ಕೋಲಾರ ಜಿಲ್ಲೆಗೆ ಕೃಷ್ಣಾ ನೀರು ಹರಿಸಲು ಒತ್ತಾಯ

KannadaprabhaNewsNetwork | Published : Mar 21, 2025 12:31 AM

ಸಾರಾಂಶ

ಬಯಲು ಸೀಮೆ ಜಿಲ್ಲೆಗಳಾಗಿರುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯಾವುದೇ ನೀರಾವರಿ ಮೂಲಗಳಿಲ್ಲದ ಕಾರಣ ರಾಜ್ಯ ಸರ್ಕಾರ ಬೆಂಗಳೂರಿನ ಕೊಳಚೆ ನೀರನ್ನು ಎರಡು ಹಂತಗಳಲ್ಲಿ ಶುದ್ದೀಕರಿಸಿ ಕೆ.ಸಿ ವ್ಯಾಲಿ ಮತ್ತು ಎನ್ ಹೆಚ್ ವ್ಯಾಲಿ ಯೋಜನೆಗಳ ಮೂಲಕ ಹರಿಸಲಾಗುತ್ತಿರುವ ನೀರಿನಿಂದ ಮಹಿಳೆಯರು ಮತ್ತು ಮಕ್ಕಳು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಕೋಲಾರಕರ್ನಾಟಕದ ಮೂಲವಾಗಿ ಆಂಧ್ರಪ್ರದೇಶಕ್ಕೆ ಹರಿಯುತ್ತಿರುವ ಕೃಷ್ಣ ನದಿ ನೀರನ್ನು ಆಂಧ್ರದ ಗಡಿಗೆ ಹಂಚಿಕೊಂಡಿರುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಗೆ ಶುದ್ಧ ನೀರನ್ನು ಹರಿಸಬೇಕೆಂದು ಸಂಸದ ಮಲ್ಲೇಶ್ ಬಾಬು ಲೋಕಸಭಾ ಅಧಿವೇಶನದಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಲೋಕಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಯೋಜನೆಯ ಮೂಲಕ ಮನೆ ಮನೆಗೆ ನಲ್ಲಿ ಮೂಲಕ ನೀರನ್ನು ಹರಿಸುವ ಮಹತ್ವಾಕಾಂಕ್ಷೆ ಯೋಜನೆ ಜಾರಿಗೆ ತಂದಿದೆ. ಆದರೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಯಾವುದೇ ಶುದ್ದ ಕುಡಿಯುವ ನೀರಿನ ಮೂಲಗಳಿಲ್ಲದ ಕಾರಣ ಕೃಷ್ಣಾ ನೀರನ್ನು ಜಿಲ್ಲೆಗೆ ಹರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದರು.

ಕೊಳಚೆ ನೀರಿನಿಂದ ದುಷ್ಪರಿಣಾಮ

ಬಯಲು ಸೀಮೆ ಜಿಲ್ಲೆಗಳಾಗಿರುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯಾವುದೇ ನೀರಾವರಿ ಮೂಲಗಳಿಲ್ಲದ ಕಾರಣ ರಾಜ್ಯ ಸರ್ಕಾರ ಬೆಂಗಳೂರಿನ ಕೊಳಚೆ ನೀರನ್ನು ಎರಡು ಹಂತಗಳಲ್ಲಿ ಶುದ್ದೀಕರಿಸಿ ಕೆ.ಸಿ ವ್ಯಾಲಿ ಮತ್ತು ಎನ್ ಹೆಚ್ ವ್ಯಾಲಿ ಯೋಜನೆಗಳ ಮೂಲಕ ಹರಿಸಲಾಗುತ್ತಿರುವ ನೀರಿನಿಂದ ಮಹಿಳೆಯರು ಮತ್ತು ಮಕ್ಕಳು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ, ನಿಧಾನವಾಗಿ ಬೆಳೆಗಳು ಗುಣಮಟ್ಟವನ್ನು ಕಳೆದುಕೊಳ್ಳುತ್ತಿವೆ ಹಾಗಾಗಿ ಜಿಲ್ಲೆಗೆ ಶುದ್ದ ನೀರಿನ ಅವಶ್ಯಕತೆ ಇದೆ ಎಂದರು. ಬೆಂಗಳೂರು ಗ್ರಾಮಾಂತರ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶುದ್ದ ನೀರನ್ನು ಹರಿಸುವ ಮಹತ್ವಾಕಾಂಕ್ಷೇ ಯೋಜನೆಯಾಗಿ ರಾಜ್ಯ ಸರ್ಕಾರ ೨೩ ಸಾವಿರ ಕೋಟಿ ವೆಚ್ಚದಲ್ಲಿ ಎತ್ತಿನಹೊಳೆ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದ ಕಳೆದ ೧೦ ವರ್ಷಗಳಿಂದ ಯೋಜನೆ ನನೆಗುದಿಗೆ ಬಿದ್ದಿದ್ದು ಬಯಲು ಸೀಮೆ ಜಿಲ್ಲೆಗಳಿಗೆ ನೀರನ್ನು ಹರಿಸುತ್ತಿಲ್ಲ ಆದ್ದರಿಂದ ಇದೊಂದು ವಿಫಲ ಯೋಜನೆಯಾಗಿದೆಅಂತರ್ಜಲ ಕುಸಿತ

ಕೋಲಾರ ಜಿಲ್ಲೆ ರೇಷ್ಮೆ, ಹಾಲು, ಮಾವು ಮತ್ತು ಟೊಮೆಟೊಗಳ ನಾಡು ಎಂದು ಜನಪ್ರಿಯವಾಗಿದೆ, ಇವುಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಜಿಲ್ಲೆಯು ಹೆಚ್ಚಿನ ಸಂಖ್ಯೆಯ ಕೆರೆಗಳನ್ನು ಹೊಂದಿದ್ದು, ಮುಖ್ಯವಾಗಿ ೨೪೭೯ ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯಿತಿ ಕೆರೆಗಳನ್ನು ಹೊಂದಿದೆ. ಜಿಲ್ಲೆಯಲ್ಲಿ ರೈತರು ಸಂಪೂರ್ಣವಾಗಿ ಅಂತರ್ಜಲವನ್ನು ಅವಲಂಬಿಸಿದ್ದು, ಜಿಲ್ಲೆ ಅಂತರ್ಜಲ ಸವಕಳಿಯ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದೆ ಎಂದರು.

ಆದ್ದರಿಂದ, ರೈತರು ಒಣ ಕೃಷಿಯನ್ನು ಅವಲಂಭಿಸಿದ್ದಾರೆ ಆದ್ದರಿಂದ ಕರ್ನಾಟಕದಲ್ಲಿ ಹರಿಯುವ ಕೃಷ್ಣ ನದಿಯ ನೀರು ಆಂಧ್ರಪ್ರದೇಶಕ್ಕೆ ಹರಿಯುತ್ತಿದ್ದು ಬಯಲು ಸೀಮೆ ಜಿಲ್ಲೆಗೆ ಕೃಷ್ಣಾ ನದಿಯ ಬಿ ಸ್ಕೀಂ ನಲ್ಲಿರುವ ಪಾಲಿನ ನೀರನ್ನು ಆಂದ್ರಪ್ರದೇಶಕ್ಕೆ ಹೆಚ್ಚುವರಿಯಾಗಿ ಹರಿಸಿ ಅಲ್ಲಿಂದ ಆಂಧ್ರಪ್ರದೇಶದ ಗಡಿ ಜಿಲ್ಲೆಗಳಾಗಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನೀರನ್ನು ಹರಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿದರು.

Share this article