ಗದಗ: ಜಿಲ್ಲೆಯ ಎಲ್ಲ ಪಡಿತರ ಅಂಗಡಿಗಳ ಮುಂದೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮಾಹಿತಿ ಒಳಗೊಂಡಿರುವ ಬ್ಯಾನರ್ ಅಳವಡಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.
ಗದಗ ನಗರದಲ್ಲಿನ ಹಳೆಯ ಬಸ್ ನಿಲ್ದಾಣ ಹಾಗೂ ಹೊಸ ಬಸ್ ನಿಲ್ದಾಣಗಳ ಆವರಣದ ಸ್ವಚ್ಛತೆಯಿಂದ ಇರುವಂತೆ ನೋಡಿಕೊಳ್ಳಬೇಕು. ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥಿವಾಗಿ ಇರುವಂತೆ ಕ್ರಮ ವಹಿಸಬೇಕು. ಶಿಶುಪಾಲನಾ ಕೇಂದ್ರ ವ್ಯವಸ್ಥಿತವಾಗಿರುವಂತೆ ನೋಡಿಕೊಳ್ಳಬೇಕು. ಮಹಿಳೆಯರಿಗೆ ವಿಶ್ರಾಂತಿ ಕೊಠಡಿಯ ಸ್ವಚ್ಛತೆ ಕುರಿತು ಗಮನಹರಿಸಬೇಕು. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿನ ಬಸ್ ನಿಲ್ದಾಣಗಳು ಸ್ವಚ್ಛವಾಗಿರುವಂತೆ ಹಾಗೂ ಮೂಲಭೂತ ಸೌಲಭ್ಯ ಇರುವಂತೆ ಗಮನ ಹರಿಸಬೇಕು. ಈ ಕುರಿತು ಸಮಿತಿಯ ಸದಸ್ಯರು ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸುವರು. ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಗಳನ್ನು ತಾಲೂಕು ಮತ್ತು ಗ್ರಾಪಂ ಮಟ್ಟದಲ್ಲಿಯೂ ಜರುಗಿಸಬೇಕು. ಗ್ಯಾರಂಟಿ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಶೀಘ್ರವಾಗಿ ತಲುಪುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಪಂ ಸಿಇಒ ಭರತ್ ಎಸ್. ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಮುಖ್ಯಸ್ಥರು ಅವುಗಳ ಸಮರ್ಪಕ ಅನುಷ್ಠಾನದ ಕುರಿತು ಪರಾಮರ್ಶೆ ನಡೆಸಬೇಕು. ಅರ್ಹರಿಗೆ ಯೋಜನೆಗಳ ಸೌಲಭ್ಯ ನಿಗದಿತ ಅವಧಿಯೊಳಗೆ ಲಭ್ಯವಾಗುವಂತೆ ಕ್ರಮ ವಹಿಸಬೇಕು. ಸರ್ಕಾರದ ಸೌಲಭ್ಯಗಳ ಮೂಲಕ ಜನಸಾಮಾನ್ಯರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿ ಎಂದರು.ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನದ ಪ್ರಾಧಿಕಾರದ ಸದಸ್ಯ ಅಶೋಕ ಮಂದಾಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ಮಾರ್ಗದರ್ಶನದ ಮೇರೆಗೆ ಗದಗ ತಾಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆಯನ್ನು ಅರ್ಹರೆಲ್ಲರಿಗೂ ತಲುಪಿಸುವಲ್ಲಿ ಸಫಲರಾಗಿದ್ದೇವೆ. ಅದೇ ರೀತಿ ಇನ್ನುಳಿದ ಯೋಜನೆಗಳ ಸಂಪೂರ್ಣ ಪ್ರಗತಿಗೆ ಪ್ರಯತ್ನಿಸಲಾಗುತ್ತಿದೆ. ಅಧಿಕಾರಿಗಳೆಲ್ಲರೂ ಈ ನಿಟ್ಟಿನಲ್ಲಿ ಕಾರ್ಯನಿರ್ವಹಣೆಗೆ ಮುಂದಾಗಬೇಕು ಎಂದರು.
ಗೃಹಲಕ್ಷ್ಮೀ ಯೋಜನೆಯಡಿ ಏಪ್ರಿಲ್ 2025ರ ಅಂತ್ಯದ ವರೆಗೆ 2,55,916 ನೋಂದಣಿಯಾದ ಅರ್ಜಿಗಳ ಪೈಕಿ 2,50,421 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ವಾಕರಸಾ ಸಂಸ್ಥೆಯಿಂದ ಯೋಜನೆ ಆರಂಭವಾದಾಗಿನಿಂದ ಏಪ್ರಿಲ್ 2025ರ ವರೆಗೆ 1841.55 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ₹114660.87 ಲಕ್ಷ ಮಹಿಳಾ ಪ್ರಯಾಣಿಕರ ಆದಾಯವಾಗಿದೆ. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಡಿಸೆಂಬರ್ 2024 ರ ಅಂತ್ಯದ ವರೆಗೆ 2,34,190 ಪಡಿತರ ಚೀಟಿದಾರರಿಗೆ ಡಿಬಿಟಿ ಮೂಲಕ ₹12,80,34,140 ಸಂದಾಯ ಮಾಡಲಾಗಿದೆ. ಯುವನಿಧಿ ಯೋಜನೆಯಡಿ ಯೋಜನೆ ಆರಂಭದಿಂದ ಮೇ 2025ರ ವರೆಗೆ 3807 ಅರ್ಹ ಫಲಾನುಭವಿಗಳಿಗೆ ₹7,55,19,000 ಡಿಬಿಟಿ ಮೂಲಕ ಹಣ ವರ್ಗಾವಣೆಯಾಗಿದೆ. ಗೃಹಜ್ಯೋತಿ ಯೋಜನೆಯಡಿ ಯೋಜನೆ ಆರಂಭದಿಂದ ಏಪ್ರಿಲ್ 2025ರ ವರೆಗೆ 2,73,251 ಸ್ಥಾವರಗಳು ನೋಂದಣಿಯಾಗಿದ್ದು, ಶೇ 98.68 ಪ್ರಗತಿಯಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಉಪಾಧ್ಯಕ್ಷೆ ನೀಲಮ್ಮ ಬೋಳನವರ, ಪಿ.ಬಿ. ಅಗಳವಾಡಿ, ದೀಪಕ ಲಮಾಣಿ, ಫಕ್ರುಸಾಬ ಚಿಕ್ಕಮಣ್ಣೂರ ಹಾಗೂ ಸಮಿತಿಯ ಸದಸ್ಯರು, ಅಧಿಕಾರಿಗಳು ಇದ್ದರು.