177 ತಾಲೂಕುಗಳಲ್ಲಿ ಬರಗಾಲ ಘೋಷಣೆಯಾಗಿದ್ದು, ಇನ್ನೂ 50 ತಾಲೂಕುಗಳಲ್ಲಿ ಸದ್ಯದಲ್ಲೇ ಘೋಷಣೆಯಾಗಲಿದೆ. ಬರಪೀಡಿತ ಪ್ರದೇಶಗಳ ರೈತರಿಗೆ ನೆರವಾಗಲು ಪ್ರತಿ ಕುಟುಂಬಕ್ಕೆ 2,500 ರು. ಇನ್‌ಪುಟ್‌ ಸಬ್ಸಿಡಿ ನೀಡಲು ನಿರ್ಧರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಘೋಷಿಸಿದರು.

ವಿಧಾನಸಭೆ : ರಾಜ್ಯದಲ್ಲಿ ಐತಿಹಾಸಿಕ ಬರ ಆವರಿಸಿದೆ. 177 ತಾಲೂಕುಗಳಲ್ಲಿ ಬರಗಾಲ ಘೋಷಣೆಯಾಗಿದ್ದು, ಇನ್ನೂ 50 ತಾಲೂಕುಗಳಲ್ಲಿ ಸದ್ಯದಲ್ಲೇ ಘೋಷಣೆಯಾಗಲಿದೆ. ಬರಪೀಡಿತ ಪ್ರದೇಶಗಳ ರೈತರಿಗೆ ನೆರವಾಗಲು ಪ್ರತಿ ಕುಟುಂಬಕ್ಕೆ 2,500 ರು. ಇನ್‌ಪುಟ್‌ ಸಬ್ಸಿಡಿ ನೀಡಲು ನಿರ್ಧರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಘೋಷಿಸಿದರು.

ಎನ್‌ಡಿಆರ್‌ಎಫ್‌ ಅನುದಾನ ನಿರೀಕ್ಷಿಸಿ 45-50 ಲಕ್ಷ ರೈತರಿಗೆ ಇನ್‌ಪುಟ್‌ ಸಬ್ಸಿಡಿ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಸರ್ಕಾರಕ್ಕೆ 1,250 ಕೋಟಿ ರು. ಹೊರೆ ಆಗುತ್ತದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಪರವಾಗಿ ಘೋಷಣೆ ಮಾಡುತ್ತಿದ್ದೇನೆ ಎಂದು ಹೇಳಿದರು.

ರಾಜ್ಯದಲ್ಲಿನ ಬರದಿಂದ ರೈತರು ತತ್ತರಿಸಿದ್ದು ಆರ್ಥಿಕ ಸಂಕಷ್ಟ ಸೃಷ್ಟಿಯಾಗಿದೆ. ಹೀಗಾಗಿ ರೈತರ ಕೃಷಿ, ಕೃಷಿ ಸಂಬಂಧಿತ ಸಾಲಕ್ಕೆ 12 ತಿಂಗಳ ಕಾಲ ಮೊರಟೋರಿಯಂ (ಮರುಪಾವತಿಗೆ ತಾತ್ಕಾಲಿಕ ತಡೆ) ನೀಡಲು ತೀರ್ಮಾನಿಸಲಾಗಿದೆ.

ಇನ್ನು ಸಾಲ ಮರುಪಾವತಿ ಅವಧಿಯನ್ನು ತೀವ್ರ ಬರ ಮತ್ತು ಮಧ್ಯಮ ಬರ ಆಧರಿಸಿ 36 ತಿಂಗಳಿಂದ 60 ತಿಂಗಳವರೆಗೆ ವಿಸ್ತರಿಸಲಾಗಿದೆ. ಮೈಕ್ರೋ ಫೈನಾನ್ಸ್‌ ಕಿರುಕುಳ ಈಗಾಗಲೇ ಶುರುವಾಗಿರುವ ವರದಿಗಳು ಇವೆ. ಅವುಗಳನ್ನು ತಪ್ಪಿಸಲು ಈಗಾಗಲೇ ಇರುವ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಡಾ.ಜಿ. ಪರಮೇಶ್ವರ್‌ ಹೇಳಿದರು.

1,572 ಕೋಟಿ ರು. ಬೆಳೆ ವಿಮೆ ಪರಿಹಾರ:

ಬೆಳೆ ನಷ್ಟ ಆಗದಂತೆ ತಡೆಯಲು ರೈತರಿಗೆ ರಾಜ್ಯ ಸರ್ಕಾರದಿಂದ ಬೆಳೆ ವಿಮೆಗೆ ಪ್ರೋತ್ಸಾಹಿಸಿದ್ದು, ಮೊದಲ ಬಾರಿಗೆ 40 ಲಕ್ಷ ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರದಿಂದ ಅಂದಾಜು 1,572 ಕೋಟಿ ರು.ಗೂ ಹೆಚ್ಚು ಬೆಳೆ ವಿಮೆ ಹಣ ಪಾವತಿಸಲಾಗುತ್ತದೆ ಎಂದು ಪರಮೇಶ್ವರ್‌ ತಿಳಿಸಿದರು.

ರಾಜ್ಯದಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಂಡಿದ್ದೇವೆ. ಇದಕ್ಕೆ ಈಗಾಗಲೇ ಹಣ ಒದಗಿಸಿದ್ದೇವೆ. ಜನರ ವಲಸೆ ತಡೆಯಲು ರಾಜ್ಯಕ್ಕೆ ಹೊರೆಯಾದರೂ ವಿಬಿಜಿ ರಾಮ್‌ ಜಿ ಯೋಜನೆ ಅನುಷ್ಠಾನಗೊಳಿಸುತ್ತಿದ್ದೇವೆ. ಈಗಾಗಲೇ ಕೆಲಸ ಶುರು ಮಾಡಿದ್ದೇವೆ ಎದು ಪರಮೇಶ್ವರ್‌ ಹೇಳಿದರು.

ಜಾನುವಾರುಗಳಿಗೆ ಮೇವಿಗೆ ತೊಂದರೆ ಆಗುವುದಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋದರೆ ಗೋಶಾಲೆ, ಮೇವು ಬ್ಯಾಂಕ್‌ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಜತೆಗೆ ವಿದ್ಯುತ್‌ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದು, 3 ಫೇಸ್‌ ವಿದ್ಯುತ್‌ 7 ಗಂಟೆ ಬದಲಿಗೆ 6 ಗಂಟೆಗೆ ಇಳಿಸಲಾಗಿದೆ. ಇದನ್ನು ಮುಂದೆ 5-7 ಗಂಟೆ ನಿಯಮಿತವಾಗಿ ನೀಡಲಾಗುವುದು ಎಂದು ಹೇಳಿದರು.

ಕೇಂದ್ರಕ್ಕೆ ವಿವಿಧ ಆಗ್ರಹ:

ದೇಶಾದ್ಯಂತ 17ಕ್ಕೂ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ತೀವ್ರ ಬರ ಇದೆ. ಹೀಗಾಗಿ ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಸಮಾನವಾದ ವಿಶೇಷ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಲು ತೀರ್ಮಾನಿಸಲಾಗಿದೆ. ಇನ್ನು ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಕೇಂದ್ರಕ್ಕೆ ಪತ್ರ ಬರೆದರೂ ಸ್ಪಂದನೆಯಿಲ್ಲ. ಹೀಗಾಗಿ ಕೂಡಲೇ ಬರ ಅಧ್ಯಯನಕ್ಕೆ ಕೇಂದ್ರದಿಂದ ತಂಡ ಕಳುಹಿಸಬೇಕು. ರಾಜ್ಯದಲ್ಲಿ 40,000 ಕೋಟಿ ರು. ಬೆಳೆ ನಷ್ಟದ ಅಂದಾಜಿದೆ. ಎನ್‌ಡಿಆರ್‌ಎಫ್‌ ನಿಯಮಗಳ ಅಡಿ 18,000 ಕೋಟಿ ರು. ಪರಿಹಾರ ನಿರೀಕ್ಷಿಸಿದ್ದು, ಮಧ್ಯಂತರ ಪರಿಹಾರವಾಗಿ 3,800 ಕೋಟಿ ರು. ನೀಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ಎಂದರು.

ಕೇಂದ್ರಕ್ಕೆ ಇತರೆ ಒತ್ತಾಯಗಳು:

ಬೆಳೆ ನಷ್ಟ ಪರಿಹಾರಕ್ಕೆ ಸಂಬಂಧಿಸಿ ಎಸ್‌ಡಿಆರ್‌ಎಫ್‌/ಎನ್‌ಡಿಆರ್‌ಎಫ್‌ ಮತ್ತು ಬರ ಕೈಪಿಡಿ 2020ರ ಮಾನದಂಡಗಳನ್ನು ಏಕರೂಪಗೊಳಿಸಿ, ರೈತರಿಗೆ ತ್ವರಿತ ಹಾಗೂ ಸಮಾನ ಪರಿಹಾರ ದೊರೆಯುವಂತೆ ಮಾಡಬೇಕು. ಬಿತ್ತನೆ ಅವಧಿಯಲ್ಲಿ ಶೇ.20-59 ರಷ್ಟು ಬಳಕೆ ಕೊರತೆಯನ್ನೂ ಬರ ಘೋಷಣೆ ಮಾನದಂಡವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಒಣ ಹವೆಯ ವ್ಯಾಖ್ಯಾನವನ್ನು ಸ್ಥಳೀಯ ಕೃಷಿ ಹಾಗೂ ಹಾವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಪರಿಷ್ಕರಿಸಿ, ಅಗತ್ಯವಿದ್ದರೆ ಕಡಿಮೆ ಅವಧಿಯ ಒಣ ಹವೆಯನ್ನೂ ಪರಿಗಣಿಸಲು ರಾಜ್ಯಗಳಿಗೆ ಅವಕಾಶ ಕಲ್ಪಿಸಬೇಕು. ಬರ ಮುಂಚಿತವಾಗಿ ಘೋಷಿಸಲು ರಾಜ್ಯಗಳಿಗೆ ಅವಕಾಶ ಕಲ್ಪಿಸಬೇಕು ಸೇರಿದಂತೆ ಕೇಂದ್ರಕ್ಕೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಆರ್ಥಿಕ ಇಲಾಖೆಯ ಸಲಹೆಯ ಅರ್ಥ ದಿವಾಳಿ ಎಂದಲ್ಲ: ಪರಂ

ಆರ್ಥಿಕ ಇಲಾಖೆಯು ಹಣಕಾಸಿನ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಸಲಹೆ ಮತ್ತು ಎಚ್ಚರಿಕೆಗಳನ್ನು ನೀಡುವುದು ಸಹಜ ಪ್ರಕ್ರಿಯೆಯಾಗಿದ್ದು, ಅದನ್ನೇ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ದಿವಾಳಿಯಾಗಿದೆ ಅಥವಾ ಸರ್ಕಾರದಲ್ಲಿ ಹಣವಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಡಾ.ಜಿ. ಪರಮೇಶ್ವರ್‌ ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಆರ್ಥಿಕ ಇಲಾಖೆಯು ಬಿ.ಎಸ್‌. ಯಡಿಯೂರಪ್ಪ ಅವರ ಅವಧಿಯಲ್ಲಿ ಹಾಗೂ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಹಣಕಾಸಿನ ಅಲಭ್ಯತೆ ಬಗ್ಗೆ ಎಚ್ಚರಿಸಿರುವ ಪತ್ರಗಳನ್ನು ಬಹಿರಂಗಪಡಿಸಿದರು.

ಎಷ್ಟು ಜನ ಸಾಯುತ್ತಾರೋ ಗೊತ್ತಿಲ್ಲ: ಪರಂ

ಬರದ ಕುರಿತು ಡಾ.ಜಿ.ಪರಮೇಶ್ವರ್‌ ಅವರು ಉತ್ತರಿಸುವಾಗ ಮಧ್ಯಪ್ರವೇಶಿಸಿದ ಆರ್‌.ಅಶೋಕ್, ಕ್ಲೈಮಾಟ್‌ ಇಂಪ್ಯಾಕ್ಟ್‌ ಪ್ಲಾನ್‌ ಬಿಡುಗಡೆಯಾಗಿದೆ. ಇದರಲ್ಲಿ ಹವಾಮಾನ ವೈಪರೀತ್ಯದಿಂದ ಜಾಗತಿಕವಾಗಿ 4 ಲಕ್ಷ ಮಂದಿ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ. ದೇಶದಲ್ಲೂ 15,000 ಜನ ಸಾಯಲಿದ್ದಾರೆ ಎಂದು ಗಮನ ಸೆಳೆದರು.

ಇದಕ್ಕೆ ಮಾತನಾಡಿದ ಡಾ.ಜಿ. ಪರಮೇಶ್ವರ್, ರಾಜ್ಯದಲ್ಲಿ ಮಳೆ ಕಡಿಮೆಯಾಗಿದ್ದು, ಉಷ್ಣಾಂಶ ಹೆಚ್ಚಾಗಿದೆ. ಯೂರೋಪ್‌ನ ಫ್ರಾನ್ಸ್‌ನಲ್ಲಿ ಉಷ್ಣಾಂಶ 45 ಡಿಗ್ರಿ ಸೆಲ್ಷಿಯಸ್‌ ಆಗಿದೆ. ಹವಾಮಾನದ ಮುಂದೆ ಯಾವ ಪಕ್ಷ, ಯಾವ ಸರ್ಕಾರದ್ದೂ ತಪ್ಪಿಲ್ಲ. ಎಷ್ಟು ಜನ ಸಾಯುತ್ತಾರೆ ನನಗೆ ಗೊತ್ತಿಲ್ಲ. ಹೀಗಾಗಿ ಕುಡಿಯುವ ನೀರು ಸೇರಿ ಎಲ್ಲಾ ವಿಚಾರದಲ್ಲೂ ಗಂಭೀರವಾಗಿರಬೇಕು. ನಾವೆಲ್ಲರೂ ಸೇರಿ ಪರಿಸ್ಥಿತಿ ನಿಭಾಯಿಸಬೇಕು ಎಂದು ಪರಮೇಶ್ವರ್‌ ತಿಳಿಸಿದರು.

ಹೆಲಿಕಾಪ್ಟರ್‌ ಬರ ಪರಿಶೀಲನೆ ಎಂಬುದು ತಪ್ಪು:

ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರದ್ದು ಹೆಲಿಕಾಪ್ಟರ್‌ ಪರಿಶೀಲನೆ ಎಂಬುದು ತಪ್ಪು. ರಾಜ್ಯದ ಜಿಲ್ಲೆಗಳಲ್ಲಿ 270 ಸಭೆಗಳನ್ನು ನಡೆಸಲಾಗಿದೆ. ಇದಲ್ಲದೆ 832 ಟಾಸ್ಕ್‌ಫೋರ್ಸ್ ಸಭೆಗಳು ನಡೆದಿವೆ ಎಂದು ಹೇಳಿದರು. ಮುಖ್ಯಮಂತ್ರಿಗಳು ಸ್ವತಃ 8 ಸಭೆಗಳನ್ನು, ನಾನು ಕಂದಾಯ ಸಚಿವನಾಗಿ 9 ಸಭೆಗಳನ್ನು ಹಾಗೂ ವಿಭಾಗೀಯ ಆಯುಕ್ತರು 10 ಸಭೆಗಳನ್ನು ನಡೆಸಿದ್ದೇವೆ ಎಂದು ಪರಮೇಶ್ವರ್‌ ಸಮರ್ಥಿಸಿಕೊಂಡರು.

ರೈತರ ಸಾಲ ಪಾವತಿಗೆ 1 ವರ್ಷ ತಡೆ

ಬರಗಾಲ ಹಿನ್ನೆಲೆಯಲ್ಲಿ ರೈತರ ಕೃಷಿ, ಕೃಷಿ ಸಂಬಂಧಿತ ಸಾಲಕ್ಕೆ 12 ತಿಂಗಳ ಕಾಲ ಮೊರಟೋರಿಯಂ (ಮರುಪಾವತಿಗೆ ತಾತ್ಕಾಲಿಕ ತಡೆ) ನೀಡಲು ತೀರ್ಮಾನಿಸಲಾಗಿದೆ. ಮೈಕ್ರೋಫೈನಾನ್ಸ್‌ ಕಂಪನಿಗಳು ಕಿರುಕುಳ ನೀಡಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪರಂ ಹೇಳಿದ್ದಾರೆ.

₹1250 ಕೋಟಿ: ರೈತರಿಗೆ 2500 ರು. ನೀಡಲು ಸರ್ಕಾರ ಮಾಡುವ ಖರ್ಚು

₹40000 ಕೋಟಿ: ರಾಜ್ಯದಲ್ಲಿ ಬರಗಾಲದಿಂದ ಆಗಿರುವ ಬೆಳೆ ನಷ್ಟದ ಅಂದಾಜು

₹18000 ಕೋಟಿ: ಎನ್‌ಡಿಆರ್‌ಫ್‌ ನಿಯಮಗಳಡಿ ರಾಜ್ಯ ನಿರೀಕ್ಷಿಸಿರುವ ನೆರವು

₹3800 ಕೋಟಿ: ಮಧ್ಯಂತರ ಪರಿಹಾರ ಕೋರಿ ರಾಜ್ಯದಿಂದ ಕೇಂದ್ರಕ್ಕೆ ಪತ್ರ

ಕೇಂದ್ರದ ನೆರವು ಕೊಟ್ಟರೆ ಸಾಲ ಮನ್ನಾ: ಡಿಕೆ

ವಿಧಾನಮಂಡಲ: ‘ಕೇಂದ್ರ ಸರ್ಕಾರ ಕೈಗಾರಿಕೋದ್ಯಮಿಗಳಿಗೆ ಲಕ್ಷಾಂತರ ಕೋಟಿ ರು. ಸಾಲ ಮನ್ನಾ ಮಾಡಿದಂತೆ ರೈತರ ಸಾಲವನ್ನೂ ಮನ್ನಾ ಮಾಡಲಿ. ಕೇಂದ್ರ ನೆರವು ನೀಡಿದರೆ ರಾಜ್ಯ ಸರ್ಕಾರದಲ್ಲಿ ಕೆಲ ಕಾರ್ಯಕ್ರಮಗಳನ್ನು ನಿಲ್ಲಿಸಿಯಾದರೂ ರಾಜ್ಯದ ಪಾಲನ್ನು ಭರಿಸಿ ರೈತರ ಸಾಲಮನ್ನಾ ಮಾಡಲು ನಾನು ಸಿದ್ಧನಿದ್ದೇನೆ’ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಉಭಯ ಸದನಗಳಲ್ಲಿ ಘೋಷಿಸಿದ್ದಾರೆ.