ಕಳೆದ ಕೆಲವು ವಾರಗಳಲ್ಲಿ ದರವನ್ನು ಹಂತ ಹಂತವಾಗಿ ಹೆಚ್ಚಿಸಿರುವುದನ್ನು ತೀವ್ರವಾಗಿ ಖಂಡಿಸಿದರು. ಮೊದಲು ₹70-75 ಇದ್ದ ದರವನ್ನು ₹80, ₹85ಕ್ಕೆ ಏರಿಸಿ, ಇದೀಗ ಏಕಾಏಕಿ ₹100ಕ್ಕೆ ಸಮೀಪಿಸಿರುವುದು ಅನ್ಯಾಯ ಎಂದು ಅವರು ಆಕ್ಷೇಪಿಸಿದರು. ಚಾಲಕರೊಬ್ಬರು ಮಾತನಾಡಿ, “ಒಂದೇ ತಿಂಗಳಲ್ಲಿ ಐದು-ಆರು ಬಾರಿ ದರ ಹೆಚ್ಚಿಸಲಾಗಿದೆ. ಈಗಲೇ ₹99.95 ಆಗಿದೆ. ನಾವು ದಿನಪೂರ್ತಿ ದುಡಿದರೂ ಖರ್ಚು ತೀರಿಸಲು ಸಾಧ್ಯವಾಗುತ್ತಿಲ್ಲ. ಈ ರೀತಿಯಾಗಿ ದರ ಹೆಚ್ಚಿಸುತ್ತಾ ಹೋದರೆ ನಾವು ಬದುಕುವುದು ಹೇಗೆ?” ಎಂದು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಸಿಎನ್‌ಜಿ ಗ್ಯಾಸ್ ದರ ಲೀಟರ್‌ಗೆ 84.95ರಿಂದ 99.95ಕ್ಕೆ ಏರಿಕೆಯಾಗಿರುವುದನ್ನು ಖಂಡಿಸಿ ಆಟೋ ಚಾಲಕರು ಗ್ಯಾಸ್ ಬಂಕ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಪಟ್ಟಣದಲ್ಲಿ ಶನಿವಾರ ನಡೆಯಿತು. ಪಟ್ಟಣದಲ್ಲಿ ಸಿಎನ್‌ಜೆ (ಕಂಪ್ರೆಸ್ಸ್ಡ್ ನ್ಯಾಚುರಲ್ ಗ್ಯಾಸ್) ದರದಲ್ಲಿ ನಿರಂತರ ಏರಿಕೆ ಕಂಡುಬಂದಿರುವ ಹಿನ್ನೆಲೆ ಆಟೋ ಚಾಲಕರು ಹಾಗೂ ಖಾಸಗಿ ಗ್ಯಾಸ್ ಬಂಕ್ ಸಿಬ್ಬಂದಿ ನಡುವೆ ತೀವ್ರ ವಾಗ್ವಾದ ನಡೆಯಿತು. ಗ್ಯಾಸ್ ದರವು ₹84.95ರಿಂದ ಏಕಾಏಕಿ ₹99.95 ಪ್ರತಿ ಕೆಜಿಗೆ ಏರಿಕೆಯಾಗಿರುವುದು ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.ಸ್ಥಳದಲ್ಲಿ ಜಮಾಯಿಸಿದ ಆಟೋ ಚಾಲಕರು, ಕಳೆದ ಕೆಲವು ವಾರಗಳಲ್ಲಿ ದರವನ್ನು ಹಂತ ಹಂತವಾಗಿ ಹೆಚ್ಚಿಸಿರುವುದನ್ನು ತೀವ್ರವಾಗಿ ಖಂಡಿಸಿದರು. ಮೊದಲು ₹70-75 ಇದ್ದ ದರವನ್ನು ₹80, ₹85ಕ್ಕೆ ಏರಿಸಿ, ಇದೀಗ ಏಕಾಏಕಿ ₹100ಕ್ಕೆ ಸಮೀಪಿಸಿರುವುದು ಅನ್ಯಾಯ ಎಂದು ಅವರು ಆಕ್ಷೇಪಿಸಿದರು. ಚಾಲಕರೊಬ್ಬರು ಮಾತನಾಡಿ, “ಒಂದೇ ತಿಂಗಳಲ್ಲಿ ಐದು-ಆರು ಬಾರಿ ದರ ಹೆಚ್ಚಿಸಲಾಗಿದೆ. ಈಗಲೇ ₹99.95 ಆಗಿದೆ. ನಾವು ದಿನಪೂರ್ತಿ ದುಡಿದರೂ ಖರ್ಚು ತೀರಿಸಲು ಸಾಧ್ಯವಾಗುತ್ತಿಲ್ಲ. ಈ ರೀತಿಯಾಗಿ ದರ ಹೆಚ್ಚಿಸುತ್ತಾ ಹೋದರೆ ನಾವು ಬದುಕುವುದು ಹೇಗೆ?” ಎಂದು ಪ್ರಶ್ನಿಸಿದರು.ಇನ್ನೊಬ್ಬ ಚಾಲಕ, “ಪ್ರಯಾಣಿಕರಿಗೆ ಮಿನಿಮಮ್ ಬಾಡಿಗೆ ಹೆಚ್ಚಿಸಲು ಸಾಧ್ಯವಿಲ್ಲ. ₹40-50ಕ್ಕೆ ಓಡಾಡುತ್ತಿದ್ದವರು ಹೆಚ್ಚು ಹಣ ಕೊಡಲು ಸಿದ್ಧರಾಗಿಲ್ಲ. ಈಗ ನಾವು ₹60 ಅಥವಾ ₹70 ಕೇಳಿದರೆ ಯಾರೂ ಆಟೋ ಹತ್ತುವುದಿಲ್ಲ. ಈಗಾಗಲೇ ಜನರು ನಡೆದುಕೊಂಡು ಹೋಗುತ್ತಿದ್ದಾರೆ” ಎಂದು ತಮ್ಮ ಸಮಸ್ಯೆಯನ್ನು ವಿವರಿಸಿದರು. “ಗವರ್ನಮೆಂಟ್ ಬಂಕ್‌ಗಳಲ್ಲಿ ಕಡಿಮೆ ದರದಲ್ಲಿ ಗ್ಯಾಸ್ ಸಿಗುತ್ತಿದೆ. ಆದರೆ ಖಾಸಗಿ ಬಂಕ್‌ನಲ್ಲಿ ₹99.95 ದರ ಇರುವುದು ದೊಡ್ಡ ವ್ಯತ್ಯಾಸ. ₹20-30 ಹೆಚ್ಚು ಇದ್ದರೆ ಹೇಗೆ ನಾವು ಸ್ಪರ್ಧೆ ಮಾಡುವುದು. ಇದು ನಮ್ಮ ಹೊಟ್ಟೆ ಮೇಲೆ ಚಪ್ಪಡಿ ಹೇಳದಂತಾಗಿದೆ. ಹೊಸ ಆಟೋಗಳನ್ನು ಸಾಲದಲ್ಲಿ ಖರೀದಿಸಿರುವ ಚಾಲಕರ ಆರ್ಥಿಕ ಸಂಕಷ್ಟ ಹೆಚ್ಚಾಗಿದ್ದು, “ಲೋನ್ ಕಟ್ಟುವುದು ಕಷ್ಟವಾಗುತ್ತಿದೆ. ದಿನದ ಆದಾಯ ಕಡಿಮೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕುಟುಂಬವನ್ನು ನಡೆಸುವುದು ತುಂಬಾ ಕಷ್ಟ” ಎಂದು ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಗ್ಯಾಸ್ ಬಂಕ್ ಸಿಬ್ಬಂದಿ, “ನಾವು ಕೇವಲ ಕಂಪನಿಯ ಸೂಚನೆಗಳನ್ನು ಪಾಲಿಸುತ್ತೇವೆ. ದರ ನಿಗದಿ ಮಾಡುವ ಅಧಿಕಾರ ನಮ್ಮಲ್ಲಿಲ್ಲ. ನಮ್ಮ ಮೇಲಿರುವವವರ ಆದೇಶದ ಪ್ರಕಾರವೇ ದರ ಜಾರಿಯಾಗಿದೆ” ಎಂದು ಸ್ಪಷ್ಟಪಡಿಸಿದರು.ಈ ವೇಳೆ ಸ್ಥಳಕ್ಕೆ ಆಗಮಿಸಿದ ಶ್ರೀ ಹೊಯ್ಸಳ ಆಟೋ ಚಾಲಕರ ಮತ್ತು ಮಾಲೀಕರ ಸಂಘ ( ಬೇಲೂರು ಅಧ್ಯಕ್ಷ ದೀಪು ಮಾತನಾಡಿ, “ಸಿಎನ್‌ಜಿ ದರವನ್ನು ಇಷ್ಟೇ ವೇಗವಾಗಿ ಹೆಚ್ಚಿಸುವುದು ಸರಿಯಲ್ಲ. ಚಾಲಕರ ಜೀವನವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹಾಗೂ ಕಂಪನಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶೌಕತ್, ಗೌರವ ಅಧ್ಯಕ್ಷ ಪುಟ್ಟರಾಜು ಹಾಗೂ ಸದಸ್ಯರಾದ ರಘು, ಮಂಜುನಾಥ್, ಚಂದ್ರು, ಅರುಣ, ಆಲಿ, ಯೋಗೇಶ್, ಮಲ್ಲೇಶ್, ಸುದಿ ಸೇರಿದಂತೆ ಅನೇಕ ಆಟೋ ಚಾಲಕರು ಹಾಜರಿದ್ದರು.