ಬೆಂಗಳೂರು: ರಾಜ್ಯಾದ್ಯಂತ ಮಳೆ ಮುಂದುವರೆದಿದ್ದು, ಸೋಮವಾರದಿಂದ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಆದರೆ, ಆ.15 ರಿಂದ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಭಾರೀ ಮಳೆಯಾಗಿದೆ. ಸೋಮವಾರದಿಂದ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದ್ದು, ಅಲ್ಲಲ್ಲಿ ಸಾಧಾರಣ ಮಳೆ ಮುಂದುವರೆಯಲಿದೆ.
ಸ್ವಾತಂತ್ರ್ಯಾದಿನ ಬಳಿಕ ಮತ್ತೆ ಭಾರೀ ಮಳೆ
ಈ ತಿಂಗಳ 15ರಿಂದ ಕರಾವಳಿಯ ಮೂರು ಜಿಲ್ಲೆಗಳು ಸೇರಿ ಉತ್ತರ ಒಳನಾಡಿನ ವಿವಿಧ ಜಿಲ್ಲೆಗಳು ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಹವಾಮಾನ ವರದಿಯ ಪ್ರಕಾರ ಕಳೆದ 24 ಗಂಟೆಯಲ್ಲಿ ಗೌರಿಬಿದನೂರಿನಲ್ಲಿ ಅತಿ ಹೆಚ್ಚು 12 ಸೆಂ.ಮೀ ಮಳೆಯಾಗಿದೆ. ಅಫಜಲಪುರ 10, ತಾವರಗೆರ 9, ಬರಗೂರು 8, ಕೆರೂರು, ಕೆಂಬಾವಿ ಹಾಗೂ ಬಿಳಗಿಯಲ್ಲಿ ತಲಾ 7, ಹುನಗುಂದ, ಚಿಂಚೋಳಿ, ಬೆಳ್ಳಟ್ಟಿಯಲ್ಲಿ ತಲಾ 6, ಮಂಠಾಳ, ಹೊಸಪೇಟೆ, ಗಂಗಾವತಿ, ಗಾಣಗಪುರದಲ್ಲಿ ತಲಾ 5, ಸಿಂದಗಿ, ಮುದ್ದೇಬಿಹಾಳ, ಕೂಡಲಸಂಗಮದಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.