ಕನ್ನಡಪ್ರಭ ವಾರ್ತೆ ಬೆಳಗಾವಿ ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಬೆಳಗಾವಿ ನಗರದಲ್ಲಿ ಸಿಎನ್‌ಜಿ ಕೊರತೆ ತೀವ್ರಗೊಂಡಿದ್ದು, ನಗರದಲ್ಲಿನ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದಲ್ಲಿ ದಿನದಿಂದ ದಿನಕ್ಕೆ ಸಿಎನ್‌ಜಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಪೂರೈಕೆ ಸಮರ್ಪಕವಾಗಿ ನಡೆಯದ ಕಾರಣ ಗ್ಯಾಸ್ ಸ್ಟೇಷನ್‌ಗಳಲ್ಲಿ ಇಂಧನ ಕೊರತೆಯುಂಟಾಗುತ್ತಿದೆ. ಇಂಧನಕ್ಕಾಗಿ ಆಟೋಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಉಂಟಾಗಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಬೆಳಗಾವಿ ನಗರದಲ್ಲಿ ಸಿಎನ್‌ಜಿ ಕೊರತೆ ತೀವ್ರಗೊಂಡಿದ್ದು, ನಗರದಲ್ಲಿನ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.ನಗರದಲ್ಲಿ ದಿನದಿಂದ ದಿನಕ್ಕೆ ಸಿಎನ್‌ಜಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಪೂರೈಕೆ ಸಮರ್ಪಕವಾಗಿ ನಡೆಯದ ಕಾರಣ ಗ್ಯಾಸ್ ಸ್ಟೇಷನ್‌ಗಳಲ್ಲಿ ಇಂಧನ ಕೊರತೆಯುಂಟಾಗುತ್ತಿದೆ. ಇಂಧನಕ್ಕಾಗಿ ಆಟೋಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಉಂಟಾಗಿದೆ. ಬುಧವಾರ ಬೆಳಗ್ಗಿನಿಂದಲೇ ಗಂಟೆಗಟ್ಟಲೆ ಸಾಲಿನಲ್ಲಿ ನಿಂತರೂ ಆಟೋ ಚಾಲಕರಿಗೆ ಗ್ಯಾಸ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕಳೆದ ಎರಡು ದಿನಗಳಿಂದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಅನೇಕ ಪೆಟ್ರೋಲ್ ಬಂಕ್‌ಗಳಲ್ಲಿ ಔಟ್ ಆಫ್ ಸ್ಟಾಕ್’ ಬೋರ್ಡ್ ಹಾಕಲಾಗಿದೆ. ನಗರದಲ್ಲಿ ಒಟ್ಟು 5 ಸಿಎನ್‌ಜಿ ಘಟಕಗಳಿದ್ದರೂ, ಅವುಗಳಲ್ಲಿಯೂ ಪೂರೈಕೆ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿದೆ.ಇದಕ್ಕೂ ಮುನ್ನ ₹62ಕ್ಕೆ ದೊರೆಯುತ್ತಿದ್ದ ಸಿಎನ್‌ಜಿ ದರ ಈಗ ₹85ಕ್ಕೆ ಏರಿಕೆಯಾಗಿದೆ. ದರ ಏರಿಕೆ ಹಾಗೂ ಕೊರತೆಯಿಂದ ಆಟೋ ಚಾಲಕರ ದೈನಂದಿನ ಆದಾಯಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಸಾಲಿನಲ್ಲಿ ಸಮಯ ಕಳೆಯುವುದರಿಂದ ಪ್ರಯಾಣಿಕರನ್ನು ತೆಗೆದುಕೊಳ್ಳುವ ಅವಕಾಶ ಕಡಿಮೆಯಾಗಿದ್ದು, ಆದಾಯ ಕುಸಿತ ಕಂಡುಬರುತ್ತಿದೆ. ಆಟೋ ಚಾಲಕರು ತಕ್ಷಣ ಸಿಎನ್‌ಜಿ ಗ್ಯಾಸ್ ಪೂರೈಕೆ ಹೆಚ್ಚಿಸುವಂತೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಬಾಕ್ಸ್
ಸಿಎನ್‌ಜಿ, ಆಟೋ ಎಲ್‌ಪಿಜಿ ಗ್ಯಾಸ್ ಕೊರತೆ ಇಲ್ಲ: ಡಿಸಿ ಸ್ಪಷ್ಟನೆಬೆಳಗಾವಿ: ಬೆಳಗಾವಿ ನಗರದಲ್ಲಿ ಆಟೋಗಳಿಗೆ ಸಿಎನ್‌ಜಿ ಹಾಗೂ ಆಟೋ ಎಲ್‌ಪಿಜಿ ಗ್ಯಾಸ್ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಸ್ಪಷ್ಟನೆ ನೀಡಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಬುಧವಾರ ನಗರದಲ್ಲಿ ಆಟೋ ಚಾಲಕರು ಗ್ಯಾಸ್ ಸಿಗದೆ ಪರದಾಡುತ್ತಿದ್ದಾರೆ ಎಂಬ ಮಾಹಿತಿ ಹೊರಬಂದ ಹಿನ್ನೆಲೆ, ಆಹಾರ ಇಲಾಖೆಯ ಆಹಾರ ನಿರೀಕ್ಷಕರು ನಗರದಲ್ಲಿರುವ ಒಟ್ಟು 6 ಗ್ಯಾಸ್ ಬಂಕ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆಯ ವೇಳೆ ಎಲ್ಲಾ ಬಂಕ್‌ಗಳಲ್ಲಿ ಸಿಎನ್‌ಜಿ ಹಾಗೂ ಆಟೋ ಎಲ್‌ಪಿಜಿ ಗ್ಯಾಸ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವುದು ದೃಢಪಟ್ಟಿದೆ. ಆದರೆ, ಆರ್.ಟಿ.ಓ ಸರ್ಕಲ್ ಸಮೀಪದ ಶಿಲ್ಪಾ ಗೋ ಗ್ಯಾಸ್ ಬಂಕ್‌ನಲ್ಲಿ ಆಟೋ ಗ್ಯಾಸ್ ಭರ್ತಿಗೆ ಬಳಸುವ ನೋಜಲ್ ದೋಷದಿಂದ ತಾತ್ಕಾಲಿಕ ಸಮಸ್ಯೆ ಉಂಟಾಗಿತ್ತು. ಇದೀಗ, ಆ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದ್ದು, ಬಂಕ್ ಮಾಲೀಕರು ಲಿಖಿತವಾಗಿ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಿಎನ್‌ಜಿ ಹಾಗೂ ಆಟೋ ಎಲ್‌ಪಿಜಿ ಗ್ಯಾಸ್ ಕೊರತೆ ಇಲ್ಲ. ಆಟೋ ಚಾಲಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.