ಸಂಬಂಧಿಕರ ಅಂತ್ಯಕ್ರಿಯೆಗೆ ತೆರಳುತ್ತಿದ್ದವರ ಆಟೋ ಎತ್ತಿನಗಾಡಿಗೆ ಡಿಕ್ಕಿಯಾದ ಪರಿಣಾಮ ಬೆಂಗಳೂರು ಮೂಲದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಮಕ್ಕಳು ಸೇರಿದಂತೆ ಐವರು ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಸೇತುವೆ ಬಳಿ ಮಂಗಳವಾರ ಮುಂಜಾನೆ ಜರುಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಸಂಬಂಧಿಕರ ಅಂತ್ಯಕ್ರಿಯೆಗೆ ತೆರಳುತ್ತಿದ್ದವರ ಆಟೋ ಎತ್ತಿನಗಾಡಿಗೆ ಡಿಕ್ಕಿಯಾದ ಪರಿಣಾಮ ಬೆಂಗಳೂರು ಮೂಲದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಮಕ್ಕಳು ಸೇರಿದಂತೆ ಐವರು ಗಾಯಗೊಂಡಿರುವ ಘಟನೆ ತಾಲೂಕಿನ ಚಿಕ್ಕರಸಿನಕೆರೆ ಸೇತುವೆ ಬಳಿ ಮಂಗಳವಾರ ಮುಂಜಾನೆ ಜರುಗಿದೆ.

ಬೆಂಗಳೂರು ಮೂಲದ ಸಿದ್ದರಾಜು (48) ಮೃತಪಟ್ಟವರು. ಘಟನೆಯಲ್ಲಿ ದಿಲೀಪ್ (22), ಸಿದ್ದರಾಜು ಪತ್ನಿ ಭಾಗ್ಯಮ್ಮ (42), ಮಹಾಲಕ್ಷ್ಮಿ (10), ಮಹದೇವು (8) ಆಟೋರಿಕ್ಷಾ ಚಾಲಕ ಬೆಂಗಳೂರು ಬಸವೇಶ್ವರ ನಗರದ ಚೇತನ್ (24) ಗಾಯಗೊಂಡಿದ್ದಾರೆ.

ಮೃತ ಸಿದ್ದರಾಜು ಹಾಗೂ ಗಾಯಗೊಂಡವರು ಒಂದೇ ಕುಟುಂಬದವರಾಗಿದ್ದು, ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಕೊಳ್ಳೇಗಾಲ ತಾಲೂಕಿನ ಬನ್ನಿಸೆರಗ ಗ್ರಾಮಕ್ಕೆ ಹೋಗುತ್ತಿದ್ದರು.

ಮುಂಜಾನೆ 5 ಗಂಟೆ ಸುಮಾರಿಗೆ ಆಟೋ ರಿಕ್ಷಾ ಮುಂದೆ ಹೋಗುತ್ತಿದ್ದ ಎತ್ತಿನ ಗಾಡಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಯಶ್ವಂತ್‌ಕುಮಾರ್, ಕೆ.ಎಂ.ದೊಡ್ಡಿ ಸಿಪಿಐ ಅನಿಲ್‌ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮೃತನ ಶವ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಕಾವೇರಿ ನದಿಯಲ್ಲಿ ಈಜಲು ಹೋಗಿ ವಿದ್ಯಾರ್ಥಿ ಸಾವು

ಶ್ರೀರಂಗಪಟ್ಟಣ: ತನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಆಗಮಿಸಿದ್ದ ವಿದ್ಯಾರ್ಥಿಯೊಬ್ಬ ಕಾವೇರಿ ನದಿಯಲ್ಲಿ ಮುಳಗಿ ಮೃತಪಟ್ಟಿರುವ ಘಟನೆ ತಾಲೂಕು ಮಹದೇವಪುರ ಗ್ರಾಮದ ಬಳಿಯ ಕಾವೇರಿ ಬೋರೆ ದೇವಸ್ಥಾನದ ಬಳಿ ನಡೆದಿದೆ.ಬೆಂಗಳೂರು ನಿವಾಸಿ ಚೋಳ ರಾಜ್ ಅವರ ಪುತ್ರ ಮನುಯಾದವ್ (21) ಮೃತ ವಿದ್ಯಾರ್ಥಿ. ಈತ ಬೆಂಗಳೂರಿನ ಗಿರಿನಗರದ ಕೃಷ್ಣ ಕಾಲೇಜಿನಲ್ಲಿ ಕೊನೇ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಮೃತ ಮನುಯಾದವ್ ತನ್ನ 6 ಮಂದಿ ಸ್ನೇಹಿತರೊಂದಿಗೆ ಇನೋವಾ ಕಾರಿನಲ್ಲಿ ಆಗಮಿಸಿ ಮಹದೇವಪುರ ಬಳಿಯ ಬೋರೆ ರಾಮಸ್ವಾಮಿ ನಾಲೆ ಚೆಕ್ ಡ್ಯಾಂನಲ್ಲಿ ಈಜಲು ತೆರಳಿದ್ದ ವೇಳೆ ನೀರಲ್ಲಿ ಮೃತಪಟ್ಟಿದ್ದಾನೆ. ಅರಕೆರೆ ಪೊಲೀಸರು ಸ್ಥಳಕ್ಕಾಗಮಿಸಿ, ಅಗ್ನಿ ಶಾಮಕ ದಳ ಸಿಬ್ಬಂದಿ ಮೃತ ದೇಹವನ್ನು ನೀರಿ ನಿಂದ ಹೊರ ತೆಗೆದು, ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೈಕ್ ನಲ್ಲಿ ಬಂದ ಕಳ್ಳರಿಂದ ಮಹಿಳೆ ಚಿನ್ನದ ಸರ ಕಿತ್ತು ಪರಾರಿ

ಮಳವಳ್ಳಿ:ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಚಿಕ್ಕಮುಲಗೂಡು-ರಾಮನಾಥಮೋಳೆ ಗ್ರಾಮದ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ತಾಲೂಕಿನ ಅಣಸಾಲೆ ಗ್ರಾಮದ ಪುಟ್ಟಮ್ಮ ಚಿನ್ನದ ಸರ ಕಳೆದುಕೊಂಡವರು. ಸೋಮವಾರ ಕೆಲಸ ನಿಮಿತ್ತ ಪುಟ್ಟಮ್ಮ ಅಣಸಾಲೆಯಿಂದ ಚಿಕ್ಕಮುಲಗೂಡು ಗ್ರಾಪಂ ಕಚೇರಿ ತೆರಳಿ ವಾಪಸ್ ನಡೆದುಕೊಂಡು ಸ್ವಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಎದುರಿನಿಂದ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬೈಕ್‌ಅನ್ನು ವಾಪಸ್ ತಿರುಗಿಸಿಕೊಂಡು ಬಂದು ಪುಟ್ಟಮ್ಮ ಕತ್ತಿನಲ್ಲಿದ್ದ 27 ಗ್ರಾಂ ತೂಕದ ಮಾಂಗಲ್ಯ ಸರ, ತಾಳಿ ಹಾಗೂ ಗುಂಡುಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.ಕಳ್ಳರು ಪರಾರಿಯಾಗುವ ವೇಳೆ ಮಹಿಳೆ ಕೂಗಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಸ್ವಸ್ಥ: ಚಿಕಿತ್ಸೆ ಫಲಿಸದೇ ಬಾಲಕ ಸಾವುಹಲಗೂರು: ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಸಮೀಪದ ದಳವಾಯಿಕೋಡಿಹಳ್ಳಿಯಲ್ಲಿ ಸೋಮವಾರ ನಡೆದಿದೆ. ಗ್ರಾಮದ ನಿವಾಸಿ ದುಂಡಯ್ಯರ ಪುತ್ರ ಅಭಿಷೇಕ್ (16) ಮೃತ ಬಾಲಕ. ಮಾರ್ಚ್ 28 ರಂದು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರ್ಚ್ 30 ಸೋಮವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.