ಕನ್ನಡಪ್ರಭ ವಾರ್ತೆ ಸಿಂಧನೂರು
ಧರಣಿಗೆ ಬೆಂಬಲಿಸಿ ಭಾಗವಹಿಸಿದ್ದ ವೆಂಕಟಗಿರಿ ಕ್ಯಾಂಪಿನ ಸದಾನಂದ ಶರಣರು ಮಾತನಾಡಿ, ಮುಖ್ಯಮಂತ್ರಿಗಳು ಆಂಧ್ರದ ಸಿಎಂ ಜೊತೆಗೆ ಸಮಾಲೋಚನೆ ನಡೆಸಿ ಆಂಧ್ರ ಪಾಲಿನ ನೀರು ಬಳಸಿಕೊಳ್ಳಲು ಒಪ್ಪಿಗೆ ಪಡೆದು ರೈತರಿಗೆ ಡಿ.20ರವರೆಗೆ ನೀರು ಬಿಡಬೇಕು. ಇಲ್ಲದಿದ್ದರೆ ಅ.30ರಂದು ಸಿಂಧನೂರಿನಿಂದ ಅಂಬಾಮಠದವರೆಗೆ ಪಾದಯಾತ್ರೆ ನಡೆಸಿ, ಸಿಎಂ ಅವರಿಗೆ ಘೇರಾವ್ ಹಾಕಬೇಕಾಗುತ್ತದೆ. ಈ ಹೋರಾಟದ ಜೊತೆ ಸದಾ ನಾವಿರುತ್ತೇನೆ ಎಂದು ಹೇಳಿದರು.
ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಅಮೀನಪಾಷಾ ದಿದ್ದಿಗಿ ಮಾತನಾಡಿ, ಅಕ್ರಮ ನೀರಾವರಿ ತಡೆಯುವಂತೆ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರ್ ಅವರಿಗೆ ಗಮನ ಸೆಳೆದಿದ್ದೇವೆ. ಆದರೆ ಅಕ್ರಮ ಪೈಪ್‌ಗಳನ್ನು ತೆರವುಗೊಳಿಸಿಲ್ಲ. ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗಳ ರು.55 ಸಾವಿರ ಕೋಟಿ ಸಾಲಮನ್ನಾ ಮಾಡುತ್ತದೆ. ಜೊತೆಗೆ ತೆರಿಗೆ ವಿನಾಯಿತಿಯನ್ನು ನೀಡುತ್ತದೆ. ಬರಗಾಲಕ್ಕೆ ತುತ್ತಾಗಿರುವ, ಬೆಳೆಹಾನಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಮಾತ್ರ ರು.2500 ಪರಿಹಾರದ ಹೆಸರಿನಲ್ಲಿ ಭಿಕ್ಷೆ ಹಾಕುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೃಷಿ ಚಟುವಟಿಕೆಗಳಿಗೆ ಪ್ರತಿದಿನ 12 ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಪೂರೈಸಬೇಕು. ಫಸಲ್ ಬಿಮಾ ಯೋಜನೆಯಡಿ ಬಾಕಿ ಇರುವ ಬೆಳೆ ವಿಮೆ ಹಣ ಕೂಡಲೇ ಬಿಡುಗಡೆ ಮಾಡಬೇಕು. 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರ ಪ್ರತಿ ಎಕರೆಗೆ ರು.50 ಸಾವಿರ ನಿಗದಿಗೊಳಿಸಿ ಕೂಡಲೇ ಬಿಡುಗಡೆಗೊಳಿಸಬೇಕು. ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ 30 ಟಿಎಂಸಿ ಹೂಳನ್ನು ತೆರವುಗೊಳಿಸಬೇಕು. ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಕಾರ್ಯ ತ್ವರಿತಗೊಳಿಸಬೇಕು. ಭತ್ತದ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್‌ಗೆ ರು.5 ಸಾವಿರಕ್ಕೆ ಹೆಚ್ಚಿಸಬೇಕು. ಪೋತ್ನಾಳ ಹಿರೇಹಳ್ಳಕ್ಕೆ ಜನ-ಜಾನುವಾರುಗಳು ಕುಡಿಯಲು ಮಸ್ಕಿ ಎಸ್ಕೇಪ್ ಮೂಲಕ ನೀರು ಹರಿಸಬೇಕು. ಮುಖ್ಯಕಾಲುವೆ ಮತ್ತು ಉಪಕಾಲುವೆಯ ಅಕ್ರಮ ನೀರಾವರಿಯನ್ನು ಶೀಘ್ರವಾಗಿ ತಡೆಗಟ್ಟಬೇಕು. ತುಂಗಭದ್ರಾ ಜಲಾಶಯ ರೈತ ಒಕ್ಕೂಟ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಬಸವರಾಜ ಗೋಡಿಹಾಳ ಮತ್ತು ನಿರುಪಾದಿ ಕೆ.ಗೋಮರ್ಸಿ ಆಗ್ರಹಿಸಿದರು.