ಕನ್ನಡಪ್ರಭ ವಾರ್ತೆ ಹಾಸನ
ಮಾಜಿ ಸಚಿವ ಹಾಗೂ ಜೆಡಿಎಸ್ ಹಿರಿಯ ಮುಖಂಡ ಎಚ್.ಕೆ. ಕುಮಾರಸ್ವಾಮಿ, ಜೆಡಿಎಸ್ ತಾಲೂಕು ಎಸ್. ದ್ಯಾವೇಗೌಡ, ಮುಖಂಡ ರುದ್ರಪ್ಪ ಹಾಗೂ ನಿಕಟಪೂರ್ವ ತಾಲೂಕು ಪಂಚಾಯಿತಿ ಸದಸ್ಯ ಜಗದೀಶ್ ರಾಮಘಟ್ಟ ಅವರ ನೇತೃತ್ವದಲ್ಲಿ ರೈತರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದರು. ಮಾಜಿ ಸಚಿವ ಎಚ್. ಕೆ. ಕುಮಾರಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿ, ಸರ್ಕಾರ ಮತ್ತು ನೀರಾವರಿ ಇಲಾಖೆ ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ, ಎಡದಂಡೆ ನಾಲೆ ಹಾಗೂ ಚಂಗರವಳ್ಳಿ ನಾಲಾ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿದರು. ಈ ಭಾಗದ ಕೆರೆಕಟ್ಟೆಗಳು ನೀರಿನ ಕೊರತೆಯಿಂದ ಬತ್ತಿದ್ದು, ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಕೃಷಿ ಚಟುವಟಿಕೆಗಳಿಗೂ ತೀವ್ರ ಹಿನ್ನಡೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ನೀರು ಬಿಡುವ ಮೂಲಕ ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡರು, ಅಚ್ಚುಕಟ್ಟು ಪ್ರದೇಶದ ರೈತರು ನೀರಿನ ಅಭಾವದಿಂದ ಸಂಕಷ್ಟ ಎದುರಿಸುತ್ತಿದ್ದು, ಬೆಳೆಗಳು ಒಣಗುವ ಆತಂಕ ಎದುರಾಗಿದೆ. ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದ್ದರಿಂದ ಯಾವುದೇ ವಿಳಂಬ ಮಾಡದೆ ನೀರು ಹರಿಸಲು ಸರ್ಕಾರ ಮುಂದಾಗಬೇಕು. ರೈತರ ಹಿತಾಸಕ್ತಿಯನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಮನವಿ ಸ್ವೀಕರಿಸಿದ ಹೇಮಾವತಿ ಜಲಾಶಯ ಯೋಜನೆಯ ಮುಖ್ಯ ಎಂಜಿನಿಯರ್, ರೈತರ ಬೇಡಿಕೆಯನ್ನು ಸರ್ಕಾರ ಹಾಗೂ ಸಂಬಂಧಿತ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಸ್ಥಳೀಯ ಮುಖಂಡರಾದ ಹೇಮರಾಜು ಗೊರೂರು, ಉಡುವಾರೆ ಧರಣಿ, ಶಿವಶಂಕರ್, ಅಂಕನಹಳ್ಳಿ ಜಯರಾಮ್, ಅಜ್ಜು ಖಾನ್, ಚಂದ್ರಶೇಖರ್, ಬಂಗಾರಿ ಗೌಡ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು, ವಿವಿಧ ಗ್ರಾಮಗಳ ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.