ಹರಪನಹಳ್ಳಿ: ನಗರದ ಹೊರವಲಯದಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅಲ್ಲಿಯ ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರು ಸ್ಥಳೀಯ ಡಿಪೋ ವ್ಯವಸ್ಥಾಪಕರಲ್ಲಿ ಮನವಿ ಮಾಡಿದ್ದಾರೆ.
555 ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆಗೆ ಕೇವಲ 1 ಬಸ್ ಸಾಕಾಗುವುದಿಲ್ಲ. ನ್ಯಾಯಾಧೀಶರ ಆದೇಶದಂತೆ ಸಂಜೆ 3 ಬಸ್‌ಗಳನ್ನು ಕಳಿಸಿ ಕೊಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ನೀಲಗುಂದ, ಇಟ್ಟಿಗುಡಿ, ಕುಂಚೂರು, ಅರಸನಾಳು ಮಾರ್ಗವಾಗಿ ಹಲುವಾಗಲಿಗೆ ಸಂಚರಿಸುವ ಬಸ್ ನಮ್ಮ ಶಾಲೆ ಬಳಿ ಸಂಜೆ 4 ಗಂಟೆಗೆ ಹಾದು ಹೋಗುತ್ತದೆ. ಆದರೆ ಶಾಲೆ ಬಿಡುವುದು 4.20ಕ್ಕೆ. ಈ ಬಸ್ಸಿನ ಸಮಯವನ್ನು ಬದಲಾವಣೆ ಮಾಡಬೇಕು ಎಂದು ಮನವಿ ಮಾಡಿದರು.ಹರಪನಹಳ್ಳಿಯಿಂದ ಹಡಗಲಿಗೆ ಹೋಗುವ ಬಹುತೇಕ ಬಸ್‌ಗಳು ಕೂಲಹಳ್ಳಿ ಕ್ರಾಸ್, ಬಂಡ್ರಿ, ಎರಡೆತ್ತಿನಹಳ್ಳಿ, ಕಾನಹಳ್ಳಿ ಗ್ರಾಮಗಳಿಗೆ ನಿಲುಗಡೆ ಮಾಡುವುದಿಲ್ಲ. ಈ ಮಾರ್ಗದಲ್ಲಿ 30ರಿಂದ 35 ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಮೇಲೆ ತಿಳಿಸಿದ ಗ್ರಾಮಗಳಲ್ಲಿ ಬಹುತೇಕ ಬಸ್‌ಗಳ ನಿಲುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಹರಪನಹಳ್ಳಿಯಲ್ಲಿ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಅಗತ್ಯ ಬಸ್ ಬಿಡಬೇಕು ಎಂದು ಶಾಲಾಭಿವೃದ್ಧಿ ಸಮಿತಿಯವರು, ಪೋಷಕರು, ಮುಖ್ಯ ಶಿಕ್ಷಕರು ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದಾರೆ.