ಕನ್ನಡಪ್ರಭ ವಾರ್ತೆ ಬೀದರ್
ವಿವಿಧ ಬೇಡಿಕೆಗೆ ಆಗ್ರಹಿಸಿ ಬೀದರ್‌ನಲ್ಲಿ ಜಿಟಿ ಜಿಟಿ ಮಳೆಯಲ್ಲಿಯೇ ಕೊಡೆ (ಛತ್ರಿ) ಹಿಡಿದು ಅನುದಾನ ರಹಿತ ಖಾಸಗಿ ಶಾಲೆಗಳಿಂದ ಕನ್ನಡ ಶಾಲೆಗಳು ರಕ್ಷಿಸಿ-ಕನ್ನಡ ಉಳಿಸಿ ಎಂದು ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.ನಗರದ ಸಾಯಿ ಸ್ಕೂಲ್ ಆವರಣದಲ್ಲಿ ಎಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಪ್ರಮುಖರು ಸೇರಿಕೊಂಡು ಅಲ್ಲಿಂದ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಯ ಗೌರವಾಧ್ಯಕ್ಷ ರೇವಣಸಿದ್ದಪ್ಪ ಜಲಾದೆ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಬರೆದ ಮನವಿ ಸಲ್ಲಿಸಿದರು.
ಕಲ್ಯಾಣ-ಕರ್ನಾಟಕ ಭಾಗದ ಅನುದಾನ ರಹಿತ ಖಾಸಗಿ ಶಾಲೆಗಳನ್ನ 10 ವರ್ಷಗಳಿಗೊಮ್ಮೆ ನವೀಕರಣಗೊಳಿಸಬೇಕು, ಕೆಕೆಆರ್‌ಡಿಬಿಗೆ ನೀಡುವ ಅನುದಾನದಲ್ಲಿ ಶೇ.25 ರಷ್ಟು ಶಿಕ್ಷಣ ಇಲಾಖೆಗೆ ಮೀಸಲಿಡಬೇಕು. ಖಾಸಗಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು. ಅನುದಾನ ರಹಿತ ಖಾಸಗಿ ಶಾಲೆಗಳ ಕುಂದು ಕೊರತೆಗಳನ್ನ ಬಗೆಹರಿಸಬೇಕು ಎಂದು ಒತ್ತಾಯಿಸಿದರು.ಅನುಮತಿ ನವೀಕರಣ ಸರಳಗೊಳಿಸಿ, 15 ರಿಂದ 20 ವರ್ಷದಿಂದ ನಡೆಸುತ್ತಿರುವ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಿ, ಬಡ ಮಕ್ಕಳಿಗೆ ದಾರಿ ದೀಪವಾಗಿದ್ದ ಆರ್.ಟಿ.ಇ ಮರು ಜಾರಿಗೊಳಿಸಬೇಕು. ಸರ್ಕಾರದಿಂದ ಪ್ರಾರಂಭಿಸುತ್ತಿರುವ ಇಂಗ್ಲಿಷ ಮಾದ್ಯಮ ಶಾಲೆಗಳನ್ನು ಕೈ ಬಿಟ್ಟು ಸರ್ಕಾರಿ ಕನ್ನಡ ಶಾಲೆಗಳನ್ನು ರಕ್ಷಿಸಿ, ಅನಧಿಕೃತ ಕೋಚಿಂಗ್ ಸೆಂಟರ್‌ಗಳನ್ನು ಬಂದ್ ಮಾಡಿ, 371(ಜೆ) ಅಡಿ ಸಿಗಬೇಕಾದ ಎಲ್ಲ ಯೋಜನೆಗಳನ್ನು ಶಾಲೆಗಳಿಗೆ ನೀಡಿ, ಕನ್ನಡ ಶಾಲೆಗಳು ರಕ್ಷಿಸಿ, ಕರ್ನಾಟಕ ಉಳಿಸಿ ಎಂಬ ಬೇಡಿಕೆಗಳು ಮುಂದಿಟ್ಟುಕೊಂಡು ಕಲ್ಯಾಣ ಕರ್ನಾಟಕದ ಭಾಗದ ಎಲ್ಲ ಏಳು ಜಿಲ್ಲೆಗಳಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಗೂ ಮುನ್ನ ಸಾಯಿ ಶಾಲೆಯಲ್ಲಿ ನಡೆದ ಸಭೆಯಲ್ಲಿ ರಾಜೇಶ್ವರ ಶಿವಾಚಾರ್ಯರು, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಜ್ಞಾನಸುಧಾ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಿ., ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಸೇರಿದಂತೆ ಇನ್ನಿತರ ಪ್ರಮುಖರು ಭಾಗವಹಿಸಿದರು.ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ಮಣಗೇರಿ, ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಗುರುನಾಥ ರೆಡ್ಡಿ, ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಸಲಾವುದ್ದಿನ್ ಫರಾನ್, ಬೀದರ್ ತಾಲೂಕು ಅಧ್ಯಕ್ಷ ಸಂದೀಪ ಶಟಕಾರ, ವಿದ್ಯಾ ಭಾರತಿ ಜಿಲ್ಲಾಧ್ಯಕ್ಷ ಪ್ರೊ.ಎಸ್.ಬಿ ಸಜ್ಜನಶೆಟ್ಟಿ, ತಾಲೂಕು ಕಾರ್ಯದರ್ಶಿ ಗಣಪತಿ ಸೋಲಪುರೆ, ಮಾಧ್ಯಮಿಕ ಶಿಕ್ಷಣ ಸಂಘದ ಅಧ್ಯಕ್ಷ ಸಂತೋಷ ಮಂಗಳುರೆ, ಸಂಘದ ಮಾಧ್ಯಮ ವಕ್ತಾರ ಶರದ್ ಘಂಟೆ, ಹಾಗೂ ಇತರರು ಪಾಲ್ಗೊಂಡಿದ್ದರು.ತ್ರ 25ಬಿಡಿಆರ್52
ಬೀದರ್‌ನಲ್ಲಿ ಅನುದಾನ ರಹಿತ ಖಾಸಗಿ ಶಾಲೆಗಳಿಂದ ಕನ್ನಡ ಶಾಲೆಗಳು ರಕ್ಷಿಸಿ-ಕರ್ನಾಟಕ ಉಳಿಸಿ ಎಂದು ಗುರುವಾರ ಕೊಡೆ ಹಿಡಿದುಕೊಂಡು ಬೃಹತ್ ಪ್ರತಿಭಟನೆ ನಡೆಸಲಾಯಿತು.