ಬೆಂಗಳೂರು : ಮಧ್ಯಪ್ರಾಚ್ಯ ಯುದ್ಧದಿಂದಾಗಿ ಅಡುಗೆ ಸಿಲಿಂಡರ್‌, ಹೋಟೆಲ್‌ ಸಿಲಿಂಡರ್‌ಗಳ ಬಳಿಕ ಈಗ ಆಟೋ ಚಾಲಕರು ಗ್ಯಾಸ್‌ಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ಯಾಸ್‌ ಪೂರೈಕೆ ಕೊರತೆಯಿಂದಾಗಿ ರಾಜ್ಯದಲ್ಲಿ ಅರ್ಧಕ್ಕರ್ಧ ಬಂಕ್‌ಗಳು ಬಂದ್‌ ಆಗಿದ್ದು, ಆಟೋ ಗ್ಯಾಸ್ ತುಂಬಿಸಲು ಚಾಲಕರು ಕಿಲೋ ಮೀಟರ್ ಗಟ್ಟಲೇ ಕ್ಯೂನಲ್ಲಿ ನಿಲ್ಲುವ ಸ್ಥಿತಿ ಎದುರಾಗಿದೆ.

ಇನ್ನೊಂದೆಡೆ, ಸಂಕಷ್ಟದ ಈ ಸ್ಥಿತಿಯನ್ನೂ ದುರುಪಯೋಗ ಮಾಡಿಕೊಳ್ಳುತ್ತಿರುವ ಕೆಲವು ಕಂಪನಿಯ ಗ್ಯಾಸ್ ಬಂಕ್‌ಗಳು, ಗ್ಯಾಸ್‌ ದರವನ್ನು ಡಬಲ್‌ ಮಾಡಿದ್ದು, ಆಟೋ ಚಾಲಕರನ್ನು ಆರ್ಥಿಕವಾಗಿ ಸಂಕಷ್ಟಕ್ಕೀಡು ಮಾಡಿದೆ.

ರಾಜಧಾನಿ ಬೆಂಗಳೂರಿನಲ್ಲೂ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಪದ್ಮನಾಭ ನಗರ ಬಳಿಯ ಗ್ಯಾಸ್ ಬಂಕ್ ಬಳಿ ಬುಧವಾರ ಸುಮಾರು ಎರಡು-ಮೂರು ಕಿಲೋ ಮೀಟರ್ ಉದ್ದದ ಕ್ಯೂ ಕಂಡುಬಂದಿದೆ. ಬೆಳಗ್ಗೆಯಿಂದಲೇ ಗ್ಯಾಸ್ ಬಂಕ್‌ಗಳ ಬಳಿ ಆಟೋ ಚಾಲಕರು ಕ್ಯೂ ನಿಂತಿದ್ದರು. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಧನಲಕ್ಷ್ಮಿ ಗ್ಯಾಸ್ ಏಜೆನ್ಸಿ ಮುಂದೆ ಮುಂಜಾನೆ 3 ಗಂಟೆಯಿಂದಲೇ ಚಾಲಕರು ‘ಕ್ಯೂ’ ನಿಂತಿದ್ದರು. ಬೀದರ್‌, ಕಲಬುರಗಿಯಲ್ಲಿ ಉರಿವ ಬಿಸಿಲಿನಲ್ಲಿ ಬೆಳಗ್ಗೆಯಿಂದಲೇ ಚಾಲಕರು ಗ್ಯಾಸ್‌ಗಾಗಿ ಕ್ಯೂ ನಿಂತಿದ್ದರು. ಮಂಗಳೂರಿನ ಶಿವಭಾಗ್‌ ಬಂಕ್‌ ಎದುರು ಒಂದು ಕಿ.ಮೀ. ಉದ್ದಕ್ಕೆ ಆಟೋಗಳ ಸರತಿ ಸಾಲು ಕಂಡು ಬಂತು.


ಈ ಮಧ್ಯೆ, ಮತ್ತಿಕೆರೆ ಬಳಿ ಇರುವ ಎಜಿಸ್ ಆಟೋ ಗ್ಯಾಸ್, ಹೆಸರುಘಟ್ಟದ 8ನೇ ಮೈಲಿ ಸೇರಿ ಬೆಂಗಳೂರಿನ ಹಲವು ಬಂಕ್‌ಗಳಲ್ಲಿ ಗ್ಯಾಸ್ ದರ ಡಬಲ್ ಆಗಿದೆ. ಯುದ್ಧ ಆರಂಭಕ್ಕೂ ಮುನ್ನ ಪ್ರತಿ ಲೀಟರ್‌ಗೆ 58 ರು.ಇದ್ದ ಗ್ಯಾಸ್‌ ದರ ಈಗ 85-105 ರು.ವರೆಗೆ ಏರಿದೆ. ಈ ಬಗ್ಗೆ ಆಟೋ ಚಾಲಕರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಮೈಸೂರು, ಚಿತ್ರದುರ್ಗ, ಬೆಳಗಾವಿಯಲ್ಲೂ ಇದೇ ಸಂಕಷ್ಟ ಎದುರಾಗಿದೆ.

ಈ ಮಧ್ಯೆ, ಬಳ್ಳಾರಿಯಲ್ಲಿ ದರ ಹೆಚ್ಚಳ ಖಂಡಿಸಿ ಆಟೋ ಚಾಲಕರು ಆಟೋ ಗ್ಯಾಸ್ ಬಂಕ್ ಮುಂದೆ ಬುಧವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗ್ಯಾಸ್ ಏಜೆನ್ಸಿಯವರ ಜೊತೆ ಮಾತುಕತೆ ನಡೆಸಿ, ನಿಮ್ಮಲ್ಲಿ ಸ್ಟಾಕ್ ಇರುವ ಗ್ಯಾಸ್‌ ಅನ್ನು ಹಳೆಯ ದರದಲ್ಲಿಯೇ ವಿತರಣೆ ಮಾಡಬೇಕು. ದಿಢೀರನೇ ಹೆಚ್ಚಳ ಮಾಡುವಂತಿಲ್ಲ ಎಂದು ಸೂಚಿಸಿದರು. ಬಳಿಕ, ಆಟೋ ಚಾಲಕರು ಪ್ರತಿಭಟನೆ ಹಿಂಪಡೆದರು.

ಗ್ಯಾಸ್‌ ಬಂಕ್‌ಗಳು ಬಂದ್‌:

ಈ ಮಧ್ಯೆ, ಗ್ಯಾಸ್‌ ಕೊರತೆಯಿಂದ ರಾಜ್ಯದ ಹಲವೆಡೆ ಅರ್ಧಕ್ಕರ್ಧ ಬಂಕ್‌ಗಳು ಬಂದ್‌ ಆಗಿವೆ. ರಾಯಚೂರಿನಲ್ಲಿ ಮೂರು ಆಟೋ ಗ್ಯಾಸ್ ಬಂಕ್‌ಗಳು ಬಂದ್ ಆಗಿದ್ದು, ಕಳೆದ ನಾಲ್ಕು ದಿನಗಳಿಂದ ಗ್ಯಾಸ್ ಸಿಗದೆ ಆಟೋ ಚಾಲಕರು ಗೋಳಾಟ ನಡೆಸುತ್ತಿದ್ದಾರೆ. ಕೆಲವೆಡೆ, ಬಂಕ್ ಮುಂದೆ ‘ನೋ ಸ್ಟಾಕ್’ ಬೋರ್ಡ್ ಹಾಕಲಾಗಿದೆ. ಇದರಿಂದಾಗಿ ನಗರದ ಸುಮಾರು 2 ಸಾವಿರಕ್ಕೂ ಹೆಚ್ಚು ಆಟೋ ಚಾಲಕರು ಸಂಕಷ್ಟಕ್ಕೆ ಈಡಾಗಿದ್ದಾರೆ. ಮಂಗಳೂರಲ್ಲಿ 10ಕ್ಕೂ ಹೆಚ್ಚು, ಬಳ್ಳಾರಿಯಲ್ಲಿ 6 ಬಂಕ್‌ಗಳ ಪೈಕಿ 4 ಬಂಕ್‌ಗಳು ಬಂದ್‌ ಆಗಿವೆ. ಕೊಪ್ಪಳದಲ್ಲಿ 2 ಬಂಕ್‌ಗಳು ಈಗಾಗಲೇ ಬಂದ್‌ ಆಗಿವೆ. ಗುಮ್ಮಟನಗರಿ, ವಿಜಯಪುರದಲ್ಲಿ 5 ಬಂಕ್‌ಗಳ ಪೈಕಿ 3 ಬಂಕ್‌ಗಳು ಬಂದ್‌ ಆಗಿವೆ.

ಕಳೆದ ನಾಲ್ಕು ಗಂಟೆಗಳಿಂದ ನಾನು ನನ್ನ ಆಟೋರಿಕ್ಷಾಗೆ ಎಲ್‌ಪಿಜಿ ತುಂಬಿಸಿಕೊಳ್ಳಲು ಓಡಾಡುತ್ತಿದ್ದೇನೆ. ಎಲ್ಲಿಯೂ ಸಿಗುತ್ತಿಲ್ಲ. ಬಂಕ್‌ ಹುಡುಕುವುದರಲ್ಲಿಯೇ ನನ್ನ ಆಟೋದ ಗ್ಯಾಸ್‌ ಖಾಲಿಯಾಗುತ್ತಿದೆ.

- ಅಬ್ದುಲ್ ಕರೀಮ್, ಆರ್‌ಟಿ ನಗರ, ಬೆಂಗಳೂರು.

ಮನೆ ಬಾಡಿಗೆ, ಮಕ್ಕಳ ಶಿಕ್ಷಣದ ಇಎಂಐಗಳು, ನಮ್ಮ ದೈನಂದಿನ ಮನೆಯ ಖರ್ಚುಗಳನ್ನು ನೋಡಿಕೊಳ್ಳಬೇಕಾಗಿದೆ. ಕಳೆದ ಎರಡು ದಿನಗಳಿಂದ ಎಲ್‌ಪಿಜಿ ಕೊರತೆಯಿಂದಾಗಿ ನಮ್ಮ ಗಳಿಕೆ ಕುಗ್ಗಿದೆ. ಹೀಗಾಗಿ, ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ.

- ಮತೀನ್, ಆರ್‌ಟಿ.ನಗರ, ಬೆಂಗಳೂರು.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಲ್ಲಿ ವಾಹನಗಳಿಗೆ ಸಾಮಾನ್ಯವಾಗಿ ಎಲ್‌ಪಿಜಿ ಸರಬರಾಜು ಮಾಡಲಾಗುತ್ತದೆ. ಆದರೆ, ಸಮಸ್ಯೆ ಖಾಸಗಿ ಕಂಪನಿಗಳಲ್ಲಿದೆ. ಅವರು ಸರಬರಾಜು ಮಾಡುತ್ತಿಲ್ಲ. ಕೆಲವರು ಬೆಲೆಯನ್ನು ಹೆಚ್ಚಿಸಿದ್ದಾರೆ. ಸರ್ಕಾರ ಇದನ್ನು ಪರಿಶೀಲಿಸಬೇಕು.

- ಎಂ.ಮಂಜುನಾಥ್‌, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟದ ಅಧ್ಯಕ್ಷ, ಬೆಂಗಳೂರು