ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಗೂ ₹ 3,300 ನೀಡಲು ಆಗ್ರಹ

KannadaprabhaNewsNetwork |  
Published : Nov 09, 2025, 02:45 AM IST
8ಎಚ್‌ವಿಆರ್5- | Kannada Prabha

ಸಾರಾಂಶ

ಬೆಳಗಾವಿ ಕಬ್ಬು ಬೆಳೆಗಾರರಿಗೆ ಸರ್ಕಾರ ಘೋಷಣೆ ಮಾಡಿರುವ ರೀತಿಯಲ್ಲೇ ಟನ್ ಕಬ್ಬಿಗೆ ₹ 3,300 ದರವನ್ನು ಜಿಲ್ಲೆಯ ಕಬ್ಬು ಬೆಳೆಗಾರರಿಗೂ ನೀಡಬೇಕೆಂದು ಆಗ್ರಹಿಸಿ ನ. 10ರಂದು ಬೆಳಗ್ಗೆ 10ಕ್ಕೆ ನಗರದ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಕಬ್ಬು ಬೆಳೆಗಾರರು ಪಾಲ್ಗೊಳ್ಳಬೇಕೆಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಹೇಳಿದರು.

ಹಾವೇರಿ: ಬೆಳಗಾವಿ ಕಬ್ಬು ಬೆಳೆಗಾರರಿಗೆ ಸರ್ಕಾರ ಘೋಷಣೆ ಮಾಡಿರುವ ರೀತಿಯಲ್ಲೇ ಟನ್ ಕಬ್ಬಿಗೆ ₹ 3,300 ದರವನ್ನು ಜಿಲ್ಲೆಯ ಕಬ್ಬು ಬೆಳೆಗಾರರಿಗೂ ನೀಡಬೇಕೆಂದು ಆಗ್ರಹಿಸಿ ನ. 10ರಂದು ಬೆಳಗ್ಗೆ 10ಕ್ಕೆ ನಗರದ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಕಬ್ಬು ಬೆಳೆಗಾರರು ಪಾಲ್ಗೊಳ್ಳಬೇಕೆಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕಬ್ಬು ಬೆಳೆಗಾರರ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾವೇರಿ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಕಬ್ಬು ಬೆಳೆಗಾರರ ಸಂಘದ ರೈತ ಮುಖಂಡರನ್ನು ಕರೆಯಿಸಿಕೊಂಡು ಸಭೆಗೆ ಮುಂದಾಗಿದ್ದರು. ಆದರೆ ಆಯ್ದ ರೈತರ ಜತೆಗೆ ಸರಣಿ ಸಭೆ ನಡೆಸಿ ಹಾವೇರಿ ರೈತರನ್ನು ಸಭೆಗೆ ಕರೆಯದೇ ವಾಪಸ್ ಕಳುಹಿಸಿದ್ದಾರೆ. ಜಿಲ್ಲೆಯ ಕಬ್ಬು ಬೆಳೆಗಾರರ ಸಂಕಷ್ಟ, ಸಮಸ್ಯೆಯನ್ನು ಹೇಳಿಕೊಳ್ಳಬೇಕೆಂದರೆ ಸಮಯಾವಕಾಶ ನೀಡದೆ ಹಿಂದಿರುಗಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. ಬೆಳಗಾವಿ, ಬಾಗಲಕೋಟೆಯಲ್ಲಿ 11.25 ಇಳುವರಿ ಬರುತ್ತದೆ ಎಂದು ಟನ್ ಕಬ್ಬಿಗೆ ₹ 3,300 ಘೋಷಣೆ ಮಾಡಿದ್ದಾರೆ. ಆದರೆ ಹಾವೇರಿ ಜಿಲ್ಲೆಯಲ್ಲಿರುವ ಕಾರ್ಖಾನೆಗಳು 9.42 ಇಳುವರಿಯನ್ನು ತೋರಿಸಿ ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡುತ್ತಿವೆ. ಉತ್ತರ ಕರ್ನಾಟಕದ ಎಲ್ಲಾ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಒಂದೇ ದರವನ್ನು ನೀಡಬೇಕು. ಸರ್ಕಾರದ ನಡೆಯನ್ನು ನೋಡಿದರೆ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತಿದೆ. ಸಿಹಿ ನೀಡುವ ರೈತರಿಗೆ ವಿಷ ಕೊಡುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಭೆಯಲ್ಲಿ ಪಾಲ್ಗೊಂಡಿದ್ದ ಕಬ್ಬು ಬೆಳೆಗಾರರ ಸಂಘದ ರೈತ ಮುಖಂಡರಾದ ವಿ.ಎಂ. ಪಾಟೀಲ, ಸಿದ್ದಣ್ಣ ಕಲಕೋಟಿ ಮಾತನಾಡಿ, ಕಬ್ಬಿನ ದರವನ್ನು ಹೋರಾಟದ ಮೂಲಕವೇ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲ ರೈತರು ಒಗ್ಗಟ್ಟಿನಿಂದ ಇರೋಣ. ಸೋಮವಾರದಿಂದ ಪ್ರಾರಂಭಗೊಳ್ಳುವ ಪ್ರತಿಭಟನೆಗೆ ಎಲ್ಲಾ ರೈತರ ಸಹಮತವಿದ್ದು, ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸೋಣ ಎಂದು ಕರೆ ನೀಡಿದರು.

ಸಭೆಯಲ್ಲಿ ಕಬ್ಬು ಬೆಳೆಗಾರ ಮುಖಂಡರಾದ ಈರಯ್ಯ ಹಿರೇಮಠ, ಹನುಮರೆಡ್ಡಿ ನಡುವಿನಮನಿ, ಶಂಭಣ್ಣ ದೊಡ್ಡಮನಿ, ಶಿವಾನಂದ ಮುಗಳಿ, ಪ್ರಭುಲಿಂಗಪ್ಪ ಗೌರಿಮನಿ, ಈರಣ್ಣ ಸಮಗೊಂಡರ, ಚನ್ನವೀರಪ್ಪ ತೆಗ್ಗಿಹಳ್ಳಿ, ಈರಪ್ಪ ಸೀಮಿ, ಮಾಲತೇಶ ಪವಾರ, ಶಿವಾಜಿ ಪವಾರ, ಕಿರಣಕುಮಾರ ಸವಣೂರ, ಫಕ್ಕೀರರೆಡ್ಡಿ ಮರೋಳ, ಜಡೇಸ್ವಾಮಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಜಿಲ್ಲೆಯ ಮೂರು ಕಾರ್ಖಾನೆ ಬಂದ್ ಎಚ್ಚರಿಕೆ: ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಬೆಳಗಾವಿ, ಬಾಗಲಕೋಟೆಯಲ್ಲಿ ಟನ್ ಕಬ್ಬಿಗೆ ₹ 3,300 ದರ ನೀಡಲು ನಿರ್ಧರಿಸಿದಂತೆ ಜಿಲ್ಲೆಯ ಕಬ್ಬು ಬೆಳೆಗಾರರಿಗೂ ನೀಡಬೇಕು. ಸೋಮವಾರದೊಳಗೆ ಬಂದು ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಿ, ಬಗೆಹರಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಜಿಲ್ಲೆಯಲ್ಲಿರುವ ಮೂರು ಸಕ್ಕರೆ ಕಾರ್ಖಾನೆಗಳನ್ನು ಬಂದ್ ಮಾಡಿಸಿ, ಹೋರಾಟ ನಡೆಸಬೇಕಾಗುತ್ತದೆ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಎಚ್ಚರಿಕೆ ನೀಡಿದರು.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ