ಜನತಾಪ್ಲಾಟ್ ನಿವಾಸಿಗಳ ಸಮಸ್ಯೆ ಬಗೆಹರಿಸಲು ಆಗ್ರಹ

KannadaprabhaNewsNetwork |  
Published : Sep 03, 2026, 02:30 AM IST
ಫೋಟೋ : ೨ಕೆಎಂಟಿ_ಎಸ್‌ಇಪಿ_ಕೆಪಿ೧ : ಜನತಾ ಪ್ಲಾಟ್ ನಿವಾಸಿಗಳು ಕಲಭಾಗ ಪಂಚಾಯಿತಿ ಕಡೆಗೆ ಕಾಲ್ನಡಿಗೆಯಲ್ಲಿ ತೆರಳಿ ಪ್ರತಿಭಟನಾ ಮನವಿ ಸಲ್ಲಿಸಿದರು. ಪ್ರವೀಣಕುಮಾರ ಶೆಟ್ಟಿ, ಪ್ರೇಮಾ ಆರ್. ಶೆಟ್ಟಿ, ಅರುಣ ಶೇಟ, ದಯಾನಂದ ನಾಯ್ಕ, ಈಶ್ವರ ನಾಯ್ಕ, ಜಾನಕಿ ನಾಯ್ಕ, ರಮಾನಂದ ಶೆಟ್ಟಿ, ತಿಮ್ಮಯ್ಯ ಪಟಗಾರ, ಪಾರ್ವತಿ ಗಾವಡಿ ಇತರರು ಇದ್ದರು. | Kannada Prabha

ಸಾರಾಂಶ

ಇ ಸ್ವತ್ತು ಆಗದಿರುವುದರಿಂದ ಪಂಚಾಯಿತಿಯಿಂದ ದುರಸ್ತಿ ಅಥವಾ ಮರುನಿರ್ಮಾಣಕ್ಕೆ ಅನುಮತಿ ಸಿಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಗ್ರಾಮಲೆಕ್ಕಾಧಿಕಾರಿ, ತಹಸೀಲ್ದಾರ್, ಉಪವಿಭಾಗಾಧಿಕಾರಿಗೂ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಕುಮಟಾ: ತಾಲೂಕಿನ ಕಲಭಾಗ ಪಂಚಾಯಿತಿ ವ್ಯಾಪ್ತಿಯ ಹಂತಿಮಠದ ಜನತಾ ಪ್ಲಾಟ್‌ನ ಮನೆಗಳಿಗೆ ಇ ಸ್ವತ್ತು ಸಮಸ್ಯೆಯಿಂದ ಕಟ್ಟಡಗಳು ಶಿಥಿಲವಾದರೂ ಕನಿಷ್ಠ ದುರಸ್ತಿಗೂ ಪಂಚಾಯಿತಿ ಅನುಮತಿ ಸಿಗುತ್ತಿಲ್ಲ. ಈ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ಜಿಲ್ಲಾ ಅಂಗವಿಕಲರ ಮತ್ತು ಪಾಲಕರ ಒಕ್ಕೂಟದ ನೇತೃತ್ವದಲ್ಲಿ ''''ಪುಟ್ಟಪುಟ್ಟ ನಡೆ ಪಂಚಾಯಿತಿ ಕಡೆ'''' ಶೀರ್ಷಿಕೆಯಡಿ ಕಲಭಾಗ ಪಂಚಾಯಿತಿ ಕಾರ್ಯಾಲಯಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಮನವಿ ಸಲ್ಲಿಸಿದರು.

ಹಂತಿಮಠದ ಜನತಾ ಪ್ಲಾಟ್‌ಗೆ ೧೯೭೨ರಲ್ಲಿ ಸರ್ಕಾರ ಖರೀದಿಸಿದ ೩೯ ಗುಂಟೆ ಜಾಗವನ್ನು ೨೧ ನಿವೇಶನಗಳಾಗಿ(೩೦x೪೦) ವಿಂಗಡಿಸಿ ಹಂಚಿತ್ತು. ಕಳೆದ ವರ್ಷ ಕೆಲ ಪ್ಲಾಟ್‌ಗಳಿಗೆ ಪಹಣಿಯಲ್ಲಿ ೧೧ ಮತ್ತು ೯ನೇ ಕಾಲಂನಲ್ಲಿ ದಾಖಲಿಸಿ ಪಟ್ಟಾ ನೀಡಲಾಗಿದೆ. ಆದರೆ ಸುಮಾರು ೫೦ ವರ್ಷಗಳಷ್ಟು ಹಳೆಯದಾದ ಇಲ್ಲಿನ ಮನೆಗಳು ಬಹುತೇಕ ಶಿಥಿಲವಾಗಿವೆ. ಕೆಲವು ಮನೆಗಳು ದುರಸ್ತಿ ಮಾಡದಿದ್ದರೆ ಬೀಳುವ ಹಂತದಲ್ಲಿದೆ.

ಆದರೆ ಇ ಸ್ವತ್ತು ಆಗದಿರುವುದರಿಂದ ಪಂಚಾಯಿತಿಯಿಂದ ದುರಸ್ತಿ ಅಥವಾ ಮರುನಿರ್ಮಾಣಕ್ಕೆ ಅನುಮತಿ ಸಿಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಗ್ರಾಮಲೆಕ್ಕಾಧಿಕಾರಿ, ತಹಸೀಲ್ದಾರ್, ಉಪವಿಭಾಗಾಧಿಕಾರಿಗೂ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆರ್‌ಟಿಸಿ, ಪಿಟಿ ಸೆಟ್, ಪಟ್ಟಾ, ಮ್ಯುಟೇಷನ್ ಎಂಟ್ರಿ, ಮನೆ ಟ್ಯಾಕ್ಸ್‌ ಪಾವತಿಪ್ರತಿ, ವಿದ್ಯುತ್ ಬಿಲ್ ಎಲ್ಲ ಇದ್ದರೂ ತಹಸೀಲ್ದಾರರು ನೀಡುವ ಗ್ರಾಮಠಾಣಾ ನಕ್ಷೆಯ ದಾಖಲೆ ಇಲ್ಲದಿರುವುದರಿಂದ ಇಸ್ವತ್ತು ತಂತ್ರಾಂಶದಲ್ಲಿ ನೋಂದಣಿಯಾಗುತ್ತಿಲ್ಲ. ಪ್ಲಾಟ್‌ನ ಸರ್ವೆ ಮಾಡಿದ್ದರೂ ಅಧಿಕೃತ ಆದೇಶವಾಗಿಲ್ಲ.

ಇಲ್ಲಿ ವಾಸವಿರುವ ಕುಟುಂಬಗಳು ೫೦ ವರ್ಷವಾದರೂ ಸಮರ್ಪಕ ದಾಖಲೆಯಿಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಂಡು ಹಂತಿಮಠ ಜನತಾ ಪ್ಲಾಟ್ ನಿವಾಸಿಗಳ ಬಹುಕಾಲದ ಸಮಸ್ಯೆ ಬಗೆಹರಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಈ ವೇಳೆ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ಮತ್ತು ಜನತಾಪ್ಲಾಟ್ ನಿವಾಸಿ ಪ್ರವೀಣಕುಮಾರ ಶೆಟ್ಟಿ, ಪ್ರೇಮಾ ಆರ್. ಶೆಟ್ಟಿ, ಅರುಣ ಶೇಟ, ದಯಾನಂದ ನಾಯ್ಕ, ಈಶ್ವರ ನಾಯ್ಕ, ಜಾನಕಿ ನಾಯ್ಕ, ರಮಾನಂದ ಶೆಟ್ಟಿ, ತಿಮ್ಮಯ್ಯ ಪಟಗಾರ, ಪಾರ್ವತಿ ಗಾವಡಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾರುಕಟ್ಟೆ ಸ್ಥಳಾಂತರಿಸಲು ಆಗ್ರಹಿಸಿ ಮನವಿ
ಕ್ರೀಡೆಯಿಂದ ಶಿಸ್ತು, ನಾಯಕತ್ವ ಗುಣ ವೃದ್ಧಿ; ಬಿಇಒ ದಯಾನಂದ