ತುಂಗಭದ್ರಾ ಜಲಾಶಯದ 33 ಗೇಟ್‌ಗಳ ಬದಲಿಸಲು ರೈತರ ಒತ್ತಾಯ

KannadaprabhaNewsNetwork |  
Published : Jun 07, 2025, 12:35 AM IST
6ಎಚ್‌ಪಿಟಿ1- ತುಂಗಭದ್ರಾ ಜಲಾಶಯದ ಎಲ್ಲಾ 33 ಗೇಟ್‌ಗಳನ್ನು ಬದಲಿಸಿ, ಹೊಸ ಗೇಟ್‌ಗಳನ್ನು ಅಳವಡಿಕೆ ಮಾಡಬೇಕು ಎಂದು ತುಂಗಭದ್ರಾ ರೈತ ಸಂಘದ ಪದಾಧಿಕಾರಿಗಳು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಓಆರ್‌ಕೆ ರೆಡ್ಡಿ ಅವರನ್ನು ಶುಕ್ರವಾರ ಒತ್ತಾಯಿಸಿದರು. | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯದ ಎಲ್ಲ 33 ಗೇಟ್‌ಗಳನ್ನು ಬದಲಿಸಿ, ಹೊಸ ಗೇಟ್‌ಗಳನ್ನು ಅಳವಡಿಕೆ ಮಾಡಬೇಕು ಎಂದು ತುಂಗಭದ್ರಾ ರೈತ ಸಂಘದ ಪದಾಧಿಕಾರಿಗಳು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಒ.ಆರ್‌.ಕೆ. ರೆಡ್ಡಿ ಅವರನ್ನು ಶುಕ್ರವಾರ ಒತ್ತಾಯಿಸಿದರು.

ಹೊಸಪೇಟೆ: ತುಂಗಭದ್ರಾ ಜಲಾಶಯದ ಎಲ್ಲ 33 ಗೇಟ್‌ಗಳನ್ನು ಬದಲಿಸಿ, ಹೊಸ ಗೇಟ್‌ಗಳನ್ನು ಅಳವಡಿಕೆ ಮಾಡಬೇಕು ಎಂದು ತುಂಗಭದ್ರಾ ರೈತ ಸಂಘದ ಪದಾಧಿಕಾರಿಗಳು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಒ.ಆರ್‌.ಕೆ. ರೆಡ್ಡಿ ಅವರನ್ನು ಶುಕ್ರವಾರ ಒತ್ತಾಯಿಸಿದರು.

ತುಂಗಭದ್ರಾ ಜಲಾಶಯದ 19ನೇ ಗೇಟ್ ಹಿಂದಿನ ವರ್ಷ ಮುರಿದು ಬಿದ್ದಾಗ ಮುಂದಿನ ವರ್ಷಕ್ಕೆ ಜಲಾಶಯದ ಎಲ್ಲ 33 ಗೇಟ್‌ಗಳನ್ನು ನೂತನವಾಗಿ ತಯಾರಿಸಿ ಅಳವಡಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ಯಾವುದೇ ಪ್ರಗತಿಯಾಗಿಲ್ಲ. ಈಗ ಟೆಂಡರ್‌ ನೀಡಿದರೂ ಮುಂದಿನ ವರ್ಷ ಮಾರ್ಚ್ ತಿಂಗಳವರೆಗೆ ನೂತನ ಗೇಟ್‌ಗಳನ್ನು ತಯಾರಿಸಿ ಅಳವಡಿಸಲು ಅನುಕೂಲವಾಗುತ್ತದೆ. ಈಗಾಗಲೇ ಜಲಾಶಯದಲ್ಲಿ 22 ಟಿಎಂಸಿ ನೀರು ಶೇಖರಣೆಯಾಗಿದೆ. ಮಲೆನಾಡಿನಲ್ಲಿ ಉತ್ತಮ ಮಳೆಯಿಂದಾಗಿ ಜಲಾಶಯಕ್ಕೆ ಅತಿ ಹೆಚ್ಚು ನೀರು ಬರುತ್ತಿದೆ. ತುಂಗಭದ್ರಾ ಜಲಾಶಯದ ಗೇಟುಗಳು ಗುಣಮಟ್ಟವಿಲ್ಲದ ಕಾರಣ ಈ ವರ್ಷ ಜಲಾಶಯದಲ್ಲಿ ಶೇ. 80ರಷ್ಟು ಮಾತ್ರ ನೀರು ನಿಲ್ಲಿಸುತ್ತೇವೆಂದು ನೀವು ತಿಳಿಸಿದ್ದೀರಿ. ಹಾಗಾದರೆ ಜಲಾಶಯದಲ್ಲಿ 25 ಟಿಎಂಸಿ ನೀರು ಶೇಖರಣೆಯಾದ ತಕ್ಷಣ ಕಾಲುವೆಗಳಿಗೆ ನೀರು ಬಿಟ್ಟರೆ, ರೈತರಿಗೆ ಒಳ್ಳೆಯದಾಗುತ್ತದೆ ಮತ್ತು ಜಲಾಶಯದ ಸಂರಕ್ಷಣೆಯಾಗಲಿದೆ ಎಂದು ಒತ್ತಾಯಿಸಿದರು.

ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಜಲಸಂಪನ್ಮೂಲ ಸಚಿವರ ಮತ್ತು ಕಾರ್ಯದರ್ಶಿಗಳ ಸಭೆ ಕರೆದು, ಮುಂದಿನ ವರ್ಷ ಮಾರ್ಚ್ ತಿಂಗಳ ವರೆಗೆ ರೈತರಿಗೆ ಎರಡು ಬೆಳೆಗಳಿಗೆ ನೀರು ಕೊಟ್ಟು ನಂತರದ ಏಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳಲ್ಲಿ ನೂತನ ಗೇಟ್‌ಗಳನ್ನು ಅಳವಡಿಸಲು ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಡಾ. ಪುರುಷೋತ್ತಮ್‌ ಗೌಡ, ಪದಾಧಿಕಾರಿಗಳಾದ ಕೊಂಚಗೇರಿ ದೊಡ್ಡ ಮಲ್ಲಪ್ಪ, ದರೂರ ಎಂ. ವೀರಭದ್ರ ನಾಯಕ, ಎಂ. ರಾಮಾಂಜಿನಿ ನಾಯಕ, ಕುರುಬರ ಗಾದಿಲಿಂಗಮೂರ್ತಿ, ಅಂಗಡಿ ರಾಜೇಗೌಡ, ಬಸವನಗೌಡ ಮತ್ತಿತರರಿದ್ದರು.

PREV

Recommended Stories

ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ