
ಕಾರವಾರ: ತಾಲೂಕಿನ ಕೇರವಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸದೆ ಕಳಪೆ ಕಾಮಗಾರಿ ನಡೆಸಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರವಾರ ಗ್ರಾಮೀಣ ಘಟಕದ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಕೆರವಡಿ ಬಸ್ ನಿಲ್ದಾಣದಿಂದ ದೇವಳಿವಾಡದವರೆಗೆ ರಸ್ತೆ ಬದಿಯಲ್ಲಿ ಸುಮಾರು 400 ಮೀಟರ್ ಉದ್ದದ ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸದೇ ಅರ್ಧಕ್ಕೆ ನಿಲ್ಲಿಸಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಚರಂಡಿಯಲ್ಲಿ ನೀರು ಸರಾಗವಾಗಿ ಹರಿದುಹೋಗಲು ಅಗತ್ಯವಿರುವಷ್ಟು ಮಣ್ಣನ್ನು ತೆರವುಗೊಳಿಸದ ಕಾರಣ ಮಳೆ ಬಂದಾಗ ನೀರು ಚರಂಡಿಯಲ್ಲಿ ಸಂಗ್ರಹವಾಗಿ ರಸ್ತೆಯ ಮೇಲೆಯೇ ಹರಿಯುತ್ತಿದೆ. ಇದರಿಂದ ರಸ್ತೆ ಹದಗೆಟ್ಟಿದ್ದು, ಬೈಕ್ ಸವಾರರು, ಪಾದಚಾರಿಗಳು ಹಾಗೂ ಶಾಲಾ- ಕಾಲೇಜು ವಿದ್ಯಾರ್ಥಿಗಳು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ.ಇದಲ್ಲದೆ, ಮೂರು ಕಡೆ ಸಂಪರ್ಕ ಕಲ್ಪಿಸುವ ಓಣಿಗಳಿದ್ದರೂ, ಅವುಗಳ ಬಳಿ ಸ್ಲ್ಯಾಬ್ ಅಳವಡಿಸದಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಮತ್ತಷ್ಟು ಸಮಸ್ಯೆಯಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.ಚರಂಡಿ ಕಾಮಗಾರಿ ನಡೆದ ಸ್ಥಳವನ್ನು ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಕಾಮಗಾರಿಯಲ್ಲಿ ಲೋಪವೆಸಗಿರುವ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ನಿರ್ಲಕ್ಷ್ಯ ವಹಿಸಿರುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಅಪೂರ್ಣವಾಗಿರುವ ಚರಂಡಿ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸುವಂತೆ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.