ಮಡಿಕೇರಿ ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ಆಗ್ರಹ

KannadaprabhaNewsNetwork |  
Published : Aug 26, 2024, 01:38 AM IST
ಆಗ್ರಹ | Kannada Prabha

ಸಾರಾಂಶ

ನಗರಸಭೆ ತಕ್ಷಣ ಎಚ್ಚೆತ್ತುಕೊಂಡು ಜನವಸತಿಯಿಲ್ಲದ ಪ್ರದೇಶಗಳಲ್ಲಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ನಗರದ ಸಾಮಾಜಿಕ ಚಿಂತಕ ಎಚ್‌. ಎಂ. ಕೃಷ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ರಾಶಿ ರಾಶಿ ತ್ಯಾಜ್ಯವನ್ನು ಕಳೆದ ಅನೇಕ ವರ್ಷಗಳಿಂದ ಜ್ಯೋತಿ ನಗರದ ಸ್ಟೋನ್ ಹಿಲ್ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ಸುರಿಯಲಾಗುತ್ತಿದೆ. ಇದು ಮುಂದೊಂದು ದಿನ ನಗರಕ್ಕೆ ಅಪಾಯವನ್ನು ತಂದೊಡ್ಡಲ್ಲಿದ್ದು, ನಗರಸಭೆ ತಕ್ಷಣ ಎಚ್ಚೆತ್ತುಕೊಂಡು ಜನವಸತಿಯಿಲ್ಲದ ಪ್ರದೇಶದಲ್ಲಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ನಗರದ ಸಾಮಾಜಿಕ ಚಿಂತಕ ಎಚ್. ಎಂ. ಕೃಷ್ಣ ಒತ್ತಾಯಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪುರಸಭೆಯಾಗಿದ್ದ ಮಡಿಕೇರಿ, ನಗರಸಭೆಯಾಗಿ ಮೇಲ್ದರ್ಜೆಗೇರಿದರೂ ಇಲ್ಲಿಯವರೆಗೆ ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ನಗರದಲ್ಲಿ ಸಂಗ್ರಹವಾಗುವ ಟನ್ ಗಟ್ಟಲೆ ಕಸವನ್ನು ಕುಡಿಯುವ ನೀರಿನ ಟ್ಯಾಂಕ್ ಇರುವ ಸ್ಟೋಲ್ ಹಿಲ್ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಇದು ಸುತ್ತಲಿನ ಪರಿಸರವನ್ನು ಕಲುಷಿತಗೊಳಿಸಿದೆಯಲ್ಲದೆ, ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿಯನ್ನು ಎದುರಿಸುತ್ತಿದ್ದಾರೆ ಎಂದರು.

ಕಸದ ರಾಶಿಯ ಪರಿಣಾಮ ಮುಂದೊಂದು ದಿನ ಈ ಬೆಟ್ಟ ಪ್ರದೇಶ ಕುಸಿಯಲೂಬಹುದು. ಅನಾಹುತ ಎದುರಾಗುವ ಮೊದಲು ನಗರಸಭೆ ಗಾಳಿಬೀಡಿನ 2ನೇ ಮೊಣ್ಣಂಗೇರಿಯಲ್ಲಿ ಗುರುತಿಸಿರುವ ಜಾಗದ ತಾಂತ್ರಿಕ ಅಡಚಣೆಗಳನ್ನು ಸರಿಪಡಿಸಿ ವೈಜ್ಞಾನಿಕ ರೂಪದಲ್ಲಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಖುದ್ದು ಆಸಕ್ತಿ ವಹಿಸಿ ಮಧ್ಯಪ್ರವೇಶ ಮಾಡಬೇಕು ಎಂದು ಕೋರಿಕೊಂಡಿರುವುದಾಗಿ ತಿಳಿಸಿದರು.

ನೀರಿನ ಟ್ಯಾಂಕ್ ಇರುವ ಸ್ಟೋಲ್ ಹಿಲ್ ಪ್ರದೇಶದಲ್ಲಿ ಕಸ ವಿಲೇವಾರಿ ಮಾಡುತ್ತಿರುವುದು ನಿಯಮಬಾಹಿರ ಕ್ರಮವಾಗಿದೆ. ಇಲ್ಲಿನ ಅವ್ಯವಸ್ಥೆಗಳ ಬಗ್ಗೆ ಸರ್ಕಾರಕ್ಕೆ ಸಮಗ್ರ ವರದಿಯನ್ನು ಸಲ್ಲಿಸಿ ಹೈಟೆಕ್ ವ್ಯವಸ್ಥೆಗೆ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಬೇಕು. ಜನಪ್ರತಿನಿಧಿಗಳು ಈ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಎಚ್.ಎಂ.ಕೃಷ್ಣ ಒತ್ತಾಯಿಸಿದರು.

ಇತ್ತೀಚೆಗೆ ಸಿದ್ದಾಪುರ ಗ್ರಾ.ಪಂ ಭಾಗದಲ್ಲೂ ಕಸ ವಿಲೇವಾರಿ ಸಮಸ್ಯೆ ಕಗ್ಗಂಟಾಗಿದ್ದು, ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳು ಕಸದ ರಾಶಿಯನ್ನು ಗ್ರಾ.ಪಂ. ಎದುರು ಹಾಕಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಗ್ರಾ.ಪಂ ತಕ್ಷಣ ಸರ್ಕಾರಿ ಜಾಗವನ್ನು ಗುರುತಿಸಿ ಅಥವಾ ಖಾಸಗಿ ಜಾಗವನ್ನು ಖರೀದಿ ಮಾಡಿ ಕಸ ವಿಲೇವಾರಿಗೆ ವೈಜ್ಞಾನಿಕ ರೂಪ ನೀಡಬೇಕು ಎಂದು ಮನವಿ ಮಾಡಿದರು.

ಪಕ್ಕದ ಕೇರಳ ರಾಜ್ಯದ ವಯನಾಡಿನಲ್ಲಿ ನಡೆದ ಜಲಸ್ಫೋಟ ಮತ್ತು ಭೂಕುಸಿತದ ಮಾದರಿಯ ಅನಾಹುತಗಳು ಕೊಡಗು ಜಿಲ್ಲೆಯಲ್ಲೂ ಸಂಭವಿಸುವ ಅಪಾಯವಿದೆ ಎಂದು ಅಭಿಪ್ರಾಯಪಟ್ಟ ಕೃಷ್ಣ ಅವರು, ಯಾವುದೇ ಕಾರಣಕ್ಕೂ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಬೃಹತ್ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ನೀಡಬಾರದು ಮತ್ತು ಪ್ರಕೃತಿಗೆ ವಿರುದ್ಧವಾದ ಯೋಜನೆಗಳನ್ನು ರೂಪಿಸಬಾರದು ಎಂದು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ