ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಾನೂನು ಬದ್ಧವಾಗಿ ನೀಡುತ್ತಿದ್ದ ಸೌಲಭ್ಯ ಸಿಗುತ್ತಿಲ್ಲ. ಕಳೆದ ಹಲವು ತಿಂಗಳಿನಿಂದ ಇಲಾಖೆ ಅಧಿಕಾರಿಗಳ ಜೊತೆಗೆ ಹಲವು ಸುತ್ತಿನ ಮಾತುಕತೆ ನಡೆದರೂ ಪ್ರಯೋಜವಾಗಿಲ್ಲ. ನ್ಯಾಯಯುತವಾದ ಬೇಡಿಕೆ ಈಡೇರಿಸಿಲ್ಲ. ಗುರುತಿನ ಚೀಟಿ ನೀಡದೇ ನಮ್ಮನ್ನು ಸೌಲಭ್ಯ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಕಾರ್ಮಿಕರಿಗೆ ನೀಡುವ ಸೌಲಭ್ಯದಲ್ಲಿ ಹಲವಾರು ಕೋಟಿ ವಂಚನೆಯಾಗಿದೆ. ಕಾರ್ಮಿಕ ಮಂಡಳಿ ಹಣದಲ್ಲಿ ಬಾರೀ ಗೋಲ್‍ಮಾಲ್ ನಡದಿದೆ ಎಂದು ಪತ್ರಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಶೈಕ್ಷಣಿಕ ಸಹಾಯಧನ ಅರ್ಜಿ ಸಲ್ಲಿಕೆ ಅವಧಿಯನ್ನು ಆ.31ರವರೆಗೆ ವಿಸ್ತರಿಸಬೇಕು. 2023ರ ಶೈಕ್ಷಣಿಕ ಸಹಾಯಧನ ಅಧಿಸೂಚನೆ ರದ್ದುಪಡಿಸಿ, 20-21ರ ಅಧಿಸೂಚನೆ ಅನ್ವಯವೇ ಶೈಕ್ಷಣಿಕ ಸಹಾಯಧನ ನೀಡಬೇಕು. ನೋಂದಣಿ ಮತ್ತು ಮರುನೋಂದಣಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಸಕಾರಣವಿಲ್ಲದೆ ತಿರಸ್ಕರಿಸಬಾರದು. ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದರು.ನೈಜ ಕಾರ್ಮಿಕರ ಅರ್ಜಿಗಳನ್ನು ಮಾನ್ಯ ಮಾಡಬೇಕು. ಲೈಸೆನ್ಸ್ ಸಲ್ಲಿಸದಿರುವ ಕಾರಣವನ್ನು ಮುಂದುಮಾಡಿ ಕೆಲವು ಅರ್ಜಿ ತಿರಸ್ಕರಿಸಲಾಗುತ್ತಿದ್ದು, ಅದನ್ನು ನಿಲ್ಲಿಸಬೇಕು. ಪಿಂಚಣಿ ಅರ್ಜಿಗಳು ವಿಲೇವಾರಿಯಾಗಿಲ್ಲ. ಪಿಂಚಣಿಯನ್ನು ವರ್ಷದ 12 ತಿಂಗಳು ಸರಿಯಾಗಿ ಪಾವತಿ ಮಾಡುತ್ತಿಲ್ಲ. ಕಾರ್ಮಿಕರು ಮಂಡಳಿ ಫಲಾನುಭವಿಗಳಾಗಿ ನೋಂದಾವಣಿಯಾಗುವ ಸಮಯದಲ್ಲಿ ಸಲ್ಲಿಸಿರುವ ವಯಸ್ಸಿನ ದಾಖಲೆಯನ್ನೇ ಪಿಂಚಣಿ ಸೌಲಭ್ಯಕ್ಕೆ ದಾಖಲೆಯಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.ಇಲಾಖೆ ಸಾಪ್ಟ್‌ವೇರ್‌ನಲ್ಲಿ ಅನೇಕ ತಾಂತ್ರಿಕ ದೋಷಗಳು ಪದೇ ಪದೇ ಕಾಣುತ್ತಿದ್ದು, ಈ ಸಮಸ್ಯೆ ಶೀಘ್ರ ಸರಿಪಡಿಸಬೇಕು. ತಿರಸ್ಕೃತವಾದ ಹೊಸ ನೋಂದಣಿದಾರರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ತಿದ್ದುಪಡಿಗೆ ಕಚೇರಿಗೆ, ಕಾರ್ಮಿಕ ನಿರೀಕ್ಷಕರಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಈಗ ಸ್ಕೂಲ್ ಕಿಟ್ ಬರಲು ಸಿದ್ಧವಾಗಿದ್ದು, ಇದರ ಬಗ್ಗೆಯೂ ತನಿಖೆಯಾಗಬೇಕು. ಜಿಲ್ಲೆಯಲ್ಲಿ ಖಾಲಿ ಇರುವ ಕಾರ್ಮಿಕ ನಿರೀಕ್ಷಕರುಗಳ ನೇಮಕಾತಿ ಕೂಡಲೇ ಮಾಡಬೇಕು. ಈ ಕೂಡಲೇ ಕಾರ್ಮಿಕರ ಮಕ್ಕಳಿಗೆ ನೀಡುತ್ತಿರುವ ವಿದ್ಯಾರ್ಥಿವೇತನವನ್ನು ಬಿಡುಗಡೆ ಮಾಡಬೇಕು ಎಂದು ಹೋರಾಟಗಾರರು ಎಚ್ಚರಿಸಿದ್ದು, ಬೇಡಿಕೆ ಈಡೇರದಿದ್ದಲ್ಲಿ. ಇಡೀ ರಾಜ್ಯದಲ್ಲಿ ಕಾರ್ಮಿಕ ಕಚೇರಿ ಹಾಗೂ ಎಲ್ಲಾ ಜನಪ್ರತಿನಿಧಿಗಳ ಮನೆಯ ಮುಂದೆ ಅನಿರ್ಧಿಷ್ಟಾವಧಿ ಹೋರಾಟ ಮಾಡುವುದಾಗಿ ಒಕ್ಕೂಟ ಎಚ್ಚರಿಸಿದೆ.