ಕನಿಷ್ಠ ವೇತನದಲ್ಲಿನ ತೀವ್ರ ಏರಿಕೆಯು ವ್ಯವಹಾರ, ಕೈಗಾರಿಕೆಗಳು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೆ ಗಮನಾರ್ಹ ಆರ್ಥಿಕ ಹೊರೆಯನ್ನು ಹೇರುತ್ತಿದ್ದು, ನಿರ್ಧಾರವನ್ನು ಮರುಪರಿಶೀಲಿಸಿ ಅಧಿಸೂಚನೆಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಬುಧವಾರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕನಿಷ್ಠ ವೇತನದಲ್ಲಿನ ತೀವ್ರ ಏರಿಕೆಯು ವ್ಯವಹಾರ, ಕೈಗಾರಿಕೆಗಳು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೆ ಗಮನಾರ್ಹ ಆರ್ಥಿಕ ಹೊರೆಯನ್ನು ಹೇರುತ್ತಿದ್ದು, ನಿರ್ಧಾರವನ್ನು ಮರುಪರಿಶೀಲಿಸಿ ಅಧಿಸೂಚನೆಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಬುಧವಾರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿಗೆ ಮನವಿ ಸಲ್ಲಿಸಿದರು.
ಕರ್ನಾಟಕದಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕೈಗಾರಿಕೆಗಳನ್ನು ರಕ್ಷಿಸಲು ತುರ್ತು ಹಸ್ತಕ್ಷೇಪಕ್ಕಾಗಿ ಸರ್ಕಾರಕ್ಕೆ ಜ್ಞಾಪಕ ಪತ್ರವನ್ನು ಉದ್ಯಮಿಗಳು ಸಲ್ಲಿಸಿದರು.
ಶಿವಮೊಗ್ಗ ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕಾ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ವೇತನ ಹೆಚ್ಚಳವು ಸಮರ್ಥನೀಯವಲ್ಲದ ಆರ್ಥಿಕ ಹೊರೆ ಹೆಚ್ಚಿಸುತ್ತದೆ. ವೇತನದಲ್ಲಿ ಕ್ರಮೇಣ ಹೆಚ್ಚಳ ವಿರೋಧಿಸುವುದಿಲ್ಲ. ಆದರೆ ಒಂದೇ ಬಾರಿಗೆ ಇಂತಹ ಗಣನೀಯ ಅಸಹಜ ಹೆಚ್ಚಳವನ್ನು ಜಾರಿಗೆ ತರುವುದರಿಂದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದರು.
ಕೈಗಾರಿಕಾ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ನಿಯೋಗದ ಕಾಳಜಿಗಳನ್ನು ಗಮನಿಸಬೇಕು. ಹಂತ ಹಂತವಾಗಿ ಅಥವಾ ತರ್ಕಬದ್ಧಗೊಳಿಸಿದ ವೇತನ ಅನುಷ್ಠಾನದ ಬಗ್ಗೆ ಚರ್ಚಿಸಲು ವಿವಿಧ ವ್ಯಾಪಾರ ಮತ್ತು ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಉನ್ನತ ಮಟ್ಟದ ಸಂವಾದ ನಡೆಸಬೇಕು ಎಂದು ಆಗ್ರಹಿಸಿದರು.
ಐಐಎಫ್ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಪರಿಷ್ಕೃತ ವೇತನವು ಶೇ. 60ರಷ್ಟು ಹೆಚ್ಚಳವಾಗಿದೆ. ಇಂತಹ ಹೆಚ್ಚಳ ಎಂಎಸ್‌ಎಂಇಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಉದ್ಯೋಗ ನಷ್ಟಕ್ಕೆ ಕಾರಣವಾಗಬಹುದು. ಭವಿಷ್ಯದ ಕೈಗಾರಿಕಾ ಹೂಡಿಕೆಗಳನ್ನು ನಿರುತ್ಸಾಹಗೊಳಿಸುತ್ತದೆ ಎಂದರು.
ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಜಿ.ಬೆನಕಪ್ಪ ಮಾತನಾಡಿ, ನಾಲ್ಕು ಪಟ್ಟು ಹೆಚ್ಚಾದ ಇಂಧನ ಬೆಲೆ ಏರಿಕೆಯು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೆ ಪರಿಣಾಮ ಬೀರಿದ್ದು, ಇಂತಹ ವೇತನ ಹೆಚ್ಚಳವು ಅನೇಕ ಸಮಸ್ಯೆಗಳಿಗೆ ಕಾರಣವಾಗಲಿದೆ. ನಿರ್ಧಾರ ಪರಿಶೀಲಿಸಿ ಅಧಿಸೂಚನೆ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ್, ನಿರ್ದೇಶಕರಾದ ವಿ.ಕೆ.ಜೈನ್, ಲಕ್ಷ್ಮೀದೇವಿ ಗೋಪಿನಾಥ್, ಪ್ರದೀಪ್ ಎಲಿ, ಪಿ.ರುದ್ರೇಶ್, ರವಿ ಪ್ರಕಾಶ್ ಜನ್ನಿ, ಮಾಜಿ ಅಧ್ಯಕ್ಷರಾದ ಅಶ್ವತ್ ನಾರಾಯಣ್ ಶೆಟ್ಟಿ, ಮಾಚೇನಹಳ್ಳಿ ಕೈಗಾರಿಕಾ ಸಂಘ, ಸಾಗರ ರಸ್ತೆ ಕೈಗಾರಿಕಾ ಸಂಘ, ಕಲ್ಲೂರು ಮಂಡಳಿ ಕೈಗಾರಿಕಾ ಸಂಘ, ಜಿಲ್ಲಾ ಕೈಗಾರಿಕಾ ಸಂಘ, ಎಸ್.ಎಸ್.ಜ್ಯೋತಿ ಪ್ರಕಾಶ್, ರಮೇಶ್ ಬಾಬು ಜಾದವ್, ರಾಜೇಶ್, ಕಿರಣ್, ಜವಳಿ ವರ್ತಕರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್, ಕೆ ಬಿ ಶಿವಕುಮಾರ್, ಸಂಯೋಜಿತ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಅನೇಕ ಕೈಗಾರಿಕೆ ಮತ್ತು ವಾಣಿಜ್ಯ ಉದ್ಯಮಿಗಳು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.