ಗೊಂಡರಿಗೆ ಎಸ್ಟಿ ಪ್ರಮಾಣ ಪತ್ರ ನೀಡಲು ಆಗ್ರಹ

KannadaprabhaNewsNetwork |  
Published : Sep 27, 2026, 02:30 AM IST
ಭಟ್ಕಳ ಮಾರುಕೇರಿಯಲ್ಲಿ ನಡೆದ ಪ್ರಜಾಸೇವೆ ಸಭೆಯಲ್ಲಿ ಸಹಾಯಕ ಆಯುಕ್ತ ಮಹೇಶ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು. | Kannada Prabha

ಸಾರಾಂಶ

ಕಳೆದ 8 ವರ್ಷಗಳಿಂದ ಪ್ರಮಾಣಪತ್ರ ಕೊಡಲು ಮೀನಾಮೇಷ ಮಾಡುತ್ತಿದ್ದಾರೆ. ಅನಾವಶ್ಯಕ ಗೊಂದಲ ಮೂಡಿಸಿದ್ದಾರೆ. ಪಕ್ಕದ ಬೈಂದೂರು ಮುಂತಾದ ಕಡೆ ಗೊಂಡರಿಗೆ ಎಸ್ಟಿ ಪ್ರಮಾಣಪತ್ರ ಕೊಡುತ್ತಿದ್ದರೂ ಭಟ್ಕಳದಲ್ಲಿ ಮಾತ್ರ ಕೊಡುತ್ತಿಲ್ಲ.

ಭಟ್ಕಳ: ತಾಲೂಕಿನ ಮಾರುಕೇರಿಯಲ್ಲಿ ಸಹಾಯಕ ಆಯುಕ್ತ ಮಹೇಶ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಸಾರ್ವಜನಿಕರು ಸಮಸ್ಯೆಗಳ ಸುರಿಮಳೆಗೈದು ಶೀಘ್ರ ಪರಿಹಾರಕ್ಕೆ ಆಗ್ರಹಿಸಿದರು.

ಗೊಂಡರಿಗೆ ಎಸ್ಟಿ ಪ್ರಮಾಣ ಪತ್ರ ಕೊಡದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಗ್ರಾಪಂ ಮಾಜಿ ಸದಸ್ಯ ನಾರಾಯಣ ಗೊಂಡ ಮತ್ತಿತರರು, ಕಳೆದ 8 ವರ್ಷಗಳಿಂದ ಪ್ರಮಾಣಪತ್ರ ಕೊಡಲು ಮೀನಾಮೇಷ ಮಾಡುತ್ತಿದ್ದಾರೆ. ಅನಾವಶ್ಯಕ ಗೊಂದಲ ಮೂಡಿಸಿದ್ದಾರೆ. ಪಕ್ಕದ ಬೈಂದೂರು ಮುಂತಾದ ಕಡೆ ಗೊಂಡರಿಗೆ ಎಸ್ಟಿ ಪ್ರಮಾಣಪತ್ರ ಕೊಡುತ್ತಿದ್ದರೂ ಭಟ್ಕಳದಲ್ಲಿ ಮಾತ್ರ ಕೊಡುತ್ತಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಇಲಾಖೆಯ ಅಧಿಕಾರಿ, ಜಾತಿ ನೀತಿ ಸಾಬೀತುಪಡಿಸಿಲ್ಲ ಎಂದು ಜಿಲ್ಲಾ ಜಾತಿ ಸಮಿತಿ ತಡೆ ಹಿಡಿದಿದ್ದು, ಹೀಗಾಗಿ ಗೊಂಡರಿಗೆ ಎಸ್ಟಿ ಪ್ರಮಾಣಪತ್ರ ನೀಡುತ್ತಿಲ್ಲ ಎಂದಾಗ, ಈ ಬಗ್ಗೆ ಸ್ಪಷ್ಟ ಉತ್ತರ ನೀಡುವ ಅಗತ್ಯ ಇದೆ ಎಂದು ಗೊಂಡ ಸಮಾಜದ ಯುವಕ ಸಂತೋಷ ಗೊಂಡ ಮುಂತಾದವರು ಆಗ್ರಹಿಸಿದರು.

ಜೆಜೆಎಂ ಕಾಮಗಾರಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು, ಕೋಟಖಂಡದ ಅರೆಕಲ್ಲು ಗೋಳಿ ಬಳಿ ಪೈಪ್ ಲೈನ್ ಮಾಡಿಲ್ಲ. ಎಲ್ಲ ಕಡೆ ಅರ್ಧಂಬರ್ಧ ಕಾಮಗಾರಿ ಮಾಡಿದ್ದಲ್ಲದೇ ರಸ್ತೆ ಬದಿಗೆ ಅಗೆದಿದ್ದು, ಸರಿ ಮುಚ್ಚಿಲ್ಲ. ಇದರಿಂದ ಜನರಿಗೆ ತೊಂದರೆ ಆಗುತ್ತಿದ್ದು, ಆದಷ್ಟು ಬೇಗ ಸಮಸ್ಯೆ ಸರಿಪಡಿಸಬೇಕೆಂದು ಜೆಜೆಎಂ ಅಭಿಯಂತರರನ್ನು ಆಗ್ರಹಿಸಿದರು.

ಗ್ರಾಪಂ ಮಾಜಿ ಉಪಾಧ್ಯಕ್ಷ ಎಂ.ಡಿ. ನಾಯ್ಕ, ಪಿಡಬ್ಲ್ಯುಡಿ ಎಂಜಿನಿಯರ್ ಕಚೇರಿಯಲ್ಲೂ ಇರುವುದಿಲ್ಲ. ಸಾರ್ವಜನಿಕರ ಸಂಪರ್ಕಕ್ಕೂ ಸಿಗುತ್ತಿಲ್ಲ. ಫೋನ್ ಮಾಡಿದರೂ ತೆಗೆಯುತ್ತಿಲ್ಲ. ಇಂದಿನ ಸಭೆಗೂ ಗೈರು ಆಗಿದ್ದಾರೆ. ಅವರು ಎಲ್ಲಿ ಹೋಗಿದ್ದಾರೆ ಎಂದಾಗ, ಸಹಾಯಕ ಆಯುಕ್ತರು ಅವರಿಗೆ ನೋಟಿಸ್ ಕೊಡುವುದಾಗಿ ಹೇಳಿದರು.

ಗ್ರಾಪಂ ಮಾಜಿ ಅಧ್ಯಕ್ಷ ಕೆ.ಜೆ. ನಾಯ್ಕ ಮಾತನಾಡಿ, ಮಾರುಕೇರಿ ಗ್ರಾಪಂನಲ್ಲಿ ಹಲವಾರು ಸಮಸ್ಯೆಗಳಿವೆ. ಪ್ರಜಾಸೇವೆ ಸಭೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ತಿಳಿಸಿದರೆ ಅಧಿಕಾರಿಗಳು ಕ್ರಿಯಾಯೋಜನೆ ಮಾಡಿ ಅನುದಾನ ಒದಗಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಈ ಭಾಗದಲ್ಲಿ ಬಹಳ ವರ್ಷಗಳಿಂದ ಸಮಸ್ಯೆಗಳಿದ್ದು, ಇದನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸಹಾಯಕ ಆಯುಕ್ತ ಮಹೇಶ ಅವರು, ಪ್ರಜಾಸೇವೆ ಸಭೆಯನ್ನು ಪ್ರತಿ ಶನಿವಾರ ನಡೆಸಿ ಜನರ ಸಮಸ್ಯೆ ತಿಳಿಯಲಾಗುತ್ತದೆ. ಇಂತಹ ಸಭೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದರು.

ತಹಸೀಲ್ದಾರ್ ಪ್ರವೀಣ ಕರಾಂಡೆ ಸಭೆಯಲ್ಲಿ 40 ಅರ್ಜಿಗಳು ಬಂದಿದ್ದು, ಇತ್ಯರ್ಥ ಪಡಿಸುತ್ತೇವೆ ಎಂದರು. ಸಭೆಯಲ್ಲಿ ತಾಪಂ ಇಒ ಸುನೀಲ್, ಬಿಇಒ ವೆಂಕಟೇಶ ನಾಯಕ, ಆರ್‌ಎಫ್‌ಒ ವಿಶ್ವನಾಥ ನಾಯ್ಕ, ಪಿಡಿಒ ಉದಯ ಬೋರ್ಕರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರಿಯರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯ
ಜಾನುವಾರುಗಳಿಗೆ ಮೇವಿನ ಕೊರತೆ ಭೀತಿ!