ಎಲ್ಲಾ ವಿವಿಗಳಿಗೆ ಅನುದಾನ ಬಿಡುಗಡೆ ಮಾಡಲು ಆಗ್ರಹ

KannadaprabhaNewsNetwork | Published : Apr 25, 2025 11:49 PM

ಸಾರಾಂಶ

ಕರ್ನಾಟಕದ ಎಲ್ಲಾ ವಿಶ್ವ ವಿದ್ಯಾಲಯಗಳಿಗೂ ಪ್ರಥಮವಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡಲೇಬೇಕು, ಶೈಕ್ಷಣಿಕ ಅಭಿವೃದ್ಧಿಗೆ ಮಾರಕವಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮೇ ತಿಂಗಳ ಮೊದಲ ವಾರದಲ್ಲಿ ಹಾಸನ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಗುವುದು ಎಂದು ಕದಂಬ ಸೈನ್ಯ ರಾಜ್ಯಾಧ್ಯಕ್ಷ ಕೆ. ಬೇಕ್ರಿ ರಮೇಶ್ ತಿಳಿಸಿದರು. ಬೆಂಗಳೂರು ಉತ್ತರ ವಿವಿ ಅತಿಥಿ ಉಪನ್ಯಾಸಕರು, ಖಾಯಂ ಅಧಿಕಾರಿಗಳು, ನೌಕರರು ಇಲ್ಲ, ಆಡಳಿತ ವ್ಯವಸ್ಥೆಗೆ ಸಂಕಷ್ಟ ಮೂಲ ಸೌಕರ್ಯಗಳು ಮರೀಚಿಕೆ ಆಗಿದೆ ಎಂದು ಆತಂಕವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಕರ್ನಾಟಕದ ಎಲ್ಲಾ ವಿಶ್ವ ವಿದ್ಯಾಲಯಗಳಿಗೂ ಪ್ರಥಮವಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡಲೇಬೇಕು, ಶೈಕ್ಷಣಿಕ ಅಭಿವೃದ್ಧಿಗೆ ಮಾರಕವಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮೇ ತಿಂಗಳ ಮೊದಲ ವಾರದಲ್ಲಿ ಹಾಸನ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಗುವುದು ಎಂದು ಕದಂಬ ಸೈನ್ಯ ರಾಜ್ಯಾಧ್ಯಕ್ಷ ಕೆ. ಬೇಕ್ರಿ ರಮೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಕರ್ನಾಟಕ ವಿಶ್ವವಿದ್ಯಾಲಯಗಳಿಗೆ ಅನುದಾನ ಇಲ್ಲ, ಗ್ಯಾರಂಟಿ ಯೋಜನೆಗಳಿಗೆ ಖಜಾನೆಯಲ್ಲಿ ಹಣ ಇದ್ದು, ಶೈಕ್ಷಣಿಕ ಅಭಿವೃದ್ಧಿಗೆ ಮಾರಕವಾಗಿದೆ ಎಂದು ರಾಜ್ಯ ಸರ್ಕಾರವನ್ನು ದೂರಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರೇ ಭಾರತದ ಸಂವಿಧಾನದಲ್ಲಿ ಆರೋಗ್ಯ ಮತ್ತು ಶಿಕ್ಷಣ ಉಚಿತವಾಗಿ ನೀಡಬೇಕು ಎಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಹೇಳಿದ್ದರೂ ನಿರ್ಲಕ್ಷ್ಯ ಏಕೆ? ರಾಜ್ಯದ ಪ್ರಥಮ ವಿದ್ಯಾಕಾಶಿ ಮೈಸೂರು ವಿವಿ ಶತಮಾನೋತ್ಸವ ಆಚರಣೆ ಮಾಡಿಕೊಂಡ ಪಿಂಚಣಿಗೂ ಹಣ ಇಲ್ಲ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಖಾಲಿ ಇರುವ ಬೋಧಕರು, ಬೋಧಕೇತರ ಹುದ್ದೆಗಳ ನೇಮಕಾತಿ ಮಾಡಲಿಲ್ಲ. ಹೀಗೇ ಆದರೆ ಮುಂದಿನ ಯುವಪೀಳಿಗೆ ಉನ್ನತ ಶಿಕ್ಷಣ ಕಲಿಸುವವರೇ ಇಲ್ಲದಂತಾಗುತ್ತದೆ ಎಂದು ಗುಡುಗಿದರು.

ಮೂಲ ಸೌಕರ್ಯಗಳು ಮರೀಚಿಕೆ:

ಮಂಡ್ಯ ಹಾಸನ ಚಾಮರಾಜನಗರ ಕೊಡಗು ವಿವಿಯನ್ನು ವಿಲೀನಗೊಳಿಸುವ ನಿರ್ಧಾರ ಸರಿಯೇ? ಎಂದು ಇದೇ ವೇಳೆ ಪ್ರಶ್ನಿಸಿದರು. ಶ್ರೀಮಂತ ಬೆಂಗಳೂರು ವಿವಿ ಹಣದ ಸಂಕಷ್ಟಕ್ಕೆ ಸಿಲುಕಿದೆ. ಪಿಂಚಣಿಗೂ ಹಣವೇ ಇಲ್ಲ. ಇತಿಹಾಸ ಸಾಧನೆ ಮಾಡಿರುವ ವಿವಿ ಕೇಂದ್ರ ಬಿಡುಗಡೆ ಮಾಡಿರುವ ದೇಶದ ಟಾಪ್ ವಿವಿಗಳಲ್ಲಿ ೨೪ನೇ ಸ್ಥಾನದಲ್ಲಿದೆ. ಇತರೆ ಶೈಕ್ಷಣಿಕ, ಸಂಶೋಧನಾ ಚಟುವಟಿಕೆಗಳಿಗೆ ಹಿನ್ನಡೆ, ಬೆಂಗಳೂರು ಉತ್ತರ ವಿವಿ ಅತಿಥಿ ಉಪನ್ಯಾಸಕರು, ಖಾಯಂ ಅಧಿಕಾರಿಗಳು, ನೌಕರರು ಇಲ್ಲ, ಆಡಳಿತ ವ್ಯವಸ್ಥೆಗೆ ಸಂಕಷ್ಟ ಮೂಲ ಸೌಕರ್ಯಗಳು ಮರೀಚಿಕೆ ಆಗಿದೆ ಎಂದು ಆತಂಕವ್ಯಕ್ತಪಡಿಸಿದರು.

ಬೀದರ್ ವಿವಿಯಲ್ಲಿ ೧೦೯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆ ಅನುದಾನ ಕೊರತೆ, ಏಕೈಕ ಮಹಿಳಾ ಅಕ್ಕಮಹಾದೇವಿ ವಿವಿಯಲ್ಲಿ ಕುಲಪತಿ ಇಲ್ಲ ಮೂಲ ಸೌಕರ್ಯಗಳ ಕೊರತೆ ಮಂಜೂರಾದ ಹುದ್ದೆಗಳಲ್ಲಿ ೫೦ರಷ್ಟು ಖಾಲಿ ಸಮಸ್ಯೆಗಳೇ ಇದೆ. ಹಾವೇರಿ ವಿವಿಯಲ್ಲಿ ಸರ್ಕಾರದಿಂದ ಒಂದೇ ಒಂದು ರುಪಾಯಿ ಕೊಡಲಿಲ್ಲ. ಖಾಯಂ ಉಪನ್ಯಾಸಕರ ಕೊರತೆ, ವಿದ್ಯಾರ್ಥಿಗಳ ಹಣದಲ್ಲೇ ನಿರ್ವಹಣೆ. ಖಾಯಂ ಬೋಧಕರ ಬೋಧಕೇತರ ಕೊರತೆ, ಐದು ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ವ್ಯವಸ್ಥೆ ಮಾಡಲಾಗಿದೆ. ಸಾಕಷ್ಟು ಅನುದಾನ ನೀಡಿದರೆ ಹೆಮ್ಮರವಾಗಿ ಬೆಳೆಯುವ ಎಲ್ಲಾ ಲಕ್ಷಣಗಳು ಇವೆ. ಕನಿಷ್ಠ ಸೌಲಭ್ಯಗಳೂ ಇಲ್ಲದೆ ಇರುವ ಕೊಪ್ಪಳ ವಿವಿ ಕುಲಪತಿ ಬಸ್ಸಿನಲ್ಲಿ ಬರಬೇಕು. ಖಾಯಂ ಬೋಧಕರು, ಬೋಧಕೇತರ ಸಿಬ್ಬಂದಿ ಇಲ್ಲ, ಮೂಲಭೂತ ಸೌಕರ್ಯಗಳು ಇಲ್ಲದೆ ಸೊರಗುತ್ತಿದೆ ಎಂದರು.

ವಿವಿಗಳ ಬಗ್ಗೆ ತಾತ್ಸಾರ:

ಹಾಸನ ವಿವಿಯಲ್ಲಿ ಮೂಲ ಸೌಕರ್ಯಕ್ಕೆ ಹಣದ ಕೊರತೆ. ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ ಮುಚ್ಚಲು ತಿರ್ಮಾನ, ಅನುದಾನ ಬಿಡುಗಡೆ ಮಾಡಲಿಲ್ಲ. ದೇಶದ ಸಮಾಜದ ಬೆಳವಣಿಗೆಗೆ ಶಿಕ್ಷಣ, ಸಾಕ್ಷರತೆ ಬಹಳ ಪ್ರಮುಖವಾದದ್ದು ಹಾಗಾಗಿ ವಿವಿಗಳ ಅಂತರಿಕ ಆದಾಯದ ಜೊತೆಗೆ ರಾಜ್ಯ ಸರ್ಕಾರ ಪ್ರತಿ ವರ್ಷ ನಿರ್ದಿಷ್ಟವಾದ ಅನುದಾನ ನೀಡಬೇಕು. ಆದರೆ ಪಕ್ಷಾತೀತವಾಗಿ ಎಲ್ಲಾ ಸರ್ಕಾರಗಳು ವಿವಿಗಳ ಬಗ್ಗೆ ತಾತ್ಸಾರದ ಅಸಡ್ಡೆ, ಹಣ ಬಿಡುಗಡೆ ಮಾಡದೆ ಇರುವುದು ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ಕೊರತೆ, ಸಂಪೂರ್ಣ ನಿರ್ಲಕ್ಷ ವಹಿಸಿದ್ದರಿಂದ ಹಿಂದಿನ, ಪ್ರಸ್ತುತ ಸರ್ಕಾರಗಳು ಆರೋಪ ಪ್ರತ್ಯಾರೋಪ ಮಾಡುವುದರಿಂದ ಇನ್ನೂ ಹತ್ತು ವರ್ಷಗಳಲ್ಲಿ ಮುಚ್ಚುವ ಸ್ಥಿತಿ ಬರುವುದು ಗ್ಯಾರಂಟಿ ಅಥವಾ ಖಾಸಗಿಯವರ ಸಹಭಾಗಿತ್ವದಲ್ಲಿ ಉದ್ಧಾರ ಮಾಡುತ್ತೇವೆ ಎಂದು ಕನ್ನಡನಾಡಿನ ವಿವಿಗಳನ್ನು ಮಾರುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು. ಲಘುವಾಗಿ ಪರಿಗಣಿಸಿದ್ದಾರೆ:

ನಮ್ಮಲ್ಲಿ ಆಡಳಿತ ಸೂತ್ರ ಹಿಡಿದವರು ಶಿಕ್ಷಣ ಕ್ಷೇತ್ರವನ್ನು ಪ್ರಯೋಗಶಾಲೆ ಎಂದು ಭಾವಿಸಿದಂತಿದೆ, ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೂ ಈ ಮಾತು ಅನ್ವಯಿಸುತ್ತದೆ, ಬಹಳ ಗಂಭೀರವಾಗಿ ಪರಿಗಣಿಸಬೇಕಾಗಿದ್ದ ಕ್ಷೇತ್ರವನ್ನು ಲಘುವಾಗಿ ಪರಿಗಣಿಸಲಾಗುತ್ತಿದೆ, ಈ ಕ್ಷೇತ್ರಕ್ಕೆ ಸಂಬಂಧಿಸಿದ ನೀತಿ ನಿರ್ಧಾರಗಳಿಗೆ ವೈಜ್ಞಾನಿಕ ತಳಹದಿಯಾಗಲಿ, ತಜ್ಞರ ಅಭಿಪ್ರಾಯವಾಗಲೀ ಚರ್ಚೆ-ಸಂವಾದಗಳ ಅಗತ್ಯವಾಗಲೀ ಬೇಕು ಅಂತ ಅಧಿಕಾರಸ್ಥರಿಗೆ ಅನ್ನಿಸುತ್ತಲೇ ಇಲ್ಲ, ದೂರಗಾಮಿ ಪರಿಣಾಮಗಳ ಬಗೆಗೆ ಲಕ್ಷ್ಯವೇ ಇಲ್ಲ, ಇದಕ್ಕೆ ಆಡಳಿತ ಪಕ್ಷ, ವಿರೋಧ ಪಕ್ಷಗಳು ಮತ್ತು ಸೂತ್ರ ಹಿಡಿದ ವ್ಯಕ್ತಿಗಳ್ಯಾರೂ, ಹೊರತಾಗಿಲ್ಲ! ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕದ ಎಲ್ಲಾ ವಿಶ್ವ ವಿದ್ಯಾಲಯಗಳಿಗೂ ಪ್ರಥಮವಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡಲೇಬೇಕು. ಶೈಕ್ಷಣಿಕ ಅಭಿವೃದ್ಧಿಗೆ ಮಾರಕವಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಹಾಸನ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕದಂಬ ಸೈನ್ಯ ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಹಾಸನ ಜಿಲ್ಲೆ ಉಪಾಧ್ಯಕ್ಷ ಯಾಕುಬ್ ಖಾನ್ ಗೊರೂರು ಇತರರು ಉಪಸ್ಥಿತರಿದ್ದರು.

Share this article