ಧಾರವಾಡ: ಜಾತಿ, ಕುಲ, ವರ್ಣ ಎಂಬ ಭೇದ-ಭಾವಗಳ ವಿರುದ್ಧ ತಮ್ಮ ಕೀರ್ತನೆಗಳ ಮೂಲಕ ಜನಮನದಲ್ಲಿ ಬದಲಾವಣೆಯ ಬೆಳಕು ಹರಿಸಿದವರು ಕನಕದಾಸರು. ಅವರ ಸಾಹಿತ್ಯ ಸಮಾನತೆ, ಸಹಿಷ್ಣುತೆ ಮತ್ತು ಸೌಹಾರ್ದದ ಬೋಧನೆ ನೀಡುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಮಾತನಾಡಿ, ಕುಲ ಕುಲವೆಂದು ಹೊಡೆದಾಡದಿರಿ ಎಂಬ ಕನಕರ ಸಂದೇಶವು, ಜಾತಿ ಮತ್ತು ವರ್ಗದ ಭೇದವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ಮತ್ತು ಗೌರವ ನೀಡುವ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ ಎಂದು ಹೇಳಿದರು.
ಪೊಲೀಸ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ಕನಕದಾಸರು ಸಮಾಜದಲ್ಲಿನ ಜಾತಿ, ವರ್ಣ, ಮೂಢನಂಬಿಕೆಗಳನ್ನು ಹೋಗಲಾಡಿಸುವುದಕ್ಕೆ ಪದ್ಯಗಳ ಮುಖಾಂತರ ಮನುಕುಲಕ್ಕೆ ಸಂದೇಶಗಳನ್ನು ನೀಡಿದ್ದಾರೆ. ಜನರು ಜಾಗೃತರಾಗಬೇಕು ಜಾತಿ ವರ್ಣ ಮತಗಳನ್ನು ಬಿಟ್ಟು ಸಮಾಜದಲ್ಲಿ ಬದುಕಬೇಕು ಎಂದರು.ಮನಸೂರು ರೇವಣಸಿದ್ದೇಶ್ವರ ಮಹಾಮಠದ ಡಾ. ಬಸವರಾಜ ದೇವರು ಸಾನಿಧ್ಯ ವಹಿಸಿದ್ದರು. ಕರ್ನಾಟಕ ಪ್ರದೇಶ ಕುರುಬರ ಸಹ ಸಂಘಟನಾ ಕಾರ್ಯದರ್ಶಿ ರಾಜೇಶ್ವರಿ ಸಾಲಗಟ್ಟಿ ಮಾತನಾಡಿದರು. ಕಲಘಟಗಿ ಗುಡ್‍ನ್ಯೂಸ್ ಪ್ರಥಮ ದರ್ಜೆ ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ. ಬಿ.ಜಿ. ಬಿರಾದಾರ ವಿಶೇಷ ಉಪನ್ಯಾಸ ನೀಡಿದರು.
ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕಿ ಸೀಮಾ ಮಸೂತಿ, ಉಪ ಪೊಲೀಸ್ ಆಯುಕ್ತ ಮಹಾನಿಂಗ ನಂದಗಾಂವಿ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಗೊಂಜನ್ ಆರ್ಯ, ಜಿಲ್ಲಾ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಯಲ್ಲಮ್ಮ ನಾಯ್ಕರ, ದೇವರಾಜ ಕಂಬಳಿ, ಈಶ್ವರ ಕಾಳಪ್ಪನವರ, ಬಸವರಾಜ ಮಲಕಾರಿ, ನಾಗರಾಜ ಗುರಿಕಾರ ಇದ್ದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಆರತಿ ದೇವಶಿಕಾಮಣಿ ನಿರೂಪಿಸಿದರು.