ಕ್ಷೇತ್ರ ವಿಂಗಡಿಸದೇ ಮಹಿಳಾ ಮೀಸಲಾತಿ ಜಾರಿಗೆ ತರಲು ಆಗ್ರಹ

KannadaprabhaNewsNetwork |  
Published : Apr 29, 2026, 02:15 AM IST
ಕೆಪಿಸಿಸಿ ವಕ್ತಾರೆ ಸ್ವಾತಿ ಚಂದ್ರಶೇಖರ | Kannada Prabha

ಸಾರಾಂಶ

ಕೇಂದ್ರದ ಎನ್‌ಡಿಎ ಸರ್ಕಾರ ದೇಶದ ಮಹಿಳೆಯರಿಗೆ ಗೌರವ ಕೊಡುವುದಾದರೆ 2023ರ ಮಸೂದೆಯನ್ನು ಜಾರಿಗೊಳಿಸಿ ಶೇ. 33ರಷ್ಟು ಮಹಿಳಾ ಮೀಸಲಾತಿ ಕೊಡಬೇಕು. ಕ್ಷೇತ್ರ ಮರುವಿಂಗಡಣೆಯೊಂದಿಗೆ ಮಹಿಳಾ ಮೀಸಲಾತಿ ಜೋಡಿಸುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಕೆಪಿಸಿಸಿ ವಕ್ತಾರೆ ಸ್ವಾತಿ ಚಂದ್ರಶೇಖರ ಹೇಳಿದರು.

ಹಾವೇರಿ: ಕೇಂದ್ರದ ಎನ್‌ಡಿಎ ಸರ್ಕಾರ ದೇಶದ ಮಹಿಳೆಯರಿಗೆ ಗೌರವ ಕೊಡುವುದಾದರೆ 2023ರ ಮಸೂದೆಯನ್ನು ಜಾರಿಗೊಳಿಸಿ ಶೇ. 33ರಷ್ಟು ಮಹಿಳಾ ಮೀಸಲಾತಿ ಕೊಡಬೇಕು. ಕ್ಷೇತ್ರ ಮರುವಿಂಗಡಣೆಯೊಂದಿಗೆ ಮಹಿಳಾ ಮೀಸಲಾತಿ ಜೋಡಿಸುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಕೆಪಿಸಿಸಿ ವಕ್ತಾರೆ ಸ್ವಾತಿ ಚಂದ್ರಶೇಖರ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಚೀನ ಕಾಲದ ಮಹಾಭಾರತದಿಂದ ಇಲ್ಲಿಯವರೆಗೂ ಮಹಿಳೆಯರನ್ನು ದಾಳವಾಗಿ ಬಳಸಿಕೊಂಡು ಬರುತ್ತಿರುವುದು ವಿಷಾದನೀಯ ಸಂಗತಿ. ಕೇಂದ್ರ ಸರ್ಕಾರ ವಿಧಾನಸಭೆ, ಪಾರ್ಲಿಮೆಂಟ್‌ಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ನೀಡಬೇಕು. 2023ರಲ್ಲಿ ಕಾಂಗ್ರೆಸ್ ಪಕ್ಷದ ಸಹಕಾರದೊಂದಿಗೆ ಬಿಲ್‌ಗೆ ಒಪ್ಪಿಗೆ ಸೂಚಿಸಲಾಗಿದೆ. ಆದರೆ ಪ್ರಸ್ತುತ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಸಂವಿಧಾನ ತಿದ್ದುಪಡಿಗೆ ಅಗತ್ಯವಿರುವ ಬಹುಮತ ಇಲ್ಲ. ಆದಾಗ್ಯೂ ಪಂಚ ರಾಜ್ಯಗಳ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ತರಾತುರಿಯಲ್ಲಿ ಅಧಿವೇಶನ ಕರೆದು ವಿಧೇಯಕ ಜಾರಿಗೆ ತರುವ ಬಹುದೊಡ್ಡ ಹುನ್ನಾರ ನಡೆಸಿದ್ದಾರೆಂದು ಆರೋಪಿಸಿದರು.ಈ ಬಿಜೆಪಿ ಸರ್ಕಾರಕ್ಕೆ ಪಾರ್ಲಿಮೆಂಟ್, ವಿಧಾನಸಭೆಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳಲು ಇಷ್ಟವಿಲ್ಲ. ಬಿಜೆಪಿ ಮಹಿಳೆಯರ ಹೆಸರಿನಲ್ಲಿ ತಮ್ಮ ರಾಜಕೀಯ ಬೇಳೆ ಬೆಯಿಸಿಕೊಳ್ಳಲು ಹೊರಟಿದ್ದಾರೆ. ಹಾಗಾಗಿಯೇ ಈ ಮಸೂದೆಯನ್ನು ಅಂಗೀಕಾರ ಮಾಡಲಿಲ್ಲ. ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಮಾತ್ರ ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ಚಿಂತಿಸಲಾಗುತ್ತಿದೆ. ಹಾಗೇನಾದರೂ ಆದರೆ ದಕ್ಷಿಣ ಭಾರತ ರಾಜ್ಯಗಳ ಸಂಸದರು ಲೆಕ್ಕಕ್ಕಷ್ಟೇ ಸೀಮಿತವಾಗುತ್ತಾರೆ. ಕ್ಷೇತ್ರ ಪುನರ್ ವಿಂಗಡಣೆ ಮಾಡಿದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದರು.2011ರ ಜನಗಣತಿ ಆಧಾರದ ಮೇಲೆ ಮಹಿಳಾ ಮೀಸಲಾತಿ ಜಾರಿಗೆ ತರಬೇಕಿತ್ತು. ಎಲ್ಲಿ ಜನಸಂಖ್ಯೆ ಹೆಚ್ಚಿದೆಯೋ ಅಲ್ಲಿ ಕ್ಷೇತ್ರ ಹೆಚ್ಚಳಕ್ಕೆ ಹುನ್ನಾರ ನಡೆಸಿದ್ದಾರೆ. ಮಹಿಳಾ ಮೀಸಲಾತಿಗೆ ವಿರೋಧ ಮಾಡಿದರೆಂದು ಕಾಂಗ್ರೆಸ್ ವಿರುದ್ಧ ಸುಳ್ಳು ಅಪಪ್ರಚಾರ ಮಾಡಬೇಡಿ. ಸ್ವಪಕ್ಷಿಯರೇ ನಿಮ್ಮ ನಿಲುವನ್ನು ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್ ಯಾವಾಗಲೂ ದಕ್ಷಿಣ ಭಾರತ ವಿರೋಧಿ, ಸಂವಿಧಾನ ವಿರೋಧಿ ಕೆಲಸವನ್ನು ಮಾಡಿಲ್ಲ. ಈ ಕೂಡಲೇ ಡಿ-ಲಿಮಿಟೇಶನ್ ಸರ್ಕಸ್, ದೇಶದ ಐಕ್ಯತೆಯನ್ನು ವಿಭಜಿಸುವ ಹುನ್ನಾರವನ್ನು ಬಿಟ್ಟು ಮಹಿಳಾ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ರಾಜ್ಯ ಕಾರ್ಯದರ್ಶಿ ಪ್ರೇಮಾ ಪಾಟೀಲ, ಹಂಗಾಮಿ ಜಿಲ್ಲಾಧ್ಯಕ್ಷೆ ಶಾಂತಕ್ಕ ಶಿರೂರ, ಗೀತಾ ಪ್ರಕಾಶ, ವಸಂತಾ ಬಾಗೂರ, ಶಂಕರ ಮೆಹರವಾಡೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿ ಯೋಜನೆಯಿಂದ ಮಹಿಳೆಯರು ಸದೃಢ: ವಿವೇಕ ಯಾವಗಲ್‌
ವಿಮಾನ ನಿಲ್ದಾಣಗಳಿಗೆ ಸಾಧಕರ ಹೆಸರಿಡಲು ಆಗ್ರಹ