ಕುಕನೂರು ಪಟ್ಟಣ ಪಂಚಾಯಿತಿಯಲ್ಲಿ ಹಕ್ಕು ಬದಲಾವಣೆ (ಮ್ಯೂಟೇಷನ್) ಪ್ರಕ್ರಿಯೆ ಶುಲ್ಕ ಕಡಿಮೆ ಮಾಡಬೇಕು ಎಂದು ಕುಕನೂರು ಪಟ್ಟಣ ಹಿತರಕ್ಷಣಾ ಸಮಿತಿಯವರು ಪಪಂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಕುಕನೂರು: ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ಹಕ್ಕು ಬದಲಾವಣೆ (ಮ್ಯೂಟೇಷನ್) ಪ್ರಕ್ರಿಯೆಗೆ ಮಾರುಕಟ್ಟೆ ಮೌಲ್ಯದ ಶೇ. 2 ಶುಲ್ಕ ವಿಧಿಸಲಾಗುತ್ತಿರುವ ಕುರಿತು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅದನ್ನು ಕಡಿಮೆ ಮಾಡಬೇಕು ಎಂದು ಕುಕನೂರು ಪಟ್ಟಣ ಹಿತರಕ್ಷಣಾ ಸಮಿತಿಯವರು ಪಪಂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ 1964ರ ಕರ್ನಾಟಕ ಪೌರಸಭೆಗಳ ಅಧಿನಿಯಮ ಮತ್ತು ಸಂಬಂಧಿತ ನಿಯಮಾವಳಿಗಳ ಪ್ರಕಾರ ಶೇ. 2 ಶುಲ್ಕ ವಿಧಿಸಲು ಸ್ಪಷ್ಟವಾದ ಕಾನೂನು ಆಧಾರವಿದೆಯೇ ಎಂಬ ಪ್ರಶ್ನೆ ಎತ್ತಲಾಗಿದೆ. ಜಿಲ್ಲೆಯ ಇತರ ಸ್ಥಳೀಯ ಸಂಸ್ಥೆಗಳಲ್ಲಿ ಅತಿ ಕಡಿಮೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಕುಕನೂರಿನಲ್ಲಿ ಮಾತ್ರ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಸಾವಿರಾರು ರುಪಾಯಿ ಸಂಗ್ರಹಿಸಲಾಗುತ್ತಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ತಮ್ಮ ಆಸ್ತಿ ಹಕ್ಕು ಬದಲಾವಣೆ ಮಾಡಲು ಅನಗತ್ಯ ಆರ್ಥಿಕ ಸಂಕಷ್ಟ ಅನುಭವಿಸುತ್ತಿವೆ. ಪಟ್ಟಣ ಪಂಚಾಯಿತಿ ಸಾರ್ವಜನಿಕರ ತೆರಿಗೆ ಹಣದಿಂದ ನಡೆಯುವ ಸಂಸ್ಥೆಯಾಗಿದ್ದು, ಯಾವುದೇ ತೆರಿಗೆ ಅಥವಾ ಶುಲ್ಕ ವಿಧಿಸುವ ಮೊದಲು ಸರ್ಕಾರದ ಆದೇಶ, ಬೈಲಾ ಹಾಗೂ ಸಾಮಾನ್ಯ ಸಭೆಯ ಅನುಮೋದನೆ ಕಡ್ಡಾಯವಾಗಿದೆ. ಆದ್ದರಿಂದ ಶೇ. 2 ಶುಲ್ಕ ವಸೂಲಿಗೆ ಸಂಬಂಧಿಸಿದ ಸರ್ಕಾರದ ಆದೇಶ, ಸಾಮಾನ್ಯ ಸಭೆಯ ನಿರ್ಣಯ, ಬೈಲಾ ಮತ್ತು ಲೆಕ್ಕಪತ್ರಗಳ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ನಾಗೇಶ, ಸಾರ್ವಜನಿಕರ ಮನವಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ವಿಷಯವನ್ನು ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ತೆಗೆದುಕೊಂಡು, ಕಾನೂನುಬದ್ಧವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಮಿತಿಯ ಸಹಸಂಚಾಲಕ ಮಂಜುನಾಥ ನಾಡಗೌಡರ, ಸಮಿತಿಯ ಸಂಚಾಲಕರಾದ ರವಿ ಜಕ್ಕ, ಸದಸ್ಯರಾದ ಬಸಪ್ಪ ಲಾಲಗೊಂಡ್ರ, ಬಸವಣ್ಣ ಈಬೇರಿ, ರಾಮನಗೌಡ ಅರಿಶಿನಬಿಡಿ, ಶರಣಪ್ಪ ಚೆಂಡೂರು, ವೀರೇಶ ಸಬರದ, ಮಹಾಂತೇಶ ಹೂಗಾರ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.