ಅನುಮತಿ ಪಡೆಯದೆ ಅಕ್ರಮವಾಗಿ ಅಳವಡಿಕೆ । ಜನಜಾನುವಾರುಗಳ ಪ್ರಾಣದ ಜೊತೆಗೆ ಚೆಲ್ಲಾಟ
ತಾಲೂಕಿನ ಹನುಮಸಾಗರ ಹೋಬಳಿ ವ್ಯಾಪ್ತಿಯ ಬೀಳಗಿ ಕೆರೆಯಲ್ಲಿ ಅಕ್ರಮವಾಗಿ ಹಾಕಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಕಂಪನಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ವಿದ್ಯುತ್ ಕಂಬಗಳ ಮೂಲಕ ಹನುಮಸಾಗರದ ವಿದ್ಯುತ್ ಸರಬರಾಜು ಕೇಂದ್ರಕ್ಕೆ ಪವನ ವಿದ್ಯುತ್‌ನ್ನು ಸರಬರಾಜು ಮಾಡಲು ಅಳವಡಿಸಿದ್ದು, ಇವುಗಳನ್ನು ಪ್ರಾಧಿಕಾರಗಳಲ್ಲಿ ಅನುಮತಿ ಪಡೆದುಕೊಳ್ಳದೆ ಅಕ್ರಮವಾಗಿ ಅಳವಡಿಸಿದ್ದಾರೆ.ಕೆರೆ ತುಂಬಿಸುವ ಯೋಜನೆಯಲ್ಲಿ ಆಯ್ಕೆಯಾದ ತಾಲೂಕಿನ ಹನುಮಸಾಗರ ಹೋಬಳಿ ವ್ಯಾಪ್ತಿಯ ಬೀಳಗಿ ಗ್ರಾಮದ ಸರ್ವೆ ನಂಬರ್ 88ರಲ್ಲಿರುವ ಈ ಕೆರೆಯು 25 ಎಕರೆ 9 ಗುಂಟೆಯಲ್ಲಿರುವ ಕೆರೆಯಲ್ಲಿ ನೀರು ತುಂಬಿಸುವ ಕಾರ್ಯವೂ ನಡೆದಿದೆ.
ಗ್ರಾಮದ ಸಾರ್ವಜನಿಕರು ಕೆರೆಯ ನೀರನ್ನು ಕುಡಿಯಲು ಬಳಸುತ್ತಾರೆ. ಜೊತೆಗೆ ಈ ಕೆರೆಯ ಕೆಲವು ಭಾಗದಲ್ಲಿ ಮೀನುಗಾರಿಕೆ ಮಾಡುತ್ತಾರೆ. ಒಂದು ವೇಳೆ ಕೆರೆಯಲ್ಲಿ ಹಾಕಲಾಗಿರುವ ವಿದ್ಯುತ್ ಕಂಬಗಳ ಮೂಲಕ ವಿದ್ಯುತ್ ಪಸರಿಸಿದರೆ ತೊಂದರೆಯಾಗುತ್ತದೆ. ಸಾರ್ವಜನಿಕರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿರುವ ಕಂಪನಿ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯ ಕೇಳಿ ಬಂದಿದೆ.
ಕೆರೆಯಲ್ಲಿ ಹಾಕಲಾಗಿರುವ ವಿದ್ಯುತ್ ಕಂಬ ತೆರವುಗೊಳಿಸುವಂತೆ ಹಲವು ಸಲ ಮೌಖಿಕ ಹಾಗೂ ಲಿಖಿತವಾಗಿ ಅರ್ಜಿ ಸಲ್ಲಿಸಿದರೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಮುಂದಾಗುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ.
ಕೆರೆಯಲ್ಲಿ ವಿದ್ಯುತ್ ಕಂಬ ಇರುವುದರಿಂದ ರೈತರು ಹಾಗೂ ಸಾರ್ವಜನಿಕರು ನೀರು ಬಳಸಲು ಸಹಿತ ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ.