ಕೊಪ್ಪಳ: ಭಾರತದ ಶ್ರೀಮಂತ ಸಂಸ್ಕೃತಿ, ಪರಂಪರೆ ಹಾಗೂ ಸ್ವದೇಶಿ ಕಲೆ ತಲೆತಲಾಂತರಗಳಿಂದ ಜೀವಂತವಾಗಿರಿಸಿರುವ ಕೈಮಗ್ಗ ವಲಯವು ದೇಶದ ಲಕ್ಷಾಂತರ ಕುಟುಂಬಗಳಿಗೆ ಬದುಕಿನ ಆಸರೆಯಾಗಿದೆ. ನೇಕಾರರ ಪರಿಶ್ರಮ, ಕೌಶಲ್ಯ ಮತ್ತು ಸಮರ್ಪಣೆ ಗೌರವಿಸುವ ಜತೆಗೆ ಕೈಮಗ್ಗದಲ್ಲಿ ನೇಯ್ದ ವಸ್ತ್ರ ಬಳಸುವ ಮೂಲಕ ಸ್ಥಳೀಯ ನೇಕಾರರು ಹಾಗೂ ಕರಕುಶಲಗಾರರನ್ನು ಪ್ರೋತ್ಸಾಹಿಸಬೇಕು ಎಂದು ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ ಹ್ಯಾಟಿ ಕರೆ ನೀಡಿದರು.
ದೇಶದ ವಿವಿಧ ಭಾಗಗಳಲ್ಲಿ ನೇಕಾರರು ತಮ್ಮ ಕೌಶಲ್ಯ ಮತ್ತು ಸೃಜನಶೀಲತೆಯಿಂದ ವಿಶಿಷ್ಟ ವಿನ್ಯಾಸ ಹಾಗೂ ಬಣ್ಣಗಳ ಕೈಮಗ್ಗ ವಸ್ತ್ರ ಸಿದ್ಧಪಡಿಸುತ್ತಿದ್ದಾರೆ. ತಲೆಮಾರುಗಳಿಂದ ಬಂದಿರುವ ಈ ಕಲೆ ಹಾಗೂ ಪರಂಪರೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕೈಮಗ್ಗ ಉತ್ಪನ್ನಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆತರೆ ನೇಕಾರ ಕುಟುಂಬಗಳ ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ ಎಂದು ಹೇಳಿದರು.
ಕೈಮಗ್ಗ ವಸ್ತ್ರಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸ್ಥಳೀಯ ನೇಕಾರರ ಶ್ರಮಕ್ಕೆ ಬೆಂಬಲ ನೀಡಬೇಕು. ನೇಕಾರರು ತಮ್ಮ ಕೌಶಲ್ಯ ಮುಂದಿನ ಪೀಳಿಗೆಗೆ ವರ್ಗಾಯಿಸುವ ಜತೆಗೆ ಆಧುನಿಕ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ಉತ್ಪನ್ನ ರೂಪಿಸುವ ಪ್ರಯತ್ನ ಮಾಡಬೇಕು. ಸಾರ್ವಜನಿಕರು ಹಾಗೂ ವಿವಿಧ ಸಂಸ್ಥೆಗಳು ಕೈಮಗ್ಗ ಉತ್ಪನ್ನ ಖರೀದಿಸುವ ಮೂಲಕ ನೇಕಾರ ಸಮುದಾಯಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.ನೇಕಾರ ಸಮುದಾಯದ ಪರಿಶ್ರಮವು ದೇಶದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ. ಕೈಮಗ್ಗ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ವಿವಿಧ ಯೋಜನೆ ಹಾಗೂ ಸೌಲಭ್ಯ ನೇಕಾರರು ಸದುಪಯೋಗಪಡಿಸಿಕೊಂಡು ತಮ್ಮ ಜೀವನಮಟ್ಟ ಸುಧಾರಿಸಿಕೊಳ್ಳಬೇಕು. ನೇಕಾರರ ಸಮಸ್ಯೆ ಪರಿಹರಿಸಲು ಸಂಬಂಧಿಸಿದ ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳು ಅಗತ್ಯ ಸಹಕಾರ ನೀಡಬೇಕು ಎಂದು ಹೇಳಿದರು.