ಇಂದಿನಿಂದ ಮುಳಗುಂದದಲ್ಲಿ ರಾಜ್ಯಮಟ್ಟದ ಎಂಟಿಬಿ ಸೈಕ್ಲಿಂಗ್‌

KannadaprabhaNewsNetwork |  
Published : Aug 08, 2026, 02:30 AM IST
ಆಯೋಜಕರು ಎಂಟಿಬಿ ಸೈಕಲ್ ಟ್ರ್ಯಾಕ್‌ ಪರಿಶೀಲಿಸುತ್ತಿರುವುದು. | Kannada Prabha

ಸಾರಾಂಶ

ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ರೇಸಿಂಗ್‌ ಸೈಕಲ್‌ಗಳದ್ದೇ ಹಾವಳಿ. ಸ್ಪರ್ಧೆಯ ಸಲುವಾಗಿ ಹೊರ ಜಿಲ್ಲೆಗಳಿಂದ ಬಂದ ಸೈಕಲ್‌ಗಳು ಜತೆಗೆ ಈ ಕ್ರೀಡೆಯಿಂದ ಪ್ರೇರಿತರಾಗಿ ಪಾಲಕರಿಗೆ ದುಂಬಾಲು ಬಿದ್ದು ತೆಗೆದುಕೊಂಡ ಹೊಸ ಸೈಕಲ್‌ಗಳು ಸೇರಿ ಪಟ್ಟಣದಲ್ಲಿ ಎಲ್ಲಿ ನೋಡಿದರೂ ಸೈಕಲ್‌ಗಳೇ ಕಾಣುವಂತಾಗಿದೆ. ಇದರಿಂದ ಪಟ್ಟಣದ ಕಳೆ ಹೆಚ್ಚಿದೆ.

ಮಹೇಶ ಛಬ್ಬಿ

ಮುಳಗುಂದ: ಆ. 8 ಹಾಗೂ 9ರಂದು ಪಟ್ಟಣದ ಯಲಿಶಿರುಂಜ ರಸ್ತೆಯಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ಕೃತಕವಾಗಿ ನಿರ್ಮಿಸಿದ ಸೈಕ್ಲಿಂಗ್ ಟ್ರ್ಯಾಕ್‌ನಲ್ಲಿ ರಾಜ್ಯ ಮಟ್ಟದ ಮೌಂಟೇನ್ ಸೈಕ್ಲಿಂಗ್ (ಗುಡ್ಡಗಾಡು ಸೈಕ್ಲಿಂಗ್) ಸ್ಪರ್ಧೆಗೆ ಅಮೆಚೂರ್ ಸ್ಪೋರ್ಟ್ಸ್‌ ಅಸೋಶಿಯೇಶನ್ ಸಂಸ್ಥೆ ಭರದ ಸಿದ್ಧತೆ ನಡೆಸಿದೆ.

ಸ್ಪರ್ಧೆಯಲ್ಲಿ ರಾಜ್ಯದ ಒಟ್ಟು 21 ಜಿಲ್ಲೆಯ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಗದಗ, ಮೈಸೂರು, ಬೆಂಗಳೂರು ಹೀಗೆ ಹಲವು ಜಿಲ್ಲೆಗಳಿಂದ 200ಕ್ಕಿಂತ ಹೆಚ್ಚು ಕ್ರೀಡಾ ಪಟುಗಳು ಭಾಗವಹಿಸಲಿದ್ದು, 14 ವರ್ಷದೊಳಗಿನ, 16 ವರ್ಷದೊಳಗಿನ ಸೈಕ್ಲಿಸ್ಟ್‌ಗಾಗಿ ಜೂನಿಯರ್‌ ಹಾಗೂ ಎಲೈಟ್ ವಿಭಾಗದಲ್ಲಿ ಬಾಲಕರ ಹಾಗೂ ಬಾಲಕಿಯರ ಸ್ಪರ್ಧೆ ನಡೆಯಲಿದೆ.

ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ರೇಸಿಂಗ್‌ ಸೈಕಲ್‌ಗಳದ್ದೇ ಹಾವಳಿ. ಸ್ಪರ್ಧೆಯ ಸಲುವಾಗಿ ಹೊರ ಜಿಲ್ಲೆಗಳಿಂದ ಬಂದ ಸೈಕಲ್‌ಗಳು ಜತೆಗೆ ಈ ಕ್ರೀಡೆಯಿಂದ ಪ್ರೇರಿತರಾಗಿ ಪಾಲಕರಿಗೆ ದುಂಬಾಲು ಬಿದ್ದು ತೆಗೆದುಕೊಂಡ ಹೊಸ ಸೈಕಲ್‌ಗಳು ಸೇರಿ ಪಟ್ಟಣದಲ್ಲಿ ಎಲ್ಲಿ ನೋಡಿದರೂ ಸೈಕಲ್‌ಗಳೇ ಕಾಣುವಂತಾಗಿದೆ. ಇದರಿಂದ ಪಟ್ಟಣದ ಕಳೆ ಹೆಚ್ಚಿದೆ.

ಬೆಲೆ ಬಾಳುವ ಸೈಕಲ್ಸ್‌: ಸ್ಪರ್ಧೆಗೆಯೆಂದೆ ತಯಾರಿಸಲಾದ ಈ ಸೈಕಲ್‌ಗಳಲ್ಲಿ ವಿಶೇಷವಾಗಿ ಸ್ಪೀಡೋಮೀಟರ್, ಗೇರ್‌ಬಾಕ್ಸ್‌, ಹಾರ್ಟಬೀಟ್ ತೋರಿಸುವ ವಿನೂತನ ಮಾದರಿಯಲ್ಲಿವೆ. ಇವುಗಳ ಬೆಲೆ ಕೇಳಿದರೆ ನಮ್ಮ ಜಿಲ್ಲೆಯ ಜನರಿಗೆ ಒಂದು ಕ್ಷಣ ದಂಗಾಗದೇ ಇರದು. ಇವುಗಳ ಬೆಲೆ ಕನಿಷ್ಠ ₹7.5 ಲಕ್ಷದಿಂದ ಪ್ರಾರಂಭವಾಗುತ್ತದೆ. ಇಂತಹ ಸೈಕಲ್‌ಗಳು ಈಗ ಸದ್ಯ ಪಟ್ಟಣದಲ್ಲಿ ನೋಡಲು ಸಿಗುತ್ತವೆ.

ಊಟ, ವಸತಿ ವ್ಯವಸ್ಥೆ: ಸ್ಪರ್ಧೆಗೆ ಆಗಮಿಸಿದ ಕ್ರೀಡಾ ಪಟುಗಳಿಗೆ ವಸತಿಗಾಗಿ ಪಟ್ಟಣದ ಬಾಲಲೀಲಾ ಶಿವಯೋಗಿ ಕಲಾಭವನದಲ್ಲಿ ಎಲ್ಲ ಜಿಲ್ಲೆಯ ಬಾಲಕಿಯರಿಗೆ ವ್ಯವಸ್ಥೆ ಮಾಡಿಕೊಡಲಾಗಿದೆ. ಇನ್ನು ಬಾಲಕರಿಗೆ ಬಿಎಂಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಸತಿ ಕಲ್ಪಿಸಲಾಗಿದೆ. ಕ್ರೀಡಾ ದಿನಗಳಲ್ಲಿ ಎರಡು ದಿನ ಸಂಪೂರ್ಣ ಪಟ್ಟಣದ ಹಿರಿಯರು ಕ್ರೀಡಾಪಟುಗಳಿಗೆ ಹಾಗೂ ಆಯೋಜಕರಿಗೆ, ಸಿಬ್ಬಂದಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ.

ಟ್ರ್ಯಾಕ್‌ ಸಿದ್ಧತೆ: ಮೌಂಟೇನ್‌ ಸೈಕಲ್‌ ಸ್ಫರ್ಧೆಗೆ ಕೆಂಪು ಮಣ್ಣಿನ ಗುಡ್ದಗಾಡು ಪ್ರದೇಶದಲ್ಲಿ ಇಳಿಜಾರು, ಏರಿಳಿತಗಳಿರುವ, ಕಲ್ಲುಮಣ್ಣಿನ ಹಾದಿಯನ್ನು ರೋಮಾಂಚನಕಾರಿ ಟ್ರ್ಯಾಕ್‌ ನಿರ್ಮಿಸಲು ಆಯೋಜಕರು ಹಾಗೂ ತರಬೇತಿ ಪಡೆದ ಸಿಬ್ಬಂದಿ ಸಿದ್ಧತೆ ನಡೆಸಿದ್ದಾರೆ. ಕ್ರೀಡಾಪಟುಗಳು ಪ್ರ್ಯಾಕ್ಟೀಸ್‌ಗೆ ಮುಂದಾಗುತ್ತಿದ್ದಾರೆ. ತರಬೇತಿ ಪಡೆದ ಈ ಕ್ರೀಡಾಪಟುಗಳ ಸ್ಪರ್ಧೆಯನ್ನು ನೋಡುವುದೇ ರೋಮಾಂಚನ. ಇದರಿಂದ ಪಟ್ಟಣ ಒಳಗೊಂಡಂತೆ ಸುತ್ತಮುತ್ತಲ ಗ್ರಾಮಗಳಿಂದ ಮಕ್ಕಳಿಗೆ ಪ್ರೇರಣೆಯಾಗಿ ಬಂದು ನೋಡುವಂತಾಗಿದೆ.

ರೋಮಾಂಚನ ಕ್ರೀಡೆ: ಇದೊಂದು ರೋಮಾಂಚನ ಕ್ರೀಡೆ. ಇದರಲ್ಲಿ ಕಠಿಣ ಟ್ರ್ಯಾಕ್ ಇರುವುದರಿಂದ ಇಲ್ಲಿ ನಾವು ಗೆಲುವು ಸಾಧಿಸುವ ಗುರಿ ಹೊಂದಿದ್ದೇವೆ. ಇಲ್ಲಿ ಗೆದ್ದರೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದ್ದೇವೆ ಬಾಗಲಕೋಟೆ ಕ್ರೀಡಾ ವಸತಿನಿಲಯದ ವಿದ್ಯಾರ್ಥಿನಿ ಮಧು ಬೆಂಡಿಗೇರಿ ತಿಳಿಸಿದರು.

ಮಾದರಿ ಜಿಲ್ಲೆ: ರಾಜ್ಯದಲ್ಲಿ ಗದಗ ಜಿಲ್ಲೆಯನ್ನು ಸೈಕ್ಲಿಂಗ್‌ನಲ್ಲಿ ಮಾದರಿ ಜಿಲ್ಲೆಯನ್ನಾಗಿಸುವ ಉದ್ದೇಶದಿಂದ ಈ ಕ್ರೀಡೆಯನ್ನು ಹಮ್ಮಿಕೊಳ್ಳಲಾಗಿದ್ದು, ನಮ್ಮ ಮಕ್ಕಳನ್ನು ರಾಜ್ಯ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುವ ಉದ್ದೇಶ ಹೊಂದಿದ್ದೇವೆ ಎಂದು ಗದಗ ಸೈಕ್ಲಿಂಗ್ ಅಸೋಶಿಯೇಶನ್ ಅಧ್ಯಕ್ಷ ಎಸ್.ವಿ. ಕಣವಿ ತಿಳಿಸಿದರು.

ಕೌಶಲ್ಯ: ಕಲ್ಲು, ಮಣ್ಣು ಹಾಗೂ ಏರಿಳಿತಗಳಿರುವ ಗುಡ್ಡಗಾಡು ಪ್ರದೇಶದಲ್ಲಿ ನಡೆಯುವ ರಾಜ್ಯ ಮಟ್ಟದ ಸೈಕ್ಲಿಂಗ್‌ ಸ್ಫರ್ಧೆಯಲ್ಲಿ ಕ್ರೀಡಾಪಟುಗಳು ತಮ್ಮ ಕೌಶಲ್ಯ, ಸಾಮರ್ಥ್ಯವನ್ನು ಪ್ರದರ್ಶಿಸಿಸಲಿದ್ದಾರೆ ಎಂದು ಸೈಕ್ಲಿಂಗ್ ಅಸೋಶಿಯೇಶನ್ ಉಪಾಧ್ಯಕ್ಷರಾದ ನಿಂಗರೆಡ್ಡಿ ತೇರಿನಗಡ್ಡಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

3 ವರ್ಷದಿಂದ ಶುದ್ಧ ಕುಡಿವ ನೀರಿನ ಘಟಕ ಬಂದ್
ಜೀವಭಯದಲ್ಲೇ ಬಸ್‌ನಲ್ಲಿ ವಿದ್ಯಾರ್ಥಿಗಳ ಪ್ರಯಾಣ