ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲು ಆಗ್ರಹ

KannadaprabhaNewsNetwork |  
Published : Aug 08, 2026, 02:30 AM IST
ಕಂಪ್ಲಿಯಲ್ಲಿ ನಡೆದ ರೈತರ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯ ಅಧ್ಯಕ್ಷ ಬಿ.ವಿ.ಗೌಡ ಮಾತನಾಡಿದರು. | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯದಲ್ಲಿ ಸದ್ಯ ಸುಮಾರು 70 ಟಿಎಂಸಿ ನೀರಿನ ಸಂಗ್ರಹವಿದ್ದು, ಬೆಳೆಗಳ ರಕ್ಷಣೆಗಾಗಿ ಅಚ್ಚುಕಟ್ಟು ಪ್ರದೇಶದ ಎಲ್ಲ ಕಾಲುವೆಗಳಿಗೆ ಹಾಗೂ ತುಂಗಭದ್ರಾ ನದಿಗೆ ತಕ್ಷಣ ನೀರು ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಒತ್ತಾಯಿಸಿದರು.

ಕಂಪ್ಲಿ: ತುಂಗಭದ್ರಾ ಜಲಾಶಯದಲ್ಲಿ ಸದ್ಯ ಸುಮಾರು 70 ಟಿಎಂಸಿ ನೀರಿನ ಸಂಗ್ರಹವಿದ್ದು, ಬೆಳೆಗಳ ರಕ್ಷಣೆಗಾಗಿ ಅಚ್ಚುಕಟ್ಟು ಪ್ರದೇಶದ ಎಲ್ಲ ಕಾಲುವೆಗಳಿಗೆ ಹಾಗೂ ತುಂಗಭದ್ರಾ ನದಿಗೆ ತಕ್ಷಣ ನೀರು ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಒತ್ತಾಯಿಸಿದರು.

ಪಟ್ಟಣದ ಸಂಗಾತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಭೆಯಲ್ಲಿ ಮಾತನಾಡಿದರು.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಸಾವಿರಾರು ರೈತರು ನೀರಾವರಿ ನೀರನ್ನೇ ನಂಬಿ ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಸಿದ್ದಾರೆ. ಆದರೆ, ಈಗಾಗಲೇ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಕಾಲುವೆಗಳಿಗೆ ನೀರು ಹರಿಸುವ ಕುರಿತು ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ರೈತರಲ್ಲಿ ತೀವ್ರ ಆತಂಕ ಉಂಟುಮಾಡಿದೆ ಎಂದು ಹೇಳಿದರು.

ಆಗಸ್ಟ್ 10ರಿಂದ ಕಾಲುವೆಗಳಿಗೆ ನೀರು ಬಂದ್ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ರೈತರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಸದ್ಯ ಕುಡಿಯುವ ನೀರಿನ ಉದ್ದೇಶದಿಂದ ಮಾತ್ರ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದ್ದು, ರೈತರು ಅದನ್ನೇ ಬೆಳೆಗಳಿಗೆ ನೀರು ಬಿಡಲಾಗಿದೆ ಎಂದು ಭಾವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆದು ನಿಂತಿರುವ ಬೆಳೆಗಳಿಗೆ ಅಗತ್ಯ ಪ್ರಮಾಣದ ನೀರು ಹರಿಸದಿದ್ದರೆ ಅಪಾರ ನಷ್ಟ ಉಂಟಾಗಲಿದ್ದು, ಸರ್ಕಾರ ಹಾಗೂ ಅಧಿಕಾರಿಗಳು ಇದರ ಸಂಪೂರ್ಣ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಲಾಶಯದಲ್ಲಿ ಸಾಕಷ್ಟು ನೀರು ಲಭ್ಯವಿದ್ದರೂ ರೈತರ ಹಿತಾಸಕ್ತಿಯನ್ನು ಕಡೆಗಣಿಸಿ ನೀರು ಹರಿಸದಿರುವುದು ಸಮಂಜಸವಲ್ಲ. ತಕ್ಷಣವೇ ಎಲ್ಲ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಿ ರೈತರ ಬೆಳೆಗಳನ್ನು ರಕ್ಷಿಸಬೇಕು. ಒಂದು ವೇಳೆ ನೀರು ಹರಿಸಲು ಸಾಧ್ಯವಾಗದಿದ್ದರೆ ಸರ್ಕಾರ ರೈತರಿಗೆ ಬರ ಪರಿಹಾರ ಘೋಷಿಸಿ ಎಕರೆಗೆ 50 ಸಾವಿರದಂತೆ ಪರಿಹಾರಧನ ನೀಡಬೇಕು ಎಂದು ಆಗ್ರಹಿಸಿದರು.

ಮುನಿರಾಬಾದ್ ಕೇಂದ್ರ ಕಚೇರಿಯ ಅಧಿಕಾರಿಗಳು ರೈತಪರವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಕಾಲದಲ್ಲಿ ನೀರು ಹರಿಸದ ಕಾರಣ ಅಚ್ಚುಕಟ್ಟು ಪ್ರದೇಶದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಿ ತ್ವರಿತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ವಿ. ವೀರೇಶ್, ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ್, ನಗರ ಅಧ್ಯಕ್ಷ ಎನ್. ತಿಮ್ಮಪ್ಪನಾಯಕ, ಪದಾಧಿಕಾರಿಗಳಾದ ಇಟಗಿ ಶರಣಗೌಡ, ಗುತ್ತಿಗೆನೂರು ಶಿವಜಾತ, ಕಾಗೆ ಈರಣ್ಣ, ಜಿ. ಅಮರಗೌಡ, ರವಿಚಂದ್ರ ಕಂಠನೇನಿ, ವೆಂಕಟರಮಣ, ಪ್ರಕಾಶ, ಬಿ. ನಾಗರಾಜಗೌಡ ಸೇರಿದಂತೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಅನೇಕ ರೈತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

3 ವರ್ಷದಿಂದ ಶುದ್ಧ ಕುಡಿವ ನೀರಿನ ಘಟಕ ಬಂದ್
ಜೀವಭಯದಲ್ಲೇ ಬಸ್‌ನಲ್ಲಿ ವಿದ್ಯಾರ್ಥಿಗಳ ಪ್ರಯಾಣ