ನದಿತಿರುವು ಯೋಜನೆ ಕೈಬಿಡಲು ಆಗ್ರಹ

KannadaprabhaNewsNetwork |  
Published : Sep 05, 2026, 02:15 AM IST
 | Kannada Prabha

ಸಾರಾಂಶ

ನದಿಗಳ ಸ್ವಾಭಾವಿಕ ಹರಿವಿಗೆ ಧಕ್ಕೆಯಾದರೆ ಕೆಳಭಾಗದಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ಅಗತ್ಯವಿರುವ ನೀರಿನ ಕೊರತೆ ಉಂಟಾಗುವ ಸಾಧ್ಯತೆಯಿದೆ.

ಕಾರವಾರ: ಜಿಲ್ಲೆಯಲ್ಲಿ ಪ್ರಸ್ತಾಪಿತವಾಗಿರುವ ಬೇಡ್ತಿ, ಗಂಗಾವಳಿ ಹಾಗೂ ಅಘನಾಶಿನಿ ನದಿತಿರುವು ಯೋಜನೆಗಳನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರವಾರ ನಗರ ಘಟಕದ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.ಜಿಲ್ಲೆಯ ರೈತರು, ಮೀನುಗಾರರು, ವನವಾಸಿಗಳು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಎರಡೂ ಯೋಜನೆಗಳನ್ನು ಕೈಬಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ನದಿ ತಿರುವು ಯೋಜನೆಗಳಿಂದ ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರ ವ್ಯವಸ್ಥೆ, ನದಿತೀರದ ಅರಣ್ಯ ಪ್ರದೇಶಗಳು ಹಾಗೂ ಕೃಷಿಭೂಮಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಬಿಜೆಪಿ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.ನದಿಗಳ ಸ್ವಾಭಾವಿಕ ಹರಿವಿಗೆ ಧಕ್ಕೆಯಾದರೆ ಕೆಳಭಾಗದಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ಅಗತ್ಯವಿರುವ ನೀರಿನ ಕೊರತೆ ಉಂಟಾಗುವ ಸಾಧ್ಯತೆಯಿದೆ. ಜತೆಗೆ ಸಮುದ್ರದ ಉಪ್ಪುನೀರು ನದಿಗೆ ನುಗ್ಗುವ ಅಪಾಯ ಹಾಗೂ ಅಂತರ್ಜಲ ಮರುಪೂರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈಗಾಗಲೇ ಭೂಕುಸಿತ ಸೇರಿದಂತೆ ಹಲವು ನೈಸರ್ಗಿಕ ಅಪಾಯಗಳನ್ನು ಎದುರಿಸುತ್ತಿರುವ ಪಶ್ಚಿಮಘಟ್ಟ ಪ್ರದೇಶದಲ್ಲಿ ಇಂತಹ ಯೋಜನೆಗಳಿಂದ ಪರಿಸರದ ಮೇಲೆ ಮತ್ತಷ್ಟು ಒತ್ತಡ ಉಂಟಾಗಬಹುದು ಎಂದು ಕಳವಳ ವ್ಯಕ್ತಪಡಿಸಲಾಗಿದೆ.ಬೇಡ್ತಿ(ಗಂಗಾವಳಿ) ಹಾಗೂ ಅಘನಾಶಿನಿ ನದಿಗಳು ಜಿಲ್ಲೆಯ ಪರಿಸರ ವ್ಯವಸ್ಥೆ, ಕೃಷಿ, ಮೀನುಗಾರಿಕೆ ಹಾಗೂ ಜನಜೀವನದೊಂದಿಗೆ ನಿಕಟ ಸಂಬಂಧ ಹೊಂದಿವೆ.

ಹೀಗಾಗಿ ನದಿಗಳ ಸ್ವಾಭಾವಿಕ ಹರಿವನ್ನು ಸಂರಕ್ಷಿಸುವುದು ಭವಿಷ್ಯದ ತಲೆಮಾರುಗಳ ಹಿತದೃಷ್ಟಿಯಿಂದ ಅಗತ್ಯವಾಗಿದ್ದು, ಪ್ರಸ್ತಾಪಿತ ನದಿತಿರುವು ಯೋಜನೆಗಳನ್ನು ಕೂಡಲೇ ಕೈಬಿಡಬೇಕು ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದರು.

ಬಿಜೆಪಿ ಉಪಾಧ್ಯಕ್ಷ ಸಂಜಯ ಸಾಳುಂಕೆ, ನಗರಸಭೆ ಮಾಜಿ ಅಧ್ಯಕ್ಷ ರವಿರಾಜ್ ಅಂಕೋಲೆಕರ, ಬಿಜೆಪಿ ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ, ನಗರಾಧ್ಯಕ್ಷ ನಾಗೇಶ್ ಕುರ್ಡೇಕರ, ಉದಯ ನಾಯ್ಕ ಅಮದಳ್ಳಿ, ಅಭಿ ಹರಿಕಂತ್ರ, ಹರೀಶ್ ನಾಗೇಕರ, ಉದಯ ಕಲ್ಗುಟ್ಕರ, ವಿಟೋಬಾ ನಾಯ್ಕ, ಗುರು ಸಾವಂತ, ಸಂಭಾಜಿ, ದಿಲೀಪ್ ನಾಯ್ಕ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಟ್ಟಿಹಳ್ಳಿ, ಹಿರೇಕೆರೂರು ತಾಲೂಕು ಬರಗಾಲ ಪೀಡಿತ ಪ್ರದೇಶ ಘೋಷಣೆಗೆ ಆಗ್ರಹ
ಚಳಿ, ಮಳೆ-ಗಾಳಿಯನ್ನದೆ ಪತ್ರಿಕೆ ವಿತರಣೆ ಮಾಡುವ ವಿತರಕರ ಸೇವೆ ನಿಜಕ್ಕೂ ಶ್ಲಾಘನೀಯ