ಎಂ.ಬಿ. ನಾಡಗೌಡ ಮಾತನಾಡಿ, ಗ್ರಾಮ ಪಂಚಾಯಿತಿ ನೌಕರರಿಗೆ ಕಳೆದ 7- 8 ವರ್ಷಗಳಿಂದ ವೇತನ ಪರಿಷ್ಕರಣೆ ಆಗದೆ ಇವತ್ತಿನ ಬೆಲೆ ಏರಿಕೆ ದಿನಗಳಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ ಎಂದರು.
ಗದಗ: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಜಾರಿ ಮಾಡಲು ಹಾಗೂ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯ ಗ್ರಾಪಂ ನೌಕರರ ಸಂಘದ ವತಿಯಿಂದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮುಳಗುಂದ ನಾಕಾದಿಂದ ಜಿಪಂ ಕಚೇರಿಯವರೆಗೆ ಪಾದಯಾತ್ರೆ ಮೂಲಕ ತೆರಳಿ ಪ್ರತಿಭಟನೆ ನಡೆಸಿ, ಗ್ರಾಪಂ ನೌಕರರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಎಂ.ಬಿ. ನಾಡಗೌಡ ಮಾತನಾಡಿ, ಗ್ರಾಮ ಪಂಚಾಯಿತಿ ನೌಕರರಿಗೆ ಕಳೆದ 7- 8 ವರ್ಷಗಳಿಂದ ವೇತನ ಪರಿಷ್ಕರಣೆ ಆಗದೆ ಇವತ್ತಿನ ಬೆಲೆ ಏರಿಕೆ ದಿನಗಳಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಈಗ ಸಿಗುತ್ತಿರುವ ವೇತನದಲ್ಲಿ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯಕ್ಕಾಗಿ ಸಾಕಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ದುಡಿಯುವ ಜನರಿಗೆ ಸಹಾಯ ಮಾಡಬೇಕು. ಬೆಲೆ ಏರಿಕೆಗೆ ಅನುಗುಣವಾಗಿ ಹೊರಡಿಸಿದ ಆದೇಶದನ್ವಯ ಕೂಡಲೆ ವೇತನ ಬಿಡುಗಡೆ ಮಾಡಬೇಕು ಎಂದರು.
ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ ವಸೂಲಿಗಾರ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ನೀರುಗಂಟಿಗಳು, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರೆಂದು ಘೋಷಿಸಬೇಕು. ಗ್ರಾಪಂಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರು ನಿವೃತ್ತಿ ಅಥವಾ ಮರಣ ಹೊಂದಿದರೆ, ₹6 ಲಕ್ಷ ಇಡಗಂಟು ಕೊಡಬೇಕು. ಗ್ರಾಮ ಪಂಚಾಯಿತಿಯಲ್ಲಿ ಠರಾವು ಮೂಲಕ ನೇಮಕಾತಿಯಾಗಿರುವ ಸಿಬ್ಬಂದಿಗೆ ಜಿಪಂದಿಂದ ಅನುಮೋದನೆ ಆಗದೇ ಇದ್ದರೂ ಅಂತಹ ಸಿಬ್ಬಂದಿಗಳಿಗೂ ಇಡಗಂಟು ನೀಡಲು ಆದೇಶ ನೀಡಬೇಕು. ಸೇರಿದಂತೆ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಲಾಯಿತು.
ಈ ವೇಳೆ ಜಿ.ಎಂ. ಜೈನಖಾನ್, ರುದ್ರಪ್ಪ ಕಂದಗಲ್ಲ ಸೇರಿದಂತೆ ಗ್ರಾಪಂ ನೌಕರರ, ಸಿಐಟಿಯು ಪದಾಧಿಕಾರಿಗಳು ಇದ್ದರು.
ಅಬ್ಬಿಗೇರಿ ಗ್ರಾಮದ ವ್ಯಕ್ತಿ ನಾಪತ್ತೆ
ನರೇಗಲ್ಲ: ಸಮೀಪದ ಅಬ್ಬಿಗೇರಿ ಗ್ರಾಮದ ನಾಗಪ್ಪ ದೇವಪ್ಪ ಪೂಜಾರ(52) ಜು. 18ರಂದು ಕಾಣೆಯಾಗಿದ್ದಾರೆ.ನಾಗಪ್ಪ ಪೂಜಾರ ಕಾಳಕಡಿ ವ್ಯಾಪಾರಸ್ಥರಾಗಿದ್ದು, ಜು. 18 ರಂದು ಸಂಜೆ ತಮ್ಮ ಮನೆಯಿಂದ ಗದಗ ನಗರಕ್ಕೆ ಕಡಲೆ ವ್ಯವಹಾರದ ಹಣ ತರುವುದಾಗಿ ಹೇಳಿ ಹೋದವರು ಈ ವರೆಗೂ ಮನೆಗೆ ಮರಳಿ ಬಾರದೇ ಎಲ್ಲಿಯೋ ಹೋಗಿದ್ದಾರೆ ಎನ್ನಲಾಗಿದೆ.ಎತ್ತರ 5.6 ಅಡಿ, ಸಾಧಾರಣ ಮೈಕಟ್ಟು, ಕೋಲು ಮುಖ, ಸಾದಗಪ್ಪು ಮೈಬಣ್ಣ, ತಲೆಯಲ್ಲಿ ಕರಿಬಿಳಿ ಕೂದಲು ಹೊಂದಿರುತ್ತಾರೆ. ಕನ್ನಡ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ತಿಳಿ ಕಂದು ಬಣ್ಣದ ಶರ್ಟ್, ಕರಿ ಬಣ್ಣದ ಪ್ಯಾಂಟ್ ಧರಿಸಿದ್ದಾರು. ಈ ಚಹರೆಪಟ್ಟಿಯುಳ್ಳ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ನರೇಗಲ್ಲ ಪೊಲೀಸ್ ಠಾಣೆಗೆ ಇಲ್ಲವೇ ಗದಗ ಜಿಲ್ಲಾ ಪೊಲೀಸ್ ಕಚೇರಿಗೆ ಗದಗ ಕಂಟ್ರೋಲ್ ರೂಂ. 9480804400, ಡಿಎಸ್‌ಪಿ ನರಗುಂದ ಉಪ- ವಿಭಾಗ ಮೊ. 9480804408 ಸಂಪರ್ಕಿಸಬಹುದು. ಈ ಕುರಿತು ನರೇಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.