ಗಜೇಂದ್ರಗಡ: ತಾಲೂಕಿನ ಖಾಸಗಿ ಶಾಲಾ-ಕಾಲೇಜುಗಳಿಗೆ ಮತ್ತು ಕನ್ನಡ ಶಾಲೆಗಳ ರಕ್ಷಣೆಗೆ ಹಾಗೂ ಶಾಲೆಗಳಿಗೆ ವಿಧಿಸಿದ ಷರತ್ತುಗಳನ್ನು ಸಡಿಲಗೊಳಿಸಲು ಆಗ್ರಹಿಸಿ ತಾಲೂಕಿನ ಖಾಸಗಿ ಅನುದಾನ ರಹಿತ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ ತಾಲೂಕು ಘಟಕದಿಂದ ಸೋಮವಾರ ಇಲ್ಲಿನ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ನೀಡಿದರು.
ರಾಜ್ಯದಲ್ಲಿ ಸರ್ಕಾರದ ವಿಪರೀತ ಕಠಿಣ ಕಾರಣಗಳಿಂದ ಕಳೆದ ೯-೧೦ ವರ್ಷಗಳಿಂದ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಮಾತೃಭಾಷೆ ಕನ್ನಡ ಉಳಿಯಬೇಕು ಎಂದರೆ ಕನ್ನಡ ಶಾಲೆಗಳ ಸಮಗ್ರ ಅಭಿವೃದ್ಧಿ ಸರ್ಕಾರದ ಮುಖ್ಯ ಉದ್ಧೇಶವಾಗಬೇಕು. ಆದರೆ ದುರಾದೃಷ್ಟ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಪ್ರತಿ ವರ್ಷ ಸಾವಿರಾರು ಕನ್ನಡ ಶಾಲೆಗಳು ಮುಚ್ಚುತ್ತಿವೆ. ಇತ್ತ ಹಲವಾರು ಖಾಸಗಿ ಮಾಧ್ಯಮ ಕನ್ನಡ ಶಾಲೆಗಳು ಸರ್ಕಾರದ ನೂರಾರು ನಿಯಮಗಳಿಂದ ಸೋತು, ಸುಣ್ಣವಾದ ಪರಿಸ್ಥಿತಿಯಿಂದಾಗಿ ಕನ್ನಡ ಶಾಲೆಗಳ ಮಾರಣ ಹೋಮ ಆಗುತ್ತಿದೆ ಎಂದು ಕಿಡಿಕಾರಿದ ಸಂಘದ ಪದಾಧಿಕಾರಿಗಳು, ೧೯೯೫ರಿಂದ ರಾಜ್ಯದಲ್ಲಿ ಪ್ರಾರಂಭವಾದ ಖಾಸಗಿ ಶಾಲಾ, ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಿ, ನವೀಕರಣ ನಿಯಮಗಳನ್ನು ಸಡಿಲಗೊಳಿಸಬೇಕು. ಬಡ ಮಕ್ಕಳಿಗೆ ವರವಾಗಿರುವ ಆರ್‌ಟಿಇ ಖಾಸಗಿ ಶಾಲೆಗಳಿಗೆ ಮರು ಜಾರಿ ಮಾಡಬೇಕು. ಅನುದಾನಿತ ಶಾಲಾ,ಕಾಲೇಜುಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ರಾಜ್ಯದಲ್ಲಿನ ಅನಧಿಕೃತ ಕೋಚಿಂಗ್ ಸೆಂಟರ್‌ಗಳನ್ನು ಬಂದ್ ಮಾಡಬೇಕು ಹಾಗೂ ಕನ್ನಡ ಶಾಲೆಗಳನ್ನು ಬಂದ್ ಮಾಡಿ, ಕರ್ನಾಟಕ ಪಬ್ಲಿಕ್ ಶಾಲೆ(ಇಂಗ್ಲಿಷ್ ಮಾಧ್ಯಮ) ಪ್ರಾರಂಭಿಸುತ್ತಿರುವುದನ್ನು ಕೈಬಿಡಲು ಸರ್ಕಾರ ಮುಂದಾಗದಿದ್ದರೆ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಎಚ್ಚರಿಸಿದರು.ಈ ವೇಳೆ ಕರ್ನಾಟಕ ರಾಜ್ಯ ಅನುದಾನ ರಹಿತ ಶಾಲಾ, ಕಾಲೇಜುಗಳ ಆಡಳಿತ ಮಂಡಳಿ ಹಾಗೂ ನೌಕರರ ಒಕ್ಕೂಟ ಸೇರಿ ವಿವಿಧ ಸಂಘಟನೆಗಳು ನೀಡಿದ ಮನವಿಯನ್ನು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಸ್ವೀಕರಿಸಿದರು.ಈ ವೇಳೆ ಖಾಸಗಿ ಅನುದಾನ ರಹಿತ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ ಸಂಘಟನೆ ತಾಲೂಕಾಧ್ಯಕ್ಷ ಜಗದೀಶ ಹಿರೇಮಠ, ಉಪಾಧ್ಯಕ್ಷ ಲೋಕಪ್ಪ ರಾಠೋಡ, ಎಸ್.ಎಸ್. ಬೆಳವಣಕಿಮಠ, ಈಶ್ವರ ಬೆಟಗೇರಿ, ಎಂ.ಎ.ಅಗಸಿಮನಿ, ಎಸ್.ವಿ. ಶಾಶೆಟ್ಟಿ, ಎಂ.ವಿ. ಗಣವಾರಿ, ಎಂ.ಬಿ. ಪೊಲೀಸ್‌ಪಾಟೀಲ, ಉದಯ ಹಿರೇಮಠ, ರೇಖಾ ಮಾನೆ, ಮಂಜುಳಾ ಭಜಂತ್ರಿ, ಸೇರಿ ಇತರರು ಇದ್ದರು.