ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ದಲಿತರ ಹಿಂದುಳಿದವರ ಹೆಸರಿನಲ್ಲಿ ಅಧಿಕಾರ ಹಿಡಿದು ದಲಿತ ಮತ್ತು ಹಿಂದುಳಿದ ವರ್ಗದ ೮ ಅಭಿವೃದ್ದಿ ನಿಗಮ ಮಂಡಳಿಗಳ ಅನುದಾನ ೫೦ ಸಾವಿರ ಕೋಟಿ ರು.ಗಳನ್ನು ಗ್ಯಾರಂಟಿ ಹಾಗೂ ಇತರೆ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿದ್ದು,ಈ ಹಣವನ್ನು ನಿಗಮ ಮಂಡಳಿಗಳಿಗೆ ವಾಪಸ್ ಮಾಡಬೇಕೆಂದು ಆಗಹಿಸಿ ಬಿಜೆಪಿ-ದಲಿತ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಮನವಿಸಲ್ಲಿಸಿದವು. ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಅಧಿವೇಶನದಲ್ಲಿ ಜನಪರ ಕಾಳಜಿಯುಳ್ಳ ನಾಯಕರು ೫೦ ಸಾವಿರ ಕೋಟಿ ರೂಗಳನ್ನು ಶಿಕ್ಷಣ, ರಸ್ತೆ, ಅರೋಗ್ಯ, ಉದ್ಯಮ ಸಾಲ, ಇತ್ಯಾದಿ ಅಭಿವೃದ್ದಿ ಕಾರ್ಯಕ್ರಮಗಳಿಗೆ ಮೀಸಲಾಗಿದ್ದ ಹಣವನ್ನು ನಕಲಿ ಗ್ಯಾರಂಟಿಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಧ್ವನಿ ಎತ್ತದ ದಲಿತರುಕೇವಲ ಒಂದು ಸಮುದಾಯದಿಂದ ಕಾಂಗ್ರೇಸ್ ಪಕ್ಷ ಅಧಿಕಾರ ಹಿಡಿದಂತೆ ತುಷ್ಠೀಕರಣದಲ್ಲಿ ತೊಡಗಿಸಿಕೊಂಡು ಮತ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿಸಿ ಕೊಂಡಿರುವುದನ್ನು ರಾಜ್ಯ ಗಮನಿಸುತ್ತಿದ್ದು ಮುಂದಿನ ಚುನಾವಣೆಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ರಾಜ್ಯದ ಕೋಲಾರ ಜಿಲ್ಲೆಯಲ್ಲಿ ದಲಿತ ಸಂಘಟನೆಗಳು ಹೆಚ್ಚಾಗಿದ್ದರೂ ಸಹ ಪರಿಶಿಷ್ಟ ಜಾತಿ/ಪಂಗಡದ ಎಸ್.ಟಿ.ಪಿ.ಎಸ್.ಟಿ. ಹಣ ದುರ್ಬಳಕೆ ವಿರುದ್ದ ಧ್ವನಿ ಎತ್ತದೆ ತಟಸ್ಥ ಧೋರಣೆ ಹೊಂದಿರುವುದು ಸಮಂಜಸವಲ್ಲ ಎಂದರು.
ಡಾ. ಅಂಬೇಡ್ಕರ್ ಮೀಸಲಾತಿ ತರದಿದ್ದರೆ ಇಂದು ದಲಿತರು, ಹಿಂದುಳಿದ ವರ್ಗಗಳಿಗೆ ಸೇರಿದವರು ಯಾರು ಅಧಿಕಾರಕ್ಕೆ ಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ಮೋದಿಯವರೇ ನೆನಪಿಸುವುದನ್ನು ಸ್ಮರಿಸಬೇಕು, ಪರಿಶಿಷ್ಟರ ಮೀಸಲು ಹಣವನ್ನು ಆಯಾಯ ನಿಗಮ ಮಂಡಳಿಗಳಿಗೆ ಹಿಂತಿರುಗಿಸಬೇಕು ಎಂದು ಒತ್ತಾಯಿಸಿದರು.ರಾಜ್ಯ ಸರ್ಕಾರ ದಿವಾಳಿ
ಗ್ಯಾರೆಂಟಿ ಗ್ಯಾರೆಂಟಿ ಎಂದು ಬಾಯಿ ಬಡಿದುಕೊಳ್ಳುವ ಕಾಂಗ್ರೇಸ್‌ನವರಿಗೆ ಮಹಿಳೆಯರಿಗೆ ಕನಿಷ್ಟ ೨ ಸಾವಿರ ರು.ಗಳನ್ನು ಪ್ರತಿ ತಿಂಗಳು ನೀಡುವ ಯೋಗ್ಯತೆ ಇಲ್ಲವಾಗಿದೆ. ಸರ್ಕಾರಿ ನೌಕರರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ. ಕೆ.ಎಸ್.ಆರ್.ಟಿ.ಸಿ. ನೌಕರರಿಗೆ ಕಳೆದ ೩೮ ತಿಂಗಳ ಪರಿಷ್ಕರಣಾ ವೇತನ ಬಾಕಿ ಉಳಿಸಿಕೊಂಡಿದ್ದಾರೆ. ಸರ್ಕಾರವು ದಿವಾಳಿಯಾಗಿದೆ ಎಂದರು.ನಿಗಮ, ಮಂಡಳಿಗೆ ಮುತ್ತಿಗೆ
ಇಂದು ಕೇವಲ ಸಾಂಕೇತಿಕವಾಗಿ ಪ್ರತಿಭಟಿಸಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿರುವ ೮ ನಿಗಮ ಮಂಡಳಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಮೂಲಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.ಆಡಳಿತ ನಡೆಸಲು ನೈತಿಕತೆಯಿಲ್ಲಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಬಾಯಿ ಮಾತಿನಲ್ಲಿ ಅಹಿಂದ ಪರ ಎಂದು ಬೊಗಳೆ ಬಿಡುತ್ತಾ ದಲಿತರಿಗೆ ಮತ್ತು ಹಿಂದುಳಿದವರ ವಿರುದ್ದವಾಗಿ ದ್ರೋಹ ಬಗೆದಿರುವುದು ರಾಜ್ಯದಲ್ಲಿ ಜನಜನಿತವಾಗಿದೆ. ಇಂತಹವರು ರಾಜ್ಯದ ಆಡಳಿತ ನಡೆಸಲು ಯಾವುದೇ ನೈತಿಕತೆ ಇಲ್ಲ. ಸಾರ್ವಜನಿಕರ ಹೋರಾಟಗಳಿಗೆ ಸ್ಪಂದಿಸದೆ ಪಂಚೇಂದ್ರೀಯಗಳನ್ನು ಕಾಂಗ್ರೆಸ್ ಸರ್ಕಾರ ಕಳೆದು ಕೊಂಡಿದೆ ಎಂದು ವ್ಯಂಗವಾಡಿದರು.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಬಿಜೆಪಿ ಪಕ್ಷವು ಮನವಿಪತ್ರ ಸಲ್ಲಿಸಿದರು. ಇದೇ ಸಂದರ್ಭಧಲ್ಲಿ ಸಂಸದ ಎಸ್.ಮುನಿಸ್ವಾಮಿ ಕೆಲಕಾಲ ತಮಟೆ ಬಾರಿಸುವ ಮೂಲಕ ಪ್ರತಿಭಟಿಸಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ವೈ.ಸಂಪಂಗಿ, ಜಿಲ್ಲಾ ಮಾಜಿ ಬಿಜೆಪಿ ಅಧ್ಯಕ್ಷ ವೇಣುಗೋಪಾಲ್, ಜಿಪಂ ಮಾಜಿ ಸದಸ್ಯ ಬಿ.ವಿ.ಮಹೇಶ್, ಮುಖಂಡರಾದ ಅಪ್ಪಿ ರಾಜು, ಶ್ರೀನಿವಾಸ್, ವೆಂಕಟೇಶ್, ಕಪಾಲಿ ಶಂಕರ್, ನಾಮಲ ಮಂಜುನಾಥ್, ಕೆಂಬೋಡಿ ನಾರಾಯಣಸ್ವಾಮಿ. ತಿಮ್ಮರಾಯಪ್ಪ, ರಾಜೇಶ್ ಸಿಂಗ್, ಅರುಣಮ್ಮ, ಮಮತಮ್ಮ, ಓಹೀಲೇಶ್, ಅಬ್ಬಣಿ ಲಕ್ಷ್ಮಣ್, ಆನಂದ್‌ಗೌಡ, ಸಾಮ ಬಾಬು ಇದ್ದರು.