ಸಿರಿಗೇರಿ ಗ್ರಾಮ ಪಂಚಾಯಿತಿಗೆ ಹಾಕಿ ಪ್ರತಿಭಟನೆಕನ್ನಡಪ್ರಭ ವಾರ್ತೆ ಸಿರುಗುಪ್ಪ
ನರೇಗಾ ಯೋಜನೆಯ ಕೂಲಿ ಕಾರ್ಮಿಕರಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಕೂಲಿ ಕಾರ್ಮಿಕರು ಹಾಗೂ ಮೇಟಿಗಳು ತಾಲೂಕಿನ ಸಿರಿಗೇರಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮೇಟಿಗಳಾದ ಹಳ್ಳಿಮರದ ಹನುಮಂತ, ಕೊಳ್ಳಿ ಶೇಖರ್ ಹಾಗೂ ಮಾಸ್ತಿ ಪ್ರಕಾಶ್ ಮಾತನಾಡಿ, ಗ್ರಾಮದಲ್ಲಿ ಒಟ್ಟು 4,300 ನರೇಗಾ ಕೂಲಿ ಕಾರ್ಮಿಕರು ಇದ್ದು, ಕೇವಲ 1,500 ಎನ್‌ಎಂಆರ್ ಹಾಕಿಕೊಟ್ಟಿದ್ದಾರೆ. 42 ಮೇಟಿಗಳಲ್ಲಿ ಕೇವಲ 20 ಜನಕ್ಕೆ ಮಾತ್ರ ತರಬೇತಿ ನೀಡಲಾಗಿದೆ. ಕೆಲಸದ ಸ್ಥಳ ಒಂದು ಕಡೆಯಿದ್ದರೆ ಕೆಲಸ ಮಾಡಿಸೋದು ಇನ್ನೊಂದು ಕಡೆಯಾಗಿದೆ. ಒಂದು ಕಾರ್ಡುಗೆ 100 ದಿನಗಳ ಕೆಲಸ ಈ ವರೆಗೆ ಕೊಟ್ಟಿಲ್ಲ. ಶ್ಯಾಮಿಯಾನ ವ್ಯವಸ್ಥೆ, ಕುಡಿವ ನೀರಿನ ವ್ಯವಸ್ಥೆ, ಪ್ರಾಥಮಿಕ ಚಿಕಿತ್ಸೆ ಕಿಟ್ ವ್ಯವಸ್ಥೆ, ಕೂಸಿನ ಮನೆ ಸಿಬ್ಬಂದಿ ನರೇಗಾ ಕೆಲಸಕ್ಕೆ ನಿಯೋಜಿಸಲಾಗಿಲ್ಲ.ಪ್ರತೀ ವರ್ಷ ಇದೇ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ತಿಳಿಸಿದರು.
ಗ್ರಾಪಂ ಕಾರ್ಯದರ್ಶಿ ವೀರೇಶ್ ಪ್ರತಿಭಟನಾಕಾರರ ಮನವೋಲಿಸಲು ಯತ್ನಿಸಿದರಾದರೂ ಪ್ರಯೋಜನೆ ಆಗಲಿಲ್ಲ. ಸ್ಥಳಕ್ಕೆ ಆಗಮಿಸಿದ ಪಿಡಿಒ ಯು.ರಾಮಪ್ಪ ಅವರು ಪ್ರತಿಭಟನಾಕಾರರ ಸಮಸ್ಯೆ ಆಲಿಸಿ ನಂತರ ಕುಡಿಯುವ ನೀರು, ಪ್ರಾಥಮಿಕ ಚಿಕಿತ್ಸೆ ಕಿಟ್, ಶ್ಯಾಮಿಯಾನ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರೂ ಪ್ರತಿಭಟನೆಕಾರರು ಸ್ಥಳದಿಂದ ಕದಲಿಲ್ಲ.ನಮ್ಮ ಸಮಸ್ಯೆಗಳನ್ನು ಆಲಿಸಲು ಜಿಪಂ ಸಿಇಒ ಹಾಗೂ ತಾಪಂ ಇಒ ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟುಹಿಡಿದರಲ್ಲದೆ, ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಸದ್ದಾಂ ಹುಸೇನ್ ಪಂಚಾಯಿತಿ ಅಧಿಕಾರಿ ರಾಮಪ್ಪ ಮತ್ತು ಕೂಲಿಕಾರ್ಮಿಕರ ಜೊತೆ ಮಾತನಾಡಿದರಲ್ಲದೆ, ಗ್ರಾಪಂ ಮಟ್ಟದಲ್ಲಾಗುವ ಸಮಸ್ಯೆಗಳನ್ನು ನಿವಾರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಇದಕ್ಕೆ ಅಧಿಕಾರಿ ಒಪ್ಪಿಗೆ ನೀಡಿದ ಬಳಿಕ ಸಮಸ್ಯೆ ತಿಳಿಗೊಂಡಿತು. ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.ಕೂಲಿ ಕಾರ್ಮಿಕರಾದ ಮಹಾಂಕಾಳಮ್ಮ, ದ್ಯಾವಮ್ಮ, ಲಕ್ಷ್ಮಿ,ಈರಮ್ಮ, ನಾಗಮ್ಮ, ಶಶಿಕಲಾ, ಹಳ್ಳಿ ಮರದ ನಾಗರಾಜ್, ಪಂಪಾಪತಿ, ಶಿವಾಜಿರಾವ್, ಚಾನಾಳ್ ಆಯ್ಯಪ್ಪ, ಪರಶುರಾಮ,ಜ್ಞಾನೇಶ್, ಮೇಟಿಗಳು ಇದ್ದರು.