ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆ ಮುಂದೂಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರು ಸೋಮವಾರದಿಂದ ಬ್ಯಾಂಕ್ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.ಬ್ಯಾಂಕಿನ ಎದುರು ಪ್ರತಿಭಟನಾ ಧರಣಿ ನಿರತ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ನೇಮಕಾತಿ ಪ್ರಕ್ರಿಯೆ ಮುಂದೂಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಬ್ಯಾಂಕಿನಲ್ಲಿ ಪ್ರಸುತ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ವೇತನ ಮತ್ತು ಭತ್ಯೆ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಿಲ್ಲ. ನೌಕರರ ಒಕ್ಕೂಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಸರ್ಕಾರ ಹಾಗೂ ವಿವಿಧ ಪ್ರಾಧಿಕಾರಗಳಿಗೆ ಮನವಿ ಸಲ್ಲಿಸಲು ನಿರ್ಣಯಿಸಲಾಗಿದೆ.ಹಾಲಿ ಇರುವ ನೌಕರರ ಬೇಡಿಕೆಗಳು ಈಡೇರುವವರೆಗೆ ನೇಮಕಾತಿ ಪ್ರಕ್ರಿಯೆ ನಡೆಸದಂತೆ ಮನವಿ ಮಾಡಲಾಗಿದೆ. ಆದರೂ, ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲಾಗಿದೆ ಎಂದು ಆರೋಪಿಸಿದರು.
ಆಡಳಿತ ಮಂಡಳಿಯ ನಿರ್ಲಕ್ಷ್ಯದ ನಡುವೆಯೂ ನೌಕರರ ಒಕ್ಕೂಟವು ಬ್ಯಾಂಕಿನ ಗ್ರಾಹಕರ ಹಿತದೃಷ್ಟಿ ಹಾಗೂ ಬ್ಯಾಂಕಿನ ಲೆಕ್ಕಪತ್ರಗಳ ಮುಕ್ತಾಯದ ಹಂತವಿರುವುದನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಶಾಖೆಗಳಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಯನ್ನು ನಡೆಸಿದ್ದೆವು. ಈ ಸಂಬಂಧ ಬ್ಯಾಂಕಿನ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ನೌಕರರು ದೂರಿದರು.ರಾಜ್ಯ ಸರ್ಕಾರದ ೭ನೇ ವೇತನ ಆಯೋಗ ಮಧ್ಯಂತರ ಪರಿಹಾರ ನೀಡಿದ್ದು, ಅದರ ಆದೇಶದಂತೆ ಪರಿಷ್ಕೃತ ವೇತನ ನೀಡುವುದು. ಜು.೨೦೨೩ರಿಂದ ಡಿಸೆಂಬರ್ ೨೦೨೩ರವರೆಗೆ ತಡೆಹಿಡಿದಿರುವ ಆರು ತಿಂಗಳ ತುಟ್ಟಿ ಭತ್ಯೆ ಬಾಕಿ ನೀಡುವುದು. ೨೦೨೩- ೨೪ನೇ ಸಾಲಿನ ಬೋನಸ್, ಎಕ್ಸ್‌ಗ್ರೇಷಿಯಾ ನೀಡುವುದರ ಜೊತೆಗೆ ನೌಕರರ ಸಾಲಗಳ ಮೇಲೆ ೨೦೨೪ ಏಪ್ರಿಲ್‌ನಿಂದ ಹೆಚ್ಚಳ ಮಾಡಿರುವ ಬಡ್ಡಿ ದರವನ್ನು ರದ್ದುಪಡಿಸಿ ಹಿಂದೆ ಇದ್ದ ಶೇ. ೧ರಷ್ಟಕ್ಕೆ ಕಡಿಮೆ ಮಾಡುವಂತೆ ಆಗ್ರಹಿಸಿದರು.
ನೌಕರರ ವರ್ಗಾವಣೆಯನ್ನು ಕೌನ್ಸಿಲಿಂಗ್ ಅಥವಾ ನೌಕರರು ನೀಡುವ ಮೂರು ಶಾಖೆಗಳ ಪಟ್ಟಿಯಲ್ಲಿ ಯಾವುದಾದರೂ ಒಂದು ಶಾಖೆಗೆ ವರ್ಗಾವಣೆ ಮಾಡಬೇಕು. ಬ್ಯಾಂಕಿನ ಶಾಖೆಗಳಲ್ಲಿ ಶೌಚಾಲಯ ಸೌಲಭ್ಯ ಕಲ್ಪಿಸುವುದು, ನೌಕರರು ಗುರಿ ಸಾಧಿಸಿಲ್ಲವೆಂದು ತಡೆ ಹಿಡಿದಿರುವ ಮಾಸಿಕ ವೇತನವನ್ನು ಬಿಡುಗಡೆ ಮಾಡಬೇಕು. ಪ್ರಧಾನ ಕಚೇರಿಯಲ್ಲಿ ನೌಕರರ ವಿರೋಧಿ ನೀತಿ ಅನುಸರಿಸುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.ಸಹಕಾರ ಸಂಘಗಳ ಕಾಯಿದೆ ೧೯೫೯ ಹಾಗೂ ನಿಯಮಗಳು ೧೯೬೦ರ ನಿಯಮ ೧೭ರ ರೀತಿ ಸಿಬ್ಬಂದಿ ವೆಚ್ಚವು ದುಡಿಯುವ ಬಂಡವಾಳದ ಶೇ. ೨ರಷ್ಟು ಮೀರದ ಮಿತಿಯಲ್ಲಿರುತ್ತದೆ. ನಮ್ಮ ಬ್ಯಾಂಕಿನ ಸಿಬ್ಬಂದಿ ವೆಚ್ಚವು ಈ ಮಿತಿಯೊಳಗಿರುವುದರಿಂದ ನೌಕರರ ಬೇಡಿಕೆಗಳನ್ನು ಈಡೇರಿಸುವವರೆಗೆ ಬ್ಯಾಂಕಿನ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡುವುದಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ಇಲ್ಲದಿದ್ದರೆ ಹಂತ ಹಂತವಾಗಿ ಮುಷ್ಕರವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನೌಕರರ ಒಕ್ಕೂಟದ ಅಧ್ಯಕ್ಷ ಎಂ.ಎನ್.ಅಶ್ವತ್ಥ್, ಪ್ರಧಾನ ಕಾರ್ಯದರ್ಶಿ ಎಂ.ಮರಿಸ್ವಾಮಿ, ಉಪಾಧ್ಯಕ್ಷ ಆರ್.ದೇವರಾಜು, ಕಾರ್ಯದರ್ಶಿ ಬೊಮ್ಮೇಗೌಡ, ಟಿ.ಪಿ.ಸ್ವಾಮಿ, ಆನಂದ್, ಶೋಭಾ, ಶಂಕರ್, ಗೋವಿಂದರಾಜು, ನವೀನ್‌ಕುಮಾರ್, ದಸಂಸ ಮುಖಂಡ ಎಂ.ವಿ.ಕೃಷ್ಣ, ಸಿಐಟಿಯುನ ಸಿ.ಕುಮಾರಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.