ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ವಿದ್ಯುತ್ ಓವರ್ ಲೋಡ್ ಇರುವ ಕಡೆ ಹೆಚ್ಚುವರಿ ಟಿಸಿ ಅಳವಡಿಸುವಂತೆ ತಾಲೂಕು ರೈತಸಂಘ ಆಗ್ರಹಪಡಿಸಿದೆ.ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ಪಟ್ಟಣದ ಸೆಸ್ಕಾಂ ವಿಭಾಗೀಯ ಕಚೇರಿಗೆ ಆಗಮಿಸಿದ ರೈತರ ನಿಯೋಗ ಸೆಸ್ಕಾಂ ಕಾರ್ಯಪಾಲಕ ಅಭಿಯಂತರ ಎಚ್.ಕೆ.ರಮೇಶ್ ಅವರನ್ನು ಭೇಟಿ ಮಾಡಿ ತಾಲೂಕಿನ ವಿದ್ಯುತ್ ಬಳಕೆದಾರ ರೈತರ ಹಿತ ಕಾಯುವಂತೆ ಒತ್ತಾಯಿಸಿದರು.
ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚು ವಿದ್ಯುತ್ ಬಳಕೆದಾರ ರೈತರು ಕೆ.ಆರ್.ಪೇಟೆ ತಾಲೂಕಿನಲ್ಲಿದ್ದಾರೆ. ತಾಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆಯಿದ್ದರೂ ಹೇಮಾವತಿ ನದಿ ಕಾಲುವೆಗಳಲ್ಲಿ ನೀರು ಹರಿಯುತ್ತಿರುವ ಪರಿಣಾಮ ಕೆರೆ-ಕಟ್ಟೆಗಳಲ್ಲಿ ಒಂದಷ್ಟು ನೀರಿದ್ದು ಅಂತರ್ಜಲ ಮಟ್ಟ ಅಭಿವೃದ್ಧಿಯಾಗಿದೆ. ದಿನೇ ದಿನೇ ಪಂಪ್ ಸೆಟ್ ಆಧಾರಿತ ಕೃಷಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ. ವಿದ್ಯುತ್ ಬೇಡಿಕೆ ಹೆಚ್ಚಿದಂತೆ ವಿದ್ಯುತ್ ಪರಿವರ್ತಕಗಳ (ಟಿ.ಸಿ) ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದ್ದು ಓವರ್ ಲಫಡ್‌ನಿಂದ ರೈತರ ಕೃಷಿ ಪಂಪ್ ಸೆಟ್ಟುಗಳು ಸುಟ್ಟು ಹೋಗುತ್ತಿವೆ ಎಂದರು.ಒಂದು ಮೋಟಾರ್ ಸುಟ್ಟು ಹೋದರೆ ಅದರ ರಿಪೇರಿಗೆ ರೈತರು ಕನಿಷ್ಠ ೧೦ ಸಾವಿರ ರು. ವ್ಯಯಿಸಬೇಕಾಗಿದೆ. ಆದ ಕಾರಣ ಸೆಸ್ಕಾಂ ಕಾರ್ಯಪಾಲಕ ಅಭಿಯಂತರರು ತಕ್ಷಣವೇ ತಮ್ಮ ಕಾರ್ಯ ವ್ಯಾಪ್ತಿಯ ಎಲ್ಲಾ ಸೆಕ್ಷನ್ ಅಫೀಸರ್‌ಗಳ ಸಭೆ ನಡೆಸಿ ಎಲ್ಲೆಲ್ಲಿ ಟಿಸಿಗಳಿಗೆ ಓವರ್ ಲೋಡ್ ಇದೆ ಎನ್ನುವ ಮಾಹಿತಿ ಪಡೆಯಬೇಕು. ಓವರ್ ಲೋಡ್ ಇರುವ ಕಡೆ ಹೆಚ್ಚುವರಿ ಟಿ.ಸಿ ಗಳನ್ನು ಅಳವಡಿಸಿ ರೈತರ ನೆರವಿಗೆ ನಿಲ್ಲುವಂತೆ ರೈತರು ಆಗ್ರಹಪಡಿಸಿದರು.
ಒಂದು ಅಣೆಕಟ್ಟೆ ಕಟ್ಟಿ ರೈತರ ಭೂಮಿಯನ್ನು ನೀರಾವರಿಗೆ ಒಳಪಡಿಸಲು ನಮ್ಮ ಸರ್ಕಾರಗಳು ಕೋಟ್ಯಂತರ ರು. ವ್ಯಯಿಸಬೇಕು. ಆದರೆ, ಪಂಪ್ ಸೆಟ್ ಆಧಾರಿತ ಕೃಷಿ ಪದ್ಧತಿಯಲ್ಲಿನ ಕೊಳವೆ ಬಾವಿಗಳನ್ನು ತೋಡಿಸುವುದರಿಂದ ಹಿಡಿದು ಪ್ರತಿಯೊಂದನ್ನೂ ರೈತನೇ ಭರಿಸುತ್ತಾನೆ. ಸರ್ಕಾರ ನಮಗೆ ಕನಿಷ್ಠ ಗುಣಮಟ್ಟದ ವಿದ್ಯುತ್ ನೀಡಿದರೆ ಸಾಕು. ನಾವು ದೇಶಕ್ಕೆ ಅನ್ನ ಬೆಳೆದುಕೊಡುತ್ತೇವೆ ಎಂದು ತಾಲೂಕು ರೈತಸಂಘದ ಅಧ್ಯಕ್ಷ ಪುಟ್ಟೇಗೌಡ ಹೇಳಿದರು.ವಿದ್ಯುತ್ ಇಲಾಖೆ ರೈತರಿಗೆ ಕಿರುಕುಳ ನೀಡದೆ ಸೇವೆ ನೀಡಬೇಕು. ತಾಲೂಕಿನಲ್ಲಿ ಹೊಸ ಪಂಪ್ ಸೆಟ್ ರೈತರು ಒಂದು ಟಿಸಿ ಪಡೆದುಕೊಳ್ಳಲು ಗುತ್ತಿಗೆದಾರರಿಗೆ ಲಕ್ಷಾಂತರ ರು. ಲಂಚ ನೀಡಬೇಕಾದ ಪರಿಸ್ಥಿತಿಯಿದೆ. ಹಣಕೊಟ್ಟವರಿಗೆ ತಕ್ಷಣವೇ ಟಿಸಿ ನೀಡುತ್ತಿರುವ ಇಲಾಖೆ ಬಡ ರೈತರಿಗೆ ಒಂದು ಟಿಸಿ ನೀಡಲು ವರ್ಷಾನುಗಟ್ಟಲೆ ಸುತ್ತಿಸುತ್ತಿದೆ. ಸೆಸ್ಕಾಂ ವಿಭಾಗದಲ್ಲಿ ಎರಡು ಲಾರಿಗಳಿವೆ. ಆದರೆ, ಒಂದು ಟಿಸಿ ಸುಟ್ಟುಹೋದರೆ ಸಾಗಣಿಕೆಯಿಂದ ಹಿಡಿದು ಟಿಸಿಯನ್ನು ಎತ್ತಿ ಇಳಿಸುವವರೆಗೂ ರೈತರೇ ಹಣ ವ್ಯಯಿಸಬೇಕಿದೆ. ಎಲ್ಲವನ್ನೂ ರೈತರೇ ಮಾಡುವುದಾದರೆ ಸುಖಾಸುಮ್ಮನೆ ಏತಕ್ಕಾದರೂ ಲಾರಿಗಳನ್ನು ಇಟ್ಟುಕೊಂಡು ಅದಕ್ಕೆ ಮಾಸಿಕ ಬಾಡಿಗೆ ನೀಡುತ್ತೀರಿ. ರೈತರ ಸುಲಿಗೆಯನ್ನು ತಕ್ಷಣವೇ ನಿಲ್ಲಿಸಿ ಎಂದು ಆಗ್ರಹಿಸಿದರು.
ರೈತರ ಸಮಸ್ಯೆಗಳನ್ನು ಆಲಿಸಿದ ಕಾರ್ಯಪಾಲಕ ಅಭಿಯಂತರ ಹೆಚ್.ಕೆ.ರಮೆಶ್ ರೈತರ ಸಮಸ್ಯೆಗಳ ಪರಿಹಾರಕ್ಕೆ ಗಂಭೀರ ಪ್ರಯತ್ನ ನಡೆಸುವ ಭರವಸೆ ನೀಡಿದರು.ಸೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರದೀಪ್, ರೈತ ಮುಖಂಡರಾದ ಕರೋಟಿ ತಮ್ಮಯ್ಯ, ಕೃಷ್ಣಾಪುರ ರಾಜಣ್ಣ, ಕೃಷ್ಣೇಗೌಡ, ಲಕ್ಷ್ಮೀಪುರ ನಾಗಣ್ಣ, ಅಕ್ಕಿಮಂಚನಹಳ್ಳಿ ಹೊನ್ನೇಗೌಡ, ಕಾಗೇಪುರ ಮಹೇಶ್, ಚೌಡೇನಹಳ್ಳಿ ಕೃಷ್ನೇಗೌಡ ಸೇರಿದಂತೆ ಹಲವರಿದ್ದರು.