ಕಾರ್ಮಿಕರ ಮೂಲಭೂತ ಹಕ್ಕು ರಕ್ಷಿಸಲು ಒತ್ತಾಯ ​​​​​​​​​​​​​

KannadaprabhaNewsNetwork |  
Published : Apr 15, 2026, 02:45 AM IST
ಹೊಸಪೇಟೆ ತಾಲೂಕು ಕಚೇರಿ ಬಳಿ ಸಿಐಟಿಯು ಮುಖಂಡರು​​​​​​​​​​​​​ ಕನಿಷ್ಠ ವೇತನ ಪುನರ್ ವಿಮರ್ಶೆಗೆ ಆಗ್ರಹಿಸಿ ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳ ಸಂರಕ್ಷಿಸಲು ಒತ್ತಾಯಿಸಿ ಮಂಗಳವಾರ ಸಾರ್ವಜನಿಕರ ಸಹಿ ಸಂಗ್ರಹ ಚಳವಳಿ ನಡೆಸಿದರು. | Kannada Prabha

ಸಾರಾಂಶ

ಕನಿಷ್ಠ ವೇತನ ಪುನರ್ ವಿಮರ್ಶೆಗೆ ಆಗ್ರಹಿಸಿ ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳ ಸಂರಕ್ಷಿಸಲು ಒತ್ತಾಯಿಸಿ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯ ತಾಲೂಕು ಕಚೇರಿಯ ಮುಂಭಾಗದಲ್ಲಿ ಮಂಗಳವಾರ ಸಿಐಟಿಯು ಸಂಘಟನೆಯ ಪದಾಧಿಕಾರಿಗಳು ಸಾರ್ವಜನಿಕರ ಸಹಿ ಸಂಗ್ರಹ ಚಳವಳಿ ನಡೆಸಿದರು.

ಹೊಸಪೇಟೆ: ಕನಿಷ್ಠ ವೇತನ ಪುನರ್ ವಿಮರ್ಶೆಗೆ ಆಗ್ರಹಿಸಿ ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳ ಸಂರಕ್ಷಿಸಲು ಒತ್ತಾಯಿಸಿ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯ ತಾಲೂಕು ಕಚೇರಿಯ ಮುಂಭಾಗದಲ್ಲಿ ಮಂಗಳವಾರ ಸಿಐಟಿಯು ಸಂಘಟನೆಯ ಪದಾಧಿಕಾರಿಗಳು ಸಾರ್ವಜನಿಕರ ಸಹಿ ಸಂಗ್ರಹ ಚಳವಳಿ ನಡೆಸಿದರು.ಕಾರ್ಮಿಕ ವರ್ಗದ ಆಶಾಕಿರಣವಾದ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಜನ್ಮದಿನಾರಣೆ ದಿನದಂದು ಕರ್ನಾಟಕ ರಾಜ್ಯಾದ್ಯಂತ ಸಹಿ ಸಂಗ್ರಹ ಚಳವಳಿ ನಡೆಸಬೇಕೆಂಬ ಸಿಐಟಿಯು ಕರೆಯ ಮೇರೆಗೆ ಸಿಐಟಿಯು ವಿಜಯನಗರ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಈ ಕಾರ್ಯಕ್ರಮವನ್ನು‌ ನಡೆಸಲಾಯಿತು. ಸ್ಥಳೀಯ ವಕೀಲರಾದ ಮೈನುದ್ದೀನ್ ಮತ್ತು ವೇಣುಗೋಪಾಲ್ ಅವರು ಸಹಿ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಆನಂತರ ಸಿಐಟಿಯು ರಾಜ್ಯ ಸಮಿತಿ ಉಪಾಧ್ಯಕ್ಷ ಆರ್.ಎಸ್. ಬಸವರಾಜ್ ಹಾಗೂ ರಾಜ್ಯ ಕಾರ್ಯದರ್ಶಿ ಎಲ್. ಮಂಜುನಾಥ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕರಿಗೆ ನೀಡಬೇಕಾದ ಕನಿಷ್ಠ ವೇತನವನ್ನು 2022ರಲ್ಲೇ ಪುನರ್ ವಿಮರ್ಶೆಗೆ ಒಳಪಡಿಸಬೇಕಾಗಿತ್ತು. ಆದರೆ ಅಂದಿನ ಬಿಜೆಪಿ ಸರ್ಕಾರ ಅವೈಜ್ಞಾನಿಕವಾಗಿ ಹಾಗೂ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಉಲ್ಲಂಘನೆ ಮಾಡಿ, ಅತಿ ಕಡಿಮೆ ಮಟ್ಟದ ವೇತನ ಪರಿಷ್ಕರಣೆ ಮಾಡಿತ್ತು. ಇಂತಹ ಅವೈಜ್ಞಾನಿಕ ವೇತನ ಪರಿಷ್ಕರಣೆಗೆ ಉಚ್ಚ ನ್ಯಾಯಾಲಯ ಛೀಮಾರಿ ಹಾಕಿದ್ದಲ್ಲದೆ, ಸಂಪೂರ್ಣವಾಗಿ ರದ್ದುಗೊಳಿಸಿತು. ಮಾತ್ರವಲ್ಲದೆ ವೈಜ್ಞಾನಿಕ ರೀತಿಯಲ್ಲಿ ಮಾಡುವಂತೆ ಆದೇಶ ನೀಡಿತು ಎಂದು ಹೇಳಿದರು.

2025ರ ಏ. 11ರಂದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಪ್ರಕಟಿಸಿತು. ಆದರೆ ಇದೂ ಕೂಡ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿದ್ದು, ಕಾರ್ಮಿಕ ವರ್ಗದ ಪರವಾಗಿ ಅಂತಿಮ ಅಧಿಸೂಚನೆ ಪ್ರಕಟಿಸಬೇಕೆಂದು ಸರ್ವ ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ₹31 ಸಾವಿರ ಕನಿಷ್ಠ ವೇತನ ಜಾರಿಗೆ ಮಾಡಲು ಅಧಿಸೂಚನೆ ಹೊರಡಿಸಬೇಕು. ಅಲ್ಲದೆ

ಕೇಂದ್ರ ಸರ್ಕಾರ 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ, 4 ಸಂಹಿತೆಗಳನ್ನು ಜಾರಿ ಮಾಡುವ ಮೂಲಕ ಸ್ವಾತಂತ್ರ್ಯ ಪೂರ್ವದಿಂದಲೂ ಹೋರಾಟಗಳಿಂದ ಪಡೆದ ಕಾರ್ಮಿಕರ ಹಲವು ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಿದೆ. ಕೆಲಸದ ಅವಧಿ ಹೆಚ್ಚಳ ಮಾಡಿ ಮೇ ದಿನದ ಮಹತ್ವ ನಾಶ ಮಾಡುವುದು ಬಂಡವಾಳಶಾಹಿಗಳ ಹುನ್ನಾರವಾಗಿದೆ. ಇದು ಅಂಬೇಡ್ಕರ್ ಅವರ ಆಶಯದ ವಿರುದ್ಧವಾಗಿದೆ ಎಂದು ಹೇಳಿದರು.

ಎನ್. ಯಲ್ಲಾಲಿಂಗ ಮಾತನಾಡಿ, ಸಾರ್ವಜನಿಕರಿಂದ ನೂರಾರು ಸಹಿಗಳನ್ನು ಸಂಗ್ರಹಿಸುವ ಚಳವಳಿಯನ್ನು ಜಿಲ್ಲೆಯಲ್ಲಿ ಎಲ್ಲ ತಾಲೂಕುಗಳಲ್ಲಿ ಇಡೀ ತಿಂಗಳು ನಡೆಸಲಾಗುವುದು. ಸರ್ಕಾರ ಈ ಬಗ್ಗೆ ತಕ್ಷಣ ಮಾತುಕತೆ ನಡೆಸಿ, ಕನಿಷ್ಠ ಕೂಲಿ ಅಧಿಸೂಚನೆ ಹೊರಡಿಸದಿದ್ದಲ್ಲಿ ಮೇ 30ರಂದು ಸಿಐಟಿಯು ಸ್ಥಾಪನಾ ದಿನಾಚರಣೆ ಅಂದು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ನಡೆಸಲಾಗುವುದು ಎಂದು ಹೇಳಿದರು.

ಸಂಚಾಲಕರಾದ ಕೆ.ಎಂ. ಸ್ವಪ್ನಾ ಸ್ವಾಗತಿಸಿದರು. ಮುಖಂಡರಾದ ಆರ್. ಭಾಸ್ಕರ್ ರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ಕೆ.ಎಂ. ಸಂತೋಷ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಂಡ, ಸೋಮೆಯಂಡ, ಕೊಂಗೆಟೀರ ಭರ್ಜರಿ ಜಯಬೇರಿ
ಮಕ್ಕಳಲ್ಲಿ ಸ್ವಚ್ಛತೆಯ ಅರಿವು ಮೂಡಿಸೋಣ: ಜಗದೀಶ್ ಆಚಾರ್ಯ ಕಪ್ಪೆಟ್ಟು