ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ರಾಜ್ಯ ಸರ್ಕಾರವು ಒಂದನೇ ತರಗತಿ ದಾಖಲಾತಿಗೆ ಮಕ್ಕಳ ವಯೋಮಿತಿಯನ್ನು ಅವೈಜ್ಞಾನಿಕವಾಗಿ ನಿರ್ಧಾರ ಮಾಡಿರುವುದನ್ನು ಖಂಡಿಸಿ ಮತ್ತು ಶಾಲಾ ಪ್ರವೇಶಾತಿಗೆ ಕನಿಷ್ಟ ವಯೋಮಿತಿಯನ್ನು ಸಡಿಲಿಸುವಂತೆ ಒತ್ತಾಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ಶುಕ್ರವಾರ ಕನ್ನಡ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ಈ ವೇಳೆ ಮಾತನಾಡಿದ ಮುಖಂಡರು, ಒಂದನೇ ತರಗತಿಗೆ ಕನಿಷ್ಟ ವಯೋಮಿತಿ 6 ವರ್ಷ ಪೂರೈಸಿರಬೇಕು ಎನ್ನುವ ರಾಜ್ಯ ಸರ್ಕಾರದ 2022ರ ಆದೇಶವನ್ನು ಪ್ರಸಕ್ತ ಸಾಲಿನಿಂದ ಜಾರಿಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಇದರಿಂದ ರಾಜ್ಯಾದ್ಯಂತ ಯುಕೆಜಿ ಮಕ್ಕಳು ಮತ್ತೆ ಒಂದು ವರ್ಷ ಅದೇ ತರಗತಿಯನ್ನು ಪುನರಾವರ್ತಿತವಾಗಿ ಓದುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪೋಷಕರಿಗೆ ಆರ್ಥಿಕ ಹೊರೆ ಹೆಚ್ಚಾಗಿ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು.
ನಿಯಮದ ಪ್ರಕಾರ, 2025ರ ಜೂನ್ 1ಕ್ಕೆ 6 ವರ್ಷ ತುಂಬಿರುವ ಮಕ್ಕಳಿಗೆ ಮಾತ್ರ ಒಂದನೇ ತರಗತಿಗೆ ಪ್ರವೇಶ ನೀಡುವುದಾಗಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಹೇಳುತ್ತಿವೆ. ಇದರಿಂದ ರಾಜ್ಯದಲ್ಲಿ 6 ವರ್ಷ ತುಂಬದ ಯುಕೆಜಿ ಮಕ್ಕಳು ಮತ್ತೆ ಒಂದು ವರ್ಷ ಯುಕೆಜಿ ಪುನರಾವರ್ತಿಸಬೇಕಾಗುತ್ತದೆ.ರಾಜ್ಯದಲ್ಲಿ ಇಂಥ ಸುಮಾರು ಐದು ಲಕ್ಷ ಮಕ್ಕಳು ಇದ್ದು, ಅವರ ಶೈಕ್ಷಣಿಕ ಜೀವನ ಸಂದಿಗ್ಧಕ್ಕೆ ಸಿಲುಕಿದೆ ಎಂದು ಪೋಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಬಹುತೇಕ ಶಾಲೆಗಳು ಮಕ್ಕಳನ್ನು ಎಲ್‌ಕೆಜಿಗೆ ಸೇರಿಸಿಕೊಳ್ಳುವಾಗ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ. ಈಗ ದಿಢೀರ್ ನಿಯಮ ಮುಂದಿಡುತ್ತಿವೆ ಎನ್ನುವುದು ಪೋಷಕರ ಆರೋಪ.
ಇಂಥ ಮಕ್ಕಳ ಪಟ್ಟಿಯಲ್ಲಿ ಒಂದೆರಡು ದಿನದ ವ್ಯತ್ಯಾಸ ಇರುವವರು, ವಾರಗಳ, ತಿಂಗಳ ವ್ಯತ್ಯಾಸ ಇರುವವರೂ ಇದ್ದಾರೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಕೂಡಲೇ ಹಿಂದಿನ ವರ್ಷದಂತೆ ಮಕ್ಕಳನ್ನು ಶಾಲೆಗೆ ಸೆರಿಸಿಕೊಳ್ಳಬೇಕೆಂದು ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಕನ್ನಡ ಪಕ್ಷದ ರಾಜ್ಯ ಮುಖಂಡರಾದ ಸಂಜೀವನಾಯಕ್, ಡಿ ಪಿ ಆಂಜನೇಯ, ತಾಲೂಕು ಅಧ್ಯಕ್ಷ ಡಿ ವೆಂಕಟೇಶ್, ಜಿಲ್ಲಾಧ್ಯಕ್ಷ ಮುನಿಪಾಪಯ್ಯ, ಮುಖಂಡರಾದ ವಿ.ಪರಮೇಶ್, ಆರ್.ರಂಗನಾಥ್, ಬೋರೇಗೌಡ, ಕೆ ಎನ್ ಕುಮಾರ್, ಕೇಬಲ್ ಮುನಿರಾಜು, ಶಿವಕುಮಾರ್ ಆಚಾರ್, ರಾಮಚಂದ್ರ, ಜಿ ರಾಮು, ಕಜಾಪ ದ ಕೆ.ವೆಂಕಟೇಶ್, ಸೂರಿ, ಆನಂದ್ ರಾಜ್, ಚಂದ್ರಣ್ಣ, ಶಿವರಾಜ್ ಸೇನಾ ಸಮಿತಿಯ ಆರ್.ರಮೇಶ್, ಛಲವಾದಿ ಮಹಾಸಭಾದ ಗುರುರಾಜಪ್ಪ, ಕಾವೇರಿ ಕನ್ನಡ ಸಂಘ ಮೋಹನ್ ಕುಮಾರ್ ಸೇರಿ ಇತರರು ಇದ್ದರು.ಫೋಟೋ-11ಕೆಡಿಬಿಪಿ1- 1ನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲಿಸಲು ಆಗ್ರಹಿಸಿ ದೊಡ್ಡಬಳ್ಳಾಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ಕನ್ನಡ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.