ಹಳಿಯಾಳ: ಮದ್ಯ ಮುಕ್ತ ಗ್ರಾಮವನ್ನಾಗಿಸಿ ಗ್ರಾಮದ ಶಾಂತಿ ನೆಮ್ಮದಿ ಸ್ವಾಸ್ಥ್ಯವನ್ನು ಕಾಪಾಡಬೇಕೆಂದು ತಾಲೂಕಿನ ಮಂಗಳವಾಡ ಗ್ರಾಮಸ್ಥರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಮಂಗಳವಾಡ ಗ್ರಾಮದಲ್ಲಿ ಕಳೆದ ಅನೇಕ ವರ್ಷಗಳಿಂದ ಅಕ್ರಮವಾಗಿ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದ ಗ್ರಾಮದಲ್ಲಿನ ಬಡ ಕುಟುಂಬಗಳು ಸಮಸ್ಯೆಗೊಳಗಾಗಿವೆ. ಗ್ರಾಮದ ಯುವಕರು ಕೂಡಾ ಕೆಟ್ಟ ವ್ಯಸನದ ದಾಸರಾಗುತ್ತಿದ್ದು, ನಿತ್ಯ ಗ್ರಾಮದಲ್ಲಿ ಜನ ಕುಡಿದು ಗಲಾಟೆ ಮಾಡಿ ಗ್ರಾಮದ ಶಾಂತಿ, ನೆಮ್ಮದಿಯನ್ನು ಹಾಳುಗೆಡುವುತ್ತಿದ್ದಾರೆ. ಅದಕ್ಕಾಗಿ ಗ್ರಾಮದ ಸಮಸ್ತ ಹಿರಿಯರು ಹಾಗೂ ಯುವಕರು ಸಭೆ ನಡೆಸಿ ಗ್ರಾಮವನ್ನು ಮದ್ಯ ಮುಕ್ತ ಗ್ರಾಮವನ್ನಾಗಿಸಲು ತೀರ್ಮಾನಿಸಿದ್ದೇವೆ. ನಮ್ಮ ನಿರ್ಧಾರ ಕಾರ್ಯರೂಪಕ್ಕೆ ತರಲು ನಮಗೆ ಜಿಲ್ಲಾಡಳಿತ ಮತ್ತು ತಾಲೂಕಾಡಳಿತದ ಸಹಾಯ ಸಹಕಾರ ಬೇಕು. ಅದಕ್ಕಾಗಿ ಜಿಲ್ಲಾಡಳಿತ ಮತ್ತು ತಾಲೂಕಾಡಳಿತವು ಗ್ರಾಮಕ್ಕೆ ಬಂದು ಮದ್ಯದ ಕುರಿತು ಜನಜಾಗೃತಿ ಮೂಡಿಸಬೇಕೆಂದು ಮನವಿ ಮಾಡಿದ್ದಾರೆ.
ಶ್ರೀ ಲಕ್ಷ್ಮೀ ದೇವಸ್ಥಾನ ಟ್ರಸ್ಟ್ ಸಮಿತಿಯ ಅಧ್ಯಕ್ಷ ರಮೇಶ ಹನುಮಂತ ವಾಲೇಕರ, ಸೋನಪ್ಪ ಸುಣಕಾರ, ಅನಂತ ಜಾವಳೇಕರ, ಶಾಂತಾರಾಮ ಧಾರವಾಡಕರ, ನಾರಾಯಣ ಚೌಗಲೆ, ನಾರಾಯಣ ಮಡಿವಾಳ, ಬಾಬು ಬನೋಶಿ, ಶ್ಯಾಮರಾವ ಪಾಟೀಲ, ಜೈರಾಮ ಕದಂ, ದೇವದಾಸ ಜಾವಳೇಕರ, ಜೀವಪ್ಪ ಬಂಡಾರಿ ಹಾಗೂ ಇತರ ಪ್ರಮುಖರು ಇದ್ದರು.