚೆಯ ಬಗ್ಗೆ ಪ್ರಸ್ತಾಪಿಸಲಾಯಿತು. ಹೊರ ಜಿಲ್ಲೆಯಿಂದ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸಿಗದೇ ಪಿಜಿ, ಬಾಡಿಗೆ ರೂಮ್‌ಗಳಲ್ಲಿ ವಾಸ್ತವ್ಯ ನಡೆಸುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ವ್ಯವಸ್ಥೆಗೆ ಬಾಡಿಗೆ ಕಟ್ಟಡವನ್ನಾದರೂ ಬಳಸಿ ಹಾಸ್ಟೆಲ್‌ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಲಾಯಿತು. ಮೆಟ್ರಿಕ್‌ ನಂತರದ ಹಾಸ್ಟೆಲ್‌ಗೆ ಪ್ರವೇಶಾತಿ ಕೋರಿ ಮಂಜೂರಾತಿ ಸಂಖ್ಯೆಗಿಂತ ಹೆಚ್ಚಿನ ಅರ್ಜಿ ಸಲ್ಲಿಕೆಯಾಗಿದ್ದು, ಅವರಿಗೆ ಸೀಟು/ಹಾಸ್ಟೆಲ್‌ ವ್ಯವಸ್ಥೆ ಮಾಡಲು ಸೂಕ್ತವಾದ ಬಾಡಿಗೆ ಕಟ್ಟಡವನ್ನು ಪರಿಶೀಲನೆ ನಡೆಸಲಾಗುತ್ತಿದೆ. ಕಟ್ಟಡ ಲಭ್ಯವಾದಲ್ಲಿ ವಿದ್ಯಾರ್ಥಿಗಳನ್ನು ದಾಖಲಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿದರು.ಗೃಹ ರಕ್ಷಕ ದಳಕ್ಕೆ ಸೇರಿ: ಗೃಹರಕ್ಷಕ ದಳದ ಹೋಂ ಗಾರ್ಡ್‌ಗಳಿಗೆ ಪಿಎಫ್‌ ಮತ್ತಿತರ ಸೌಲಭ್ಯ ಒದಗಿಸಬೇಕು ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಅನಿಲ್‌ ಭೂಮರೆಡ್ಡಿ ಮಾತನಾಡಿ, ಹೋಂಗಾರ್ಡ್‌ ಕೆಲಸ ಸ್ವ ಇಚ್ಛೆಯಿಂದ ಮಾಡುವಂತಹದ್ದು. ಅದು ಖಾಯಂ ನೇಮಕಾತಿ ಆಗಿರುವುದಿಲ್ಲ. ಪೊಲೀಸ್‌ ಇಲಾಖೆ, ಇತರೆ ಇಲಾಖೆಗೆ ಸಹಕಾರ ನೀಡಲು ಹೋಂಗಾರ್ಡ್‌ಗಳು ಕೆಲಸ ಮಾಡುತ್ತಾರೆ. ಆದ್ದರಿಂದ ಅವರಿಗೆ ಪಿಎಫ್‌ ನೀಡಲಾಗುವವುದಿಲ್ಲ ಎಂದರು. ಜಿಲ್ಲೆಯಲ್ಲಿ 800 ಹೋಂಗಾರ್ಡ್‌ ಮಂಜೂರಾತಿ ಇದ್ದು, ಅದರಲ್ಲಿ 640 ಹುದ್ದೆ ಭರ್ತಿಯಾಗಿದೆ. ಇನ್ನೂ 160 ಭರ್ತಿಯಾಗಬೇಕಿದೆ. ಎಸ್‌ಎಸ್‌ಎಲ್‌ಸಿ ಪಾಸಾದವರು, 19 ವರ್ಷ ಪೂರ್ಣಗೊಂಡವರು, ಅರ್ಜಿ ಸಲ್ಲಿಸಬಹುದು. ಸರಕಾರದ ನಿಯಮದಂತೆ ಅವರ ನೇಮಿಸಲಾಗುತ್ತದೆ. ದಿನ ಸಂಬಳದಂತೆ ಸಂಬಳ ನೀಡಲಾಗುತ್ತದೆ. ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದರು.

ಇತರೆ ಚರ್ಚಿಸಲಾದ ವಿಷಯಗಳು: ಜಾತಿ ಪ್ರಮಾಣಪತ್ರ ತಡಮಾಡದೇ ವಿತರಿಸುವಂತೆ, ಅಪಾಯಕಾರಿ ಮರಗಳ ತೆರವು ಮಾಡುವಂತೆ, ಕ್ಯಾಬ್‌ ಬಾಡಿಗೆ ಮಾಡಿ ಹಣ ನೀಡದೇ ವಂಚನೆ ನಡೆಸಿದ ವ್ಯಕ್ತಿಯಿಂದ ಹಣ ಪಾವತಿ ಮಾಡಿಸುವಂತೆ, ಎಸಿ ಕಚೇರಿಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರ ಅಳವಡಿಸುವಂತೆ, ಲೋಡಿಗೋಷನ್‌ ಆಸ್ಪತ್ರೆ ಬಳಿ ಫುಟ್‌ಪಾತ್‌, ರಸ್ತೆ ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿರುವುದನ್ನು ತೆರವು ಮಾಡುವಂತೆ, ಕೋಟಿಮರ ಅಂಗವಾಡಿ ಬಳಿ ಕಾಡುಪೊದೆ ತೆರವು ಮಾಡುವಂತೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

ಇಲಾಖೆಗಳ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು, ಎಸ್‌ಸಿ, ಎಸ್‌ಟಿ ಸಮುದಾಯದ ಪ್ರಮುಖರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್‌ ಕೊಡಿಸುವುದಾಗಿ ವಂಚನೆ: ಆರೋಪಿ ಬಂಧನ
ಹಿಪ್ಪರಗಿಯಲ್ಲಿ ನಿಲ್ಲಿಸಿದ್ದ ಕಾರು ಸ್ಫೋಟ !