ರಾಣಿಬೆನ್ನೂರು: ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದಲ್ಲಿರುವ ಖಾಸಗಿ ಶಾಲೆಗಳಲ್ಲಿ ಅಳವಡಿಸಿರುವ ಇಂಗ್ಲಿಷ್ ನಾಮಫಲಕಗಳನ್ನು ತೆರವುಗೊಳಿಸಿ ಕನ್ನಡ ನಾಮಫಲಕ ಅಳವಡಿಸುವಂತೆ ಆಗ್ರಹಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ತಹಸೀಲ್ದಾರ್ ಆರ್.ಎಚ್. ಭಾಗವಾನ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು. ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಜಾಧವ ಮಾತನಾಡಿ, ನಗರದಲ್ಲಿರುವ ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ನಾಮಫಲಕಗಳು ರಾರಾಜಿಸುತ್ತಿವೆ. ಸರ್ಕಾರದ ಆದೇಶದ ಪ್ರಕಾರ ಕನ್ನಡ ಅಕ್ಷರಗಳು ಶೇ. 60ರಷ್ಟು ಮತ್ತು ಇಂಗ್ಲಿಷ್ ಅಕ್ಷರಗಳು ಶೇ. 40ರಷ್ಟು ಇರಬೇಕು. ಆದರೆ ಈ ಎಲ್ಲ ನಿಯಮಗಳನ್ನು ಮೀರಿ ಇಂಗ್ಲಿಷ್ ನಾಮಫಲಕಗಳೇ ನಗರದಾದ್ಯಂತ ರಾರಾಜಿಸುತ್ತಿದ್ದು, ಕನ್ನಡ ನಾಮಫಲಕಗಳು ಇಲ್ಲದಂತಾಗಿವೆ.
ಹಾವೇರಿ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ನನಗೆ ಜು. 8ರಂದು ಭೇಟಿಗೆ ಸಮಯ ನೀಡಿದಾರೆ. ಭೇಟಿಯಾದ ನಂತರ ಏನೆಂದು ಗೊತ್ತಾಗಲಿದೆ. ಸರ್ಕಾರದ ಸಾಧನೆ, ಸಂಘಟನೆ ಬಗ್ಗೆ ಚರ್ಚೆ ಮಾಡಬಹುದು. ಸಚಿವ ಸ್ಥಾನ ನೀಡುವಂತೆ ಕೇಳುತ್ತೇನೆ ಎಂದು ವಿಧಾನಸಭೆ ಉಪಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ತಿಳಿಸಿದರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನಸಭಾ ಉಪಾಧ್ಯಕ್ಷರಾದ ಮೇಲೆ ನಾನು ಕೇಳಿದ ಅನುದಾನ ಕೊಟ್ಟಿದ್ದಾರೆ. 100ಕ್ಕೆ 100ರಷ್ಟು ಕೊಡುವುದು ಆ ದೇವರಿಂದಲೂ ಸಾಧ್ಯವಿಲ್ಲ ಎಂದರು. ನನಗೆ ಸಚಿವ ಸ್ಥಾನ ಕೊಡುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾರಿಗೆ ಕೊಡಬೇಕು, ಏನು ಕೊಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ಸಚಿವ ಸ್ಥಾನ ಕೊಟ್ಟರೆ ಯಾರು ಬೇಡ ಅಂತಾರೆ? ಶಾಸಕರಾದವರಿಗೆ ಸಚಿವರಾಗುವ ಆಸೆ ಇರುತ್ತೆ, ಕೊಟ್ಟರೆ ಯಾರೂ ಬೇಡ ಅನ್ನಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ. ಸಚಿವ ಸ್ಥಾನ ಕೊಡುವುದಾಗಿ ಸುರ್ಜೇವಾಲಾ ಹಿಂದೆಯೂ ಹೇಳಿದ್ದರು. ಅವರನ್ನು ಭೇಟಿಯಾದಾಗ ಸಚಿವ ಸ್ಥಾನ ಕೇಳುತ್ತೇನೆ. ಕೇಳುವುದಕ್ಕೆ ಏನು ರೊಕ್ಕ ಕೊಡಬೇಕಾ? ನಮ್ಮ ಡಿಮ್ಯಾಂಡ್ ಇದೆ. ಕೊಡಿ ಎಂದು ಕೇಳುತ್ತೇನೆ. ಕೊಡುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ಲಮಾಣಿ ಹೇಳಿದರು.